ಜೆಡಿಎಸ್‌ನಿಂದ ಧರ್ಮಸ್ಥಳ ಚಲೋ ಆ.31ರಂದು; 50ಕ್ಕೂ ಅಧಿಕ ಕಾರುಗಳ ಮೂಲಕ ಶ್ರೀಕ್ಷೇತ್ರಕ್ಕೆ ರ್ಯಾಲಿ; ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ

Manjunath Gowdashivannavar 2
Published on

ಹಾವೇರಿ: ಹಿಂದುಗಳ ಧಾರ್ಮಿಕ ಶ್ರದ್ದಾ ಕೇಂದ್ರ ಶ್ರೀ ಧರ್ಮಸ್ಥಳ ಕ್ಷೇತ್ರ ಹಾಗೂ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರಿಗೆ ಬೆಂಬಲ ನೀಡುವ ಉದ್ದೇಶದಿಂದ ಜೆಡಿಎಸ್ ರಾಜ್ಯ ಘಟಕದಿಂದ ಆ.31ರಂದು ಕರೆ ನೀಡಿರುವ ಧರ್ಮಸ್ಥಳ ಚಲೋ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ 50ಕ್ಕೂ ಅಧಿಕ ಕಾರುಗಳ ಮೂಲಕ ರ‌್ಯಾಲಿ ಮೂಲಕ ತೆರಳಲಾಗುವುದು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಹೇಳಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಮಾತನಾಡಿದ ಅವರು, ಜಿಲ್ಲೆಯಿಂದ ನೂರಾರು ಕಾರ್ಯಕರ್ತರು ಸುಮಾರು 50 ಕಾರುಗಳ ಮೂಲಕ ಬೆಳಗ್ಗೆ 5 ಗಂಟೆಗೆ ಹಾನಗಲ್ಲ, ಹಾವೇರಿ, ಬ್ಯಾಡಗಿ, ರಾಣೆಬೆನ್ನೂರ, ದಾವಣಗೆರೆ, ಹಾಸನ ಮಾರ್ಗವಾಗಿ ಧರ್ಮಸ್ಥಳದ ನೇತ್ರಾವತಿ ನದಿ ಸ್ನಾನಘಟ್ಟ ತಲುಪಲಾಗುವುದು. ಅಲ್ಲಿಂದ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಎಲ್ಲ ಜಿಲ್ಲೆಗಳ ಸಾವಿರಾರು ಕಾರ್ಯಕರ್ತರು ಸೇರಿ ಶ್ರೀ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಸನ್ನಿಧಿವರೆಗೆ ಪಾದಯಾತ್ರೆ ಮೂಲಕ ತೆರಳಲಾಗುವುದು. ಈ ಮೂಲಕ ಕ್ಷೇತ್ರಕ್ಕೆ ಹಾಗೂ ವೀರೇಂದ್ರ ಹೆಗ್ಗಡೆ ಅವರಿಗೆ ಬೆಂಬಲಿಸಲಾಗವುದು ಎಂದರು.

ಧರ್ಮಸ್ಥಳ ದೇವಸ್ಥಾನದ ಬಗ್ಗೆ ದೊಡ್ಡ ಹುನ್ನಾರ ನಡೆದಿದೆ. ನಾವೆಲ್ಲ ಧರ್ಮಸ್ಥಳ ಕ್ಷೇತ್ರದ ಜತೆಗೆ ಇದ್ದೇವೆ. ಧರ್ಮಸ್ಥಳ ಕ್ಷೇತ್ರ ನೂರಾರು ವರ್ಷಗಳಿಂದ ನಮ್ಮ ನಾಡಿನ ಪವಿತ್ರ ಧಾರ್ಮಿಕ ಶ್ರದ್ದಾ ಕೇಂದ್ರವಾಗಿದೆ. ನಾಡಿನ ಲಕ್ಷಾಂತರ ಜನರು ತಮ್ಮ ಮಕ್ಕಳಿಗೆ ಮಂಜುನಾಥ ಸ್ವಾಮಿಯ ಹೆಸರು ಇಟ್ಟಿದ್ದಾರೆ. ನನ್ನ ಹೆಸರು ಕೂಡ ಮಂಜುನಾಥ. ಧರ್ಮಸ್ಥಳದಲ್ಲಿ ನನ್ನ ಜವಳ ಕಾರ್ಯಕ್ರಮ ಮಾಡಿದ್ದಾರೆ ನನ್ನ ಪಾಲಕರು. ಇಂತಹ ಧಾರ್ಮಿಕ ಭಾವನೆ ಹೊಂದಿರುವ ಕ್ಷೇತ್ರದ ಬಗ್ಗೆ ಯಾರು ಮಾತನಾಡಿದರೂ ನಾವು ಸಹಿಸಲ್ಲ ಎಂದರು.

ಪಕ್ಷದ ಜಿಲ್ಲಾ ಉಪಾಧ್ಯಕ್ಷ ಸತೀಶ ಮಾಳದಕರ, ಹಾನಗಲ್ಲ ಅಧ್ಯಕ್ಷ ರಾಮನಗೌಡ ಪಾಟೀಲ, ಕೆ.ಎಸ್.ಸಿದ್ದಬಸಪ್ಪ ಯಾದವ, ಈರಣ್ಣ ನವಲಗುಂದ, ಬಿ.ಸಿ.ಗುದ್ದಲಿಶೆಟ್ಟರ, ನಾಗರಾಜ ಚವ್ಹಾಣ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net