

ಹಾವೇರಿ: ಗಣಪತಿ ಹಬ್ಬದ ಆಚರಣೆಯಿಂದ ಸನಾತನ ಧರ್ಮ ರಕ್ಷಣೆಯ ಬಗ್ಗೆ ಯುವಕರಲ್ಲಿ ಅರಿವು ಮೂಡಿಸುತ್ತಿದೆ. ಸನಾತನ ಧರ್ಮ ಉಳಿದರೆ ಸಂವಿಧಾನ ಉಳಿಯುತ್ತದೆ. ಇಲ್ಲದಿದ್ದರೆ ಸಂವಿಧಾನ ಉಳಿಯುವುದಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಭಿಪ್ರಾಯಪಟ್ಟರು.
ನಗರದ ಸುಭಾಷ ಸರ್ಕಲ್‌ನಲ್ಲಿ ಬುಧವಾರ ಹಾವೇರಿ ಕಾ ರಾಜ ಗಜಾನನ ಉತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ ಹಿಂದು ಜನಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.
ಸನಾತನ ಧರ್ಮದ ರಕ್ಷಣೆ ಮಠಾಧೀಶರು ಮತ್ತು ಸ್ವಾಮೀಜಿಗಳ ಆದ್ಯ ಕರ್ತವ್ಯ. ಆದರೆ, ಕೆಲ ಸ್ವಾಮೀಜಿಗಳು ಶಾಲೆ, ಕಾಲೇಜುಗಳನ್ನು ಕಟ್ಟಿ, ಮಂತ್ರಿಗಳ ಮನೆಗಳಿಗೆ ಓಡಾಡುತ್ತಿರುತ್ತಾರೆ. ಮಠಗಳಿಗೆ ಅನುದಾನ ಕೊಡಿ ಎಂದು ಗೋಗರೆಯುತ್ತಾರೆ. ಸ್ವಾಲಿನ್ ಪುತ್ರ ಉದಯನಿಧಿ ಸನಾತನ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾನೆ. ಅದನ್ನು ನಮ್ಮ ಸ್ವಾಮೀಜಿಗಳು ಖಂಡಿಸಬೇಕು ಎಂದರು.
ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿದ್ದ ನೆಗಳೂರಿನ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಮಾಜಿ ಶಾಸಕ ಶಿವರಾಜ ಸಜ್ಜನರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ, ಗವಿಸಿದ್ದಪ್ಪ ದ್ಯಾಮಣ್ಣವರ, ಪ್ರಕಾಶ ಬುರುಡಿಕಟ್ಟಿ, ಮಲ್ಲಿಕಾರ್ಜುನ ನರಗುಂದ, ಸಂತೋಷ ಆಲದಕಟ್ಟಿ, ಗಂಗಾಧರ ಕುಲಕರ್ಣಿ, ಗಜಾನನ ಉತ್ಸವ ಸಮಿತಿ ಮುಖಂಡರು, ಪದಾಧಿಕಾರಿಗಳು ಹಾಜರಿದ್ದರು.
ಗುಲಾಮಗಿರಿ ತೊಲಗಲಿ
ಬ್ರಿಟಿಷರ ಗುಲಾಮಗಿರಿಯ ಸಂಕೇತ ಹೋಗಬೇಕೆಂದೇ ಪ್ರಧಾನಿ ಮೋದಿ ಅವರು ರಾಜಪಥವನ್ನು ಕರ್ತವ್ಯಪಥ ಎಂದು ಹೆಸರು ಬದಲಾಯಿಸಿದರು. ಇಂಡಿಯಾ ಬದಲಾಗಿ ಭಾರತ ಎಂದು ಹೆಸರಿಟ್ಟರು. ಹೊಸ ಸಂಸತ್ ಭವನದಲ್ಲಿ ಹೋಮ ಮಾಡಿದರೆ, ರಾಜದಂಡ ಬಳಸಿದರೆ ಎಲ್ಲದಕ್ಕೂ ವಿರೋಧ ಪಕ್ಷದವರು ವಿವಾದ ಸೃಷ್ಟಿಸುತ್ತಾರೆ ಎಂದು ಯತ್ನಾಳ ಆರೋಪಿಸಿದರು.
ಕೋಟ್
ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಜಗತ್ತಿನಲ್ಲಿ 5ನೇ ಆರ್ಥಿಕ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ. ಭಯೋತ್ಪಾದನೆಗೆ ಕಡಿವಾಣ ಬಿದ್ದಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಸ್ವಚ್ಛ ಸನಾತನ ಧರ್ಮದ ಸರ್ಕಾರ ರಚನೆಯಾಗಬೇಕು. ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು.
ಬಸನಗೌಡ ಪಾಟೀಲ ಯತ್ನಾಳ, ಶಾಸಕ