ಹಾವೇರಿ: ಕೇಂದ್ರ ಸರ್ಕಾರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಮಧ್ಯಮ ವರ್ಗದ ಜನರಿಗೆ ರೈತರಿಗೆ ತುಂಬಾ ಅನುಕೂಲಕರವಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣವರ ಹೇಳಿದ್ದಾರೆ.
ಕುಶಲಕರ್ಮಿಗಳಿಗೆ ಹೆಚ್ಚಿನ ನೆರವು, ಹೊಸ ಮೆಡಿಕಲ್ ಕಾಲೇಜುಗಳಿಗೆ ಒತ್ತು, ಉನ್ನತ ಶಿಕ್ಷಣಕ್ಕಾಗಿ 10 ಲಕ್ಷ ರೂ.ವರೆಗೆ ಸಾಲ, ಪ್ರತಿ ವರ್ಷ ಒಂದು ಲಕ್ಷ ವಿದ್ಯಾರ್ಥಿಗಳ ನೇರಸಾಲ ಸೌಲಭ್ಯ ನೀಡುವುದು, ಗ್ರಾಮೀಣ ಅಭಿವೃದ್ಧಿಗೆ 2.66 ಲಕ್ಷ ಕೋಟಿ ಮೀಸಲಿಟ್ಟಿರುವುದು, ಕೃಷಿ ಕ್ಷೇತ್ರಕ್ಕೆ 1.53 ಲಕ್ಷ ಕೋಟಿ ರೂ. ಮೀಸಲಿಟ್ಟಿರುವುದು ಸ್ವಾಗತಾರ್ಹ.
ರೈತರ ಅನುಕೂಲಕ್ಕಾಗಿ ಡಿಜಿಟಟ್ ಬೆಳೆ ಸರ್ವೆ ಸಮೀಕ್ಷೆ, ಕಿಸಾನ್ ಕ್ರೆಡಿಟ್ ಕಾರ್ಡ್ ನೀಡುವ ಯೋಜನೆ ರೈತರಿಗೆ ಕಷ್ಟದ ಸಮಯದಲ್ಲಿ ಉಪಕಾರಿಯಾಗುತ್ತದೆ. ಬಜೆಟ್‌ನಲ್ಲಿ ಸಾವಯವ ಕೃಷಿಗೆ ಒತ್ತು ನೀಡಲಾಗಿದೆ. ವಿವಿಧ ವಸ್ತುಗಳ ಮೇಲೆ ತೆರಿಗೆ ಇಳಿಸಿ ಮಧ್ಯಮ ವರ್ಗದ ಜನರ ಹೊರೆಯನ್ನು ಕಡಿಮೆ ಮಾಡಿದೆ. ಹಾಗೂ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 3 ಕೋಟಿ ಮನೆ ನಿರ್ಮಾಣದ ಗುರಿಯನ್ನು ಇಟ್ಟುಕೊಂಡಿರುವುದು ಉತ್ತಮ ನಡೆಯಾಗಿದೆ ಎಂದು ಗೌಡಶಿವಣ್ಣವರ ಪ್ರಕಟಣೆ ಮೂಲಕ ತಿಳಿಸಿದ್ದಾರೆ.