ಜೆಸಿಐನಿಂದ ಪ್ರಗತಿಪರ ರೈತರಿಗೆ ಸನ್ಮಾನ

Published on

ಹಾವೇರಿ: ಕಾಯಕವೇ ಕೈಲಾಸ ಎಂದು ನಂಬಿ ಎಡೆಬಿಡದೆ ಸುರಿಯುತ್ತಿರುವ ಮಳೆಯ ನಡುವೆಯೂ ಹೊಲದಲ್ಲಿ ದುಡಿಯುತ್ತಿರುವ ರೈತರನ್ನು ಹಾವೇರಿ ಜೆಸಿಐ ಘಟಕದಿಂದ ಗುರುತಿಸಿ ಇಲ್ಲಿನ ಇಜಾರಿಲಕಮಾಪುರದಲ್ಲಿ ಶನಿವಾರ ಸನ್ಮಾನಿಸಲಾಯಿತು.
ಸೆಲ್ಯೂಟ್ ಟು ಸೈಲೆಂಟ್ ಸ್ಟಾರ್ಸ್‌ ಎಂಬ ಶೀರ್ಷಿಕೆಯಡಿ ಜೆಸಿಐ ಆಯೋಜಿಸಿದ್ದ ಸಮಾರಂಭದಲ್ಲಿ ಇಜಾರಿ ಲಕಮಾಪುರದ ರೈತರಾದ ಚನ್ನಬಸಪ್ಪ ವೀರಾಪುರ ಮತ್ತು ಬಸವರಾಜ ಮಾಳಣ್ಣವರ ಎಂಬುವರನ್ನು ಅವರ ಹೊಲದಲ್ಲಿ ಸನ್ಮಾನಿಸಲಾಯಿತು.
ಜೆಸಿಐ ಹಾವೇರಿ ಘಟಕದ ಅಧ್ಯಕ್ಷ ಚಂದ್ರಶೇಖರಯ್ಯ ಸುತ್ತೂರಮಠ ಮಾತನಾಡಿ, ರೈತರು ಆಹಾರ ಧಾನ್ಯಗಳನ್ನು ಉತ್ಪಾದಿಸುವ ಮೂಲಕ ಎಲ್ಲ ವರ್ಗದವರ ಹಸಿವು ನೀಗಿಸುತ್ತಿದ್ದಾರೆ. ರೈತರು ಸಮಾಜದ ಬೆನ್ನೆಲುಬು. ಭಾರತ ಪ್ರಾಚೀನ ಕಾಲದಿಂದಲೂ ಕೃಷಿ ಪ್ರಧಾನ ದೇಶ. ಆದ್ದರಿಂದಲೇ ಭಾರತದ ಒಟ್ಟಾರೆ ಆರ್ಥಿಕತೆಯು ರೈತನ ಮೇಲೆ ಅವಲಂಬಿತವಾಗಿದೆ. ಭಾರತದ ರೈತನನ್ನು ವಿಶ್ವದ ಅತ್ಯಂತ ಶ್ರಮಜೀವಿ ಎಂದು ಪರಿಗಣಿಸಲಾಗಿದೆ. ಇಂದು ಸನ್ಮಾನಕ್ಕೆ ಪಾತ್ರರಾಗಿರುವ ರೈತರು ಶ್ರಮಜೀವಿಗಳು. ಭೂಮಿತಾಯಿಯನ್ನೇ ದೇವರೆಂದು ತಿಳಿದು ದುಡಿಮೆ ಮಾಡುತ್ತಿದ್ದಾರೆ ಎಂದರು.
ಜೆಸಿಐನ ಕಾರ್ಯದರ್ಶಿ ಅಶೋಕ ಹಾಡೋರ, ಖಜಾಂಚಿ ದತ್ತಾತ್ರೇಯ ಜೋಶಿ, ಪೂರ್ವಾಧ್ಯಕ್ಷರಾದ ರುಸ್ತು ನಂದಿಹಳ್ಳಿ, ಜಗದೀಶ ಚೌಟಗಿ, ಮಲ್ಲಿಕಾರ್ಜುನ ಶಾಂತಗಿರಿ, ಮುರಗೇಶ ಹುಂಬಿ ಮತ್ತು ಸದಸ್ಯರಾದ ನಾಗರಾಜ ದಶಮನಿ, ಶಿವಕುಮಾರ ಕಡೇಕೊಪ್ಪ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net