ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ 19ರಂದು; ಜಯ ಕರ್ನಾಟಕ ಸಂಘಟನೆಯಿಂದ ಆಯೋಜನೆ

17 Jaya karnataka
Published on

ಹಾವೇರಿ: ಜಯ ಕರ್ನಾಟಕ ವತಿಯಿಂದ ಸರ್ಜಿ ರೇಣುಕಾ ದೇವಧರ ಆಸ್ಪತ್ರೆ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಡಿ.19ರಂದು ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದ ಆವರಣದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಪ್ರಾಥಮಿಕ, ಪ್ರೌಢ ಶಾಲಾ ಮಕ್ಕಳಿಂದ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಜಯ ಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿ ರಮೇಶ ಆನವಟ್ಟಿ ತಿಳಿಸಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫಿಸಿಷಿಯನ್ ಡಾ.ಮಧು ಕೆ.ಆರ್., ಮೂಳೆ ತಜ್ಞ ಡಾ.ನವೀನ ರಾಯ್ಕರ ಹಾಗೂ ಮಕ್ಕಳ ತಜ್ಞ ಡಾ.ವಿಕಾಸ ಕೆ.ಜಿ. ನೇತೃತ್ವದಲ್ಲಿ ಆರೋಗ್ಯ ತಪಾಸಣೆ ನಡೆಯಲಿದೆ. ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಉಚಿತ ಬಿಪಿ ತಪಾಸಣೆ, ಶುಗರ್ ಪರೀಕ್ಷೆ, ಉಚಿತ ಇಸಿಜಿ ತಪಾಸಣೆ ಮಾಡಲಾಗುವುದು. ಹಾವೇರಿ ಶಹರ ಹಾಗೂ ಸುತ್ತಮುತ್ತಲಿನ ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಜಯ ಕರ್ನಾಟಕ ಜಿಲ್ಲಾಧ್ಯಕ್ಷ ಸುಭಾಷ ಬೆಂಗಳೂರ ಮಾತನಾಡಿ, ಸಂಜೆ 4 ಗಂಟೆಯಿಂದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಸಾಮೂಹಿಕ ನೃತ್ಯ ಸ್ಪರ್ಧೆ ನಡೆಯಲಿದೆ. ವಿವಿಧ ಸಾಧಕರಿಗೆ ಸನ್ಮಾನ ನಡೆಯಲಿದೆ. ವಿಜೇತ ವಿದ್ಯಾರ್ಥಿಗಳಿಗೆ 5 ಅಡಿ ಎತ್ತರ ದೊಡ್ಡ ಟ್ರೋಫಿ, ಸೇರಿದಂತೆ ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಗುವುದು. ಜೇಕನಕಟ್ಟಿಯ ಬಾಲಕಿ ಅನುಷಾ ಹಿರೇಮಠ ಕನ್ನಡ ಭಾಷೆ ಕುರಿತು ವಿಶೇಷ ಭಾಷಣ ಮಾಡಲಿದ್ದಾರೆ. ಹಾವೇರಿ ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ ಉದ್ಘಾಟಿಸಲಿದ್ದು, ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ರಮೇಶ ಜಾಲಿಹಾಳ, ಯುವ ಘಟಕದ ಅಧ್ಯಕ್ಷ ಸಚಿನ ಉಪ್ಪಾರ, ಶಾಹೀದ್ ದೇವಿಹೊಸೂರ, ಸಂಗಪ್ಪ ಕಲ್ಯಾಣಶೆಟ್ಟರ್, ಮೌನೇಶ ಪಾಟೀಲ, ಮಹಾಂತೇಶ ಭಜ್ಜಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net