ಹಿಂಗಾರು ಬಿತ್ತನೆಗೂ ಬರಸಿಡಿಲು; ಮಳೆ ಜತೆಗೆ ಕೈಕೊಟ್ಟ ಹಿಬ್ಬನಿ; ಶೇ.50ರಷ್ಟೂ ಬಿತ್ತನೆ ಕಾಣದೇ ಅನ್ನದಾತ ತತ್ತರ

Hingaru Bittane story
Published on

ಕೇಶವಮೂರ್ತಿ ವಿ.ಬಿ. ಹಾವೇರಿ
ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರಾಜ್ಯ ಎಂದೂ ಕಾಣದ ಭೀಕರ ಬರಕ್ಕೆ ತುತ್ತಾಗಿರುವ ಸಂದರ್ಭದಲ್ಲೇ ಹಿಂಗಾರು ಮಳೆಯೂ ಅವಕೃಪೆ ತೋರಿದ್ದಾನೆ. ಪರಿಣಾಮ ಹಿಂಗಾರು ಬೆಳೆಗಳಿಗೂ ಬರಸಿಡಿಲು ಬಡಿದಂತಾಗಿದೆ. ಇದರಿಂದಾಗಿ, ಜಿಲ್ಲೆಯಲ್ಲಿ ಶೇ.50ರಷ್ಟೂ ಬಿತ್ತನೆ ಆಗಿಲ್ಲ. ಇದು ಅನ್ನದಾತನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಅಕ್ಟೋಬರ್‌ನಲ್ಲಿ ಹಿಂಗಾರು ಬಿತ್ತನೆ ಕಾರ್ಯ ಆರಂಭವಾಗಬೇಕಿತ್ತು. ಆದರೆ, ಹಿಂಗಾರು ಮಳೆಯೂ ಕಾಲಕ್ಕೆ ತಕ್ಕಂತೆ ಬಾರದ ಹಿನ್ನೆಲೆಯಲ್ಲಿ ನವೆಂಬರ್‌ನಲ್ಲಿ ರೈತರು ಹಿಂಗಾರು ಬಿತ್ತನೆ ಮಾಡಿದ್ದಾರೆ. ನವೆಂಬರ್‌ನಲ್ಲಿ ಭರವಸೆ ಮೂಡಿಸಿದ್ದ ಮಳೆರಾಯನನ್ನು ನಂಬಿದ ರೈತರು ಜಿಲ್ಲೆಯಲ್ಲಿ ಜೋಳ, ಗೋವಿನಜೋಳ, ಗೋದಿ, ಹೆಸರು, ಅಲಸಂದೆ, ಸೂರ್ಯಕಾಂತಿ, ಇತರ ಬೀಜಗಳನ್ನು ಬಿತ್ತನೆ ಮಾಡಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 1,11,745 ಹೆಕ್ಟೆರ್ ಹಿಂಗಾರಿ ಬಿತ್ತನೆ ಗುರಿ ಹೊಂದಿದ್ದರೂ ಸಹ ಮಳೆ ಕೊರತೆ ಕಾರಣ ಕೇವಲ 53,388 ಹೆಕ್ಟೆರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ನವೆಂಬರ್‌ನಲ್ಲಿ ಹಲವೆಡೆ ಮಳೆ ಆಗಿದ್ದರೂ ಕೆಲ ಗ್ರಾಮಗಳಲ್ಲಿ ಮಳೆಯೇ ಆಗಿಲ್ಲ. ಇದರಿಂದಾಗಿ ಬೋರ್‌ವೆಲ್‌ಗಳು ಬತ್ತುತ್ತಿವೆ. ಅಂತರ್ಜಲ ಕುಸಿಯುತ್ತಿದೆ. ಇದರಿಂದಾಗಿ ಬೋರ್‌ವೆಲ್ ನೀರಾವರಿ ಸೌಲಭ್ಯವಿರುವ ರೈತರೂ ಹಿಂಗಾರು ಕೈಕೊಡುವ ಆತಂಕದಲ್ಲಿದ್ದಾರೆ. ಹಲವೆಡೆ ಬಿತ್ತಿದ ಬೀಜಗಳು ಮೊಳಕೆಯೊಡೆದಿಲ್ಲ. ಕೆಲವೆಡೆ ಸಸಿಗಳು ಒಣಗುತ್ತಿವೆ.
ಮುಂಗಾರು ಬೆಳೆಯೂ ಕೈಸೇರಲಿಲ್ಲ. ಬಿತ್ತನೆಗೆ ಖರ್ಚು ಮಾಡಿದ ಹಣವೂ ಕೈಗೆ ಬರಲಿಲ್ಲ. ಬರ ಪರಿಹಾರ ಬಿಡುಗಡೆಗೂ ಸರ್ಕಾರಗಳು ಮನಸು ಮಾಡುತ್ತಿಲ್ಲ. ಇದರಿಂದ ರೈತನ ಪರಿಸ್ಥಿತಿ ಹೇಳತೀರದ್ದಾಗಿದೆ. ತುತ್ತು ಅನ್ನಕ್ಕೂ ಪರದಾಡುವಂತಾಗಿದೆ. ಜೀವನ ನಿರ್ವಹಣೆ ಹೇಗೆ ಎಂದು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ.
ಇನ್ನಾದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಸಂಕಷ್ಟ ಅರಿತು ಸೂಕ್ತ ಬರ ಪರಿಹಾರವನ್ನು ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಅನ್ನ ಬೆಳೆಯುವ ರೈತರ ಸಂಖ್ಯೆ ಮತ್ತಷ್ಟು ಕ್ಷೀಣಿಸುವ ಸಾಧ್ಯತೆ ದಟ್ಟವಾಗಿದೆ.
ಮಳೆರಾಯನ ಅವಕೃಪೆ
ಕಳೆದ ವರ್ಷ ಅತಿವೃಷ್ಠಿ ತೋರಿದ್ದ ಮಳೆರಾಯ ಈ ವರ್ಷ ಅನಾವೃಷ್ಠಿ ಬೀರಿದ್ದಾನೆ. ಮುಂಗಾರು ಜತೆಗೆ ಹಿಂಗಾರು ಮಳೆಗೂ ವಕ್ರದೃಷ್ಠಿ ಬೀರಿದ್ದಾನೆ. ಅಕ್ಟೋಬರ್‌ನಲ್ಲಿ 110.70 ಮಿಮೀ ವಾಡಿಕೆ ಮಳೆ ಆಗಬೇಕಿತ್ತು. ಆದರೆ, ವಾಸ್ತವವಾಗಿ 19 ಮಿಮೀ ಮಳೆ ಮಾತ್ರ ಸುರಿದಿದೆ. ಆದರೆ, ನವೆಂಬರ್‌ನಲ್ಲಿ 48.80 ಮಿಮೀ ಮಳೆ ಆಗಬೇಕಿತ್ತು, ಆದರೆ, 50.50 ಮಿಮೀ ಮಳೆಯಾಗಿತ್ತು. ಡಿಸೆಂಬರ್‌ನಲ್ಲಿ 8.70 ಮಿಮೀ ಮಳೆಯಾಗಬೇಕಿದೆ. ಆದರೆ ಡಿ.5ರವರೆಗೂ ಎಲ್ಲಿಯೂ ಮಳೆ ಸುರಿದ ವರದಿಯಾಗಿಲ್ಲ.

ಕೋಟ್:
ನೀರಾವರಿ ಇರುವ ರೈತರೇ ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ. ಇನ್ನು ಮಳೆಯಾಶ್ರಿತ ಜಮೀನುಗಳ ರೈತರ ಪಾಡು ದೇವರಿಗೇ ಪ್ರೀತಿ. ಮಳೆಯೂ ಹೋಯಿತು, ಚಳಿಯೂ ಇಲ್ಲ. ಹೀಗಾಗಿ, ಈ ಬಾರಿ ಸೂರ್ಯಕಾಂತಿ, ಬಿಳಿಜೋಳವೂ ಕೈಗೆ ಸಿಗುವ ಭರವಸೆ ಕಾಣುತ್ತಿಲ್ಲ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು.
ಭುವನೇಶ್ವರ ಶಿಡ್ಲಾಪುರ, ರೈತ

ಕೋಟ್
ಹಿಂಗಾರು ಬಿತ್ತನೆ ಅಕ್ಟೋಬರ್‌ನಲ್ಲಿ ಆರಂಭವಾಗಬೇಕಿತ್ತು. ಮಳೆ ಕೊರತೆಯಿಂದ ನವೆಂಬರ್‌ನಲ್ಲಿ ಆರಂಭವಾಗಿದೆ. ಹಿಂಗಾರು ಬೆಳೆಗಳ ಸ್ಥಿತಿ ಸದ್ಯಕ್ಕೆ ಚೆನ್ನಾಗಿದೆ. ಮಳೆ ಜತೆಗೆ ಹಿಬ್ಬನಿ ಕಡಿಮೆಯಾದ್ದರಿಂದ ಮಳೆಯಾಶ್ರಿತ ರೈತರಿಗೆ ಸಮಸ್ಯೆಯಾಗಿದೆ. ಇಲಾಖೆಯಿಂದ ರೈತರಿಗೆ ಅಗತ್ಯ ಸಲಹೆ, ಸಹಕಾರ ನೀಡಲಾಗುತ್ತಿದೆ.
ಮಂಜುನಾಥ ಅಂತರವಳ್ಳಿ, ಜಂಟಿ ಕೃಷಿ ನಿರ್ದೇಶಕ ಬಾಕ್ಸ್

ಬಿತ್ತನೆ ಅಂಕಿ- ಅಂಶ (ಹೆಕ್ಟೆರ್‌ಗಳಲ್ಲಿ)
ಬೆಳೆ ಒಟ್ಟು ಗುರಿ ಸಾಧನೆ
ಜೋಳ 49,868 26,213
ಮೆಕ್ಕೆಜೋಳ 36,184 14,191
ಕಡಲೆ 3,558 3,312
ಸೂರ್ಯಕಾಂತಿ 3,249 1,023
ಇತರ ಬೆಳೆ 18,896 9,672

ಒಟ್ಟು 1,11,745 53,388

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net