ಕೆಆರ್‌ಎಸ್ ಪಕ್ಷಕ್ಕೆ ಜೆಡಿಯು ಬೆಂಬಲ; ಮಾಜಿ ಸಿಎಂ ಜೆ.ಎಚ್.ಪಟೇಲರ ಪುತ್ರ ಮಹಿಮಾ ಪಟೇಲ್ ಹೇಳಿಕೆ

21 Mahima Patel
Published on

ಹಾವೇರಿ: ಪ್ರಾಮಾಣಿಕ ಸೇವೆಯಾಗಬೇಕಿರುವ ರಾಜಕಾರಣ ಇಂದಿನ ದಿನಗಳಲ್ಲಿ ದಂಧೆಯಾಗಿ ಪರಿವರ್ತನೆಯಾಗುತ್ತಿದೆ. ಈ ವ್ಯವಸ್ಥೆ ಬದಲಾವಣೆಗೊಂಡು ಪಾರದರ್ಶಕ ಆಡಳಿತ ವ್ಯವಸ್ಥೆ ಜಾರಿಗೊಳ್ಳಬೇಕು ಎಂಬ ಉದ್ದೇಶದಿಂದ ಕೆಆರ್‌ಎಸ್ ಪಕ್ಷಕ್ಕೆ ಬೆಂಬಲ ನೀಡಿದ್ದೇನೆ ಎಂದು ಜೆಡಿಯು ಪಕ್ಷದ ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ತಂದೆ ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ ಜನಪರವಾದ ಹಾದಿಯಲ್ಲಿಯೇ ನಾನೂ ನಡೆಯುತ್ತಿದ್ದೇನೆ. ರಾಜಕಾರಣ ಎಂಬುದು ಆರೋಗ್ಯ, ಶಿಕ್ಷಣ, ಪರಿಸರ ಹಾಗೂ ಅಧಿಕಾರ ವಿಕೇಂದ್ರಿಕರಣಕ್ಕೆ ಒತ್ತುಕೊಟ್ಟು ಕೆಲಸ ಮಾಡುವಂತಹದ್ದು. ಆದರೆ, ಇಂದು ಜಾತಿ, ಹಣ, ಧರ್ಮದ ಆಧಾರದ ಮೇಲೆ ನಡೆಯುತ್ತಿದೆ. ಇದು ಭವಿಷ್ಯದಲ್ಲಿ ಉತ್ತಮ ಸಮಾಜ ಕಟ್ಟುವ ಪರಿಕಲ್ಪನೆಗೆ ಹೊಡೆತ ನೀಡಲಿದೆ. ಈ ಹಿನ್ನೆಲೆಯಲ್ಲಿ ರಾಜಕಾರಣ ಹಣ, ಜಾತಿ, ಧರ್ಮದಿಂದ ಮುಕ್ತವಾಗಿ ಪಾರದರ್ಶಕ ಚುನಾವಣೆಗಳು ನಡೆಯುವಂತಾಗಬೇಕು ಎಂದರು.
ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಆಡಳಿತ ಜಾರಿಗೊಳಿಸುವ ನಿಟ್ಟಿನಲ್ಲಿ ಕೆಆರ್‌ಎಸ್ ಪಕ್ಷ ಶ್ರಮಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಈ ಪಕ್ಷಕ್ಕೆ ಬೆಂಬಲ ನೀಡಿದ್ದೇನೆ. ರಾಜಕೀಯ ವ್ಯವಸ್ಥೆಯಲ್ಲಿ ಪರಿವರ್ತನೆ ತರುವ ಉದ್ದೇಶದೊಂದಿಗೆ ರವಿಕೃಷ್ಣಾ ರೆಡ್ಡಿ ಕೆಲಸ ಮಾಡುತ್ತಿದ್ದು, ಇಂಥವರನ್ನು ಜನ ಬೆಂಬಲಿಸುವುದು ಅಗತ್ಯವಾಗಿದೆ. ಮುಂಬರುವ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜನರು ಕೆಆರ್‌ಎಸ್ ಪಕ್ಷ ಬೆಂಬಲಿಸುವ ಮೂಲಕ ರಾಜಕಾರಣದಲ್ಲಿ ಪಾರದರ್ಶಕತೆ ತರಲು ನಾಂದಿ ಹಾಡಬೇಕು ಎಂದು ಕರೆ ನೀಡಿದರು.
ಬಸವಲಿಂಗಪ್ಪ ಶಿವನಕೆರೆ ಮಾತನಾಡಿ, ಧರ್ಮ ಮತ್ತು ರಾಜಕೀಯ ಎಂಬ ಎರಡೂ ಅಂಶಗಳು ಇಂದು ಸಮಾಜವನ್ನು ಆಳುತ್ತಿವೆ. ಇಂದಿನ ರಾಜಕಾರಣಕ್ಕೆ ಸಭ್ಯ ಜನರು ಬರುವುದು ಕಡಿಮೆಯಾಗಿದ್ದು, ಹಣ ಹಾಗೂ ಜಾತಿ ಆಧಾರದ ಮೇಲೆ ರಾಜಕಾರಣ ನಡೆಯುತ್ತಿದೆ. ಇದರಿಂದಾಗಿ ಎಲ್ಲ ಪಕ್ಷಗಳಲ್ಲಿ ಅರಾಜಕತೆ ಸೃಷ್ಟಿಯಾಗುತ್ತಿದೆ. ಇದಕ್ಕೆ ಕೊನೆಹಾಡಿ ರಾಜಕಾರಣದಲ್ಲಿ ಪಾರದರ್ಶಕತೆ ಆದ್ಯತೆ ನೀಡುವ ಪಕ್ಷವನ್ನು ಬೆಂಬಲಿಸುವುದು ಅಗತ್ಯವಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೆಆರ್‌ಎಸ್ ಪಕ್ಷ ಉಪಾಧ್ಯಕ್ಷ ಲಿಂಗೇಗೌಡ, ಚರಣರಾಜ ರೊಡ್ಡನವರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net