

ಹಾವೇರಿ: ಎಲ್ಲರೂ ತಮ್ಮ ಕೆಲಸವನ್ನು ಪ್ರಾಮಾಣಿಕ ಹಾಗೂ ನಿಷ್ಠೆಯಿಂದ ಮಾಡಬೇಕು. ಭ್ರಷ್ಟಾಚಾರ ಮುಕ್ತ ಜಿಲ್ಲೆಗೆ ಎಲ್ಲರೂ ಸಂಕಲ್ಪ ಮಾಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಕೆ.ಸಿ.ಸದಾನಂದ ಸ್ವಾಮಿ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಲೋಕಾಯುಕ್ತ, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರ್ನಾಟಕ ಲೋಕಾಯುಕ್ತ ಹಾವೇರಿ ಘಟಕದ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನ್ಯಾಯಾಲಯಗಳಲ್ಲಿ ಸರ್ಕಾರಿ ನೌಕರರ ಪ್ರಕರಣಗಳು ವಿಚಾರಣೆಗೆ ಬಂದಾಗ ವಿಷಾಧವೆನಿಸುತ್ತದೆ. ಶೇ.40ರಷ್ಟು ಲಂಚದ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ನಮ್ಮ ಬೇಡಿಕೆಗಳನ್ನು ಕಡಿಮೆ ಮಾಡಿಕೊಳ್ಳಬೇಕು. ಭ್ರಷ್ಟಾಚಾರ ಪ್ರಕರಣಗಳಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗಿ ಹೋಗುತ್ತಾರೆ. ಒಬ್ಬರು ಮಾಡಿದ ತಪ್ಪಿಗೆ ಇಡಿ ಕುಟುಂಬದ ಮೇಲೆ ಪರಿಣಾಮ ಉಂಟಾಗುತ್ತದೆ, ಇದನ್ನು ಅರಿತುಕೊಂಡು ಕೆಲಸ ಮಾಡಬೇಕು ಎಂದರು.
ಭ್ರಷ್ಟಾಚಾರ ತಡೆಗೆ ಅನೇಕ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕು. ಬರುವ ಸಂಬಳದಲ್ಲೇ ನೆಮ್ಮದಿ ಜೀವನ ನಡೆಸಬೇಕು. ಕಚೇರಿ ಕೆಲಸದ ಸಮಯದಲ್ಲಿ ಕೆಲಸದ ಫೋನ್ ಕರೆಗಳ ಹೊರತಾಗಿ ಬೇರೆ ಕರೆಗಳಲ್ಲಿ ಹೆಚ್ಚಾಗಿ ಮಾತನಾಡಬಾರದು. ಕೆಲಸದ ಬಗ್ಗೆ ಗಮನ ನೀಡಬೇಕು. ನೀವು ಮಾತನಾಡುವ ಕರೆಗಳು, ಆಡಿಯೋ ರೆಕಾರ್ಡ್ ಆಗಬಹುದು ಹಾಗೂ ಹ್ಯಾಕ್ ಆಗುವ ಮೂಲಕ ಸೈಬರ್ ಕ್ರೈಂಗಳು ನಡೆಯಬಹುದು. ಈ ಹಿನ್ನೆಲೆಯಲ್ಲಿ ಕೆಲಸದ ಸಮಯದಲ್ಲಿ ಮೊಬೈಲ್ ಬಳಕೆ ಕಡಿಮೆ ಮಾಡಿದರೆ ಭ್ರಷ್ಟಾಚಾರ ಮೊದಲ ಹಂತ ತಡೆದಂತೆ. ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಭ್ರಷ್ಟಾಚಾರ ಮೊದಲು ಸರ್ಕಾರಿ ಸಂಸ್ಥೆಗಳಲ್ಲಿ ಮಾತ್ರ ಕಾಣಿಸುತ್ತಿತ್ತು. ಈಗ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಸಹ ಕಾಣಿಸುತ್ತಿದೆ. ಕಚೇರಿಗಳಿಗೆ ಹೆಚ್ಚಾಗಿ ಜನ ಸಾಮಾನ್ಯರು ಬರುತ್ತಾರೆ. ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುವವರು ಅವರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಹಾಗೂ ಕಾಲಮಿತಿಯೊಳಗೆ ಅವರಿಗೆ ಕೆಲಸ ಮಾಡಿಕೊಡಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ಮಾತನಾಡಿ, ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು, ಕೆಲಸದಲ್ಲಿ ವಿಳಂಬ ಮಾಡಬಾರದು. ಜಿಲ್ಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಂದು ವೇಳೆ ನಿಮಗೆ ಹೆದರಿಸಲು ಕರೆಗಳು ಬಂದರೆ ಅಂಥವರ ವಿರುದ್ಧ ದೂರು ನೀಡಿ ಎಂದರು.
ಕರ್ನಾಟಕ ಲೋಕಾಯುಕ್ತ ದಾವಣಗೆರೆ ಪೊಲೀಸ್ ಅಧೀಕ್ಷಕ ಎಂ.ಎಸ್.ಕೌಲಾಪುರ ಅವರು ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಬಾಲಮುಕುಂದ ರಮೇಶರಾವ ಮುತಾಲಿಕದೇಸಾಯಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಶ್ರೀಮತಿ ಮಮತಾ ಹೊಸಗೌಡ್ರ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಚ್.ಜತ್ತಿ ಹಾಗೂ ಕಾರ್ಯದರ್ಶಿ ಪಿ.ಎಸ್.ಹೆಬ್ಬಾಳ ಉಪಸ್ಥಿತರಿದ್ದರು.
ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್. ಅವರು ಸ್ವಾಗತಿಸಿದರು. ಶಿಕ್ಷಕ ನಾಗರಾಜ ನಡುವಿನಮಠ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ಲೋಕಾಯುಕ್ತ ಹಾವೇರಿ ಪೊಲೀಸ್ ನಿರೀಕ್ಷಕ ಮಂಜುನಾಥ ಪಂಡಿತ ವಂದಿಸಿದರು.
ಬೆಂಗಳೂರು ನಂತರ ಹಾವೇರಿಯಲ್ಲಿ ಹೆಚ್ಚು ಕೇಸ್ !
ರಾಜ್ಯದಲ್ಲಿ ಬೆಂಗಳೂರಿನ ನಂತರ ಹಾವೇರಿ ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ಭ್ರಷ್ಟಾಚಾರ ಪ್ರಕರಣಗಳು ಹೆಚ್ಚಾಗಿ ದಾಖಲಾಗಿವೆ. ಭ್ರಷ್ಟಾಚಾರ ತಡೆಗೆ ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು ಹಾಗೂ ನಮ್ಮ ಜೀವನ ಶೈಲಿ ಬದಲಾಗಬೇಕಾಗಿದೆ. ಕರ್ನಾಟಕ ಲೋಕಾಯುಕ್ತ ಹೆಸರು ಹೇಳಿ ಲಂಚ ಕೇಳುವ ದೂರುಗಳು ಕೇಳಿಬಂದಿವೆ. ಇಂತಹ ಪ್ರಕರಣಗಳು ಕಂಡುಬಂದರೆ ಕೂಡಲೇ ದೂರು ನೀಡಬೇಕು ಎಂದು ಲೋಕಾಪಯುಕ್ತ ಡಿವೈಎಸ್‌ಪಿ ಡಾ.ಚಂದ್ರಶೇಖರ ಬಿ.ಪಿ. ಹೇಳಿದರು.