ಜಾನಪದ ವಿವಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲಿ; 8, 9ನೇ ಘಟಿಕೋತ್ಸವದಲ್ಲಿ ಸಚಿವ ಡಾ.ಎಂ.ಸಿ.ಸುಧಾಕರ ಆಶಯ

2 Janapda University Gold medals
Published on

ಹಾವೇರಿ/ ಶಿಗ್ಗಾಂವಿ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಬೆಳವಣಿಗೆಗೆ ಬಹುದೊಡ್ಡ ಮಟ್ಟದ ಅವಕಾಶವಿದೆ. ಎಲ್ಲರ ಸಹಕಾರ ಹಾಗೂ ಹೊಸ ಹೊಸ ಯೋಜನೆಗಳೊಂದಿಗೆ ವಿವಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆಯಲಿ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಜಾನಪದ ವಿವಿ ಸಮಕುಲಾಧಿಪತಿ ಡಾ.ಎಂ.ಸಿ.ಸುಧಾಕರ ಆಶಯ ವ್ಯಕ್ತಪಡಿಸಿದರು.

ಶಿಗ್ಗಾಂವಿ ತಾಲೂಕಿನ ಗೊಟಗೋಡಿ ಗ್ರಾಮದ ಕರ್ನಾಟಕ ವಿಶ್ವವಿದ್ಯಾಲಯದ 8 ಮತ್ತು 9ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಮ್ಮಲ್ಲಿ ವೈವಿಧ್ಯತೆ ಇದೆ, ಅದನ್ನು ಉಳಿಸುಕೊಳ್ಳುವ ಪ್ರಯತ್ನ ಮಾಡಬೇಕು. ಜೀವನದ ಪ್ರತಿ ಹಂತದಲ್ಲಿ ವೈವಿಧ್ಯತೆ ಕಾಣುತ್ತದೆ, ಪ್ರಪಂಚದ ಬೇರೆ ದೇಶಗಳನ್ನು ನೋಡಿದಾಗ ನಮ್ಮ ಕಲೆ, ಸಂಸ್ಕೃತಿ, ಕ್ರೀಡೆ ಹಾಗೂ ಪ್ರತಿಭೆ ಅಗಾಧವಾಗಿದೆ. ಜಾನಪದ ವೈವಿಧ್ಯತೆಯನ್ನು ಉಳಿಸಿ ಬೆಳೆಸುವ ಜಾವಾಬ್ದಾರಿ ಜಾನಪದ ವಿಶ್ವವಿದ್ಯಾಲಯದ ಮೇಲಿದೆ ಎಂದರು.

ಇಂದು ಪಾಶ್ಚಿಮಾತ್ಯ ಸಂಸ್ಕೃತಿಯಿಂದ ನಮ್ಮ ಯುವ ಪೀಳಿಗೆಯನ್ನು ರಕ್ಷಿಸುವ ಜತೆಗೆ ಜನಪದ ಸಂಸ್ಕೃತಿಯ ಒಲವು ಮೂಡಿಸುವ ಕೆಲಸವಾಗಬೇಕು. ವಿನೂತನ ಪ್ರಯತ್ನ ಮಾಡಿದಾಗ ಮಾತ್ರ ಬೆಳವಣಿಗೆ ಸಾಧ್ಯ. ಕಠಿಣ ಶ್ರಮ, ಶಿಸ್ತಿನ ಮೂಲಕ ಯಶಸ್ಸು ಸಾಧ್ಯ. ಪದವಿ ಪಡೆದ ಎಲ್ಲರೂ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲಿ ಎಂದು ಶುಭಕೋರಿದರು.

ಪದವಿ ಪ್ರದಾನ: 2021-22ನೇ ಸಾಲಿನ 8ನೇ ಘಟಿಕೋತ್ಸವದಲ್ಲಿ 1 ಪಿ.ಎಚ್.ಡಿ, 3 ಚಿನ್ನದ ಪದಕ, 1 ನಗದು ಬಹುಮಾನ, 13 ಪ್ರಥಮ ರ‌್ಯಾಂಕ್, ಎಂ.ಎ ಹಾಗೂ ಎಂ.ಬಿ.ಎ ವಿಭಾಗದ 117 ವಿದ್ಯಾರ್ಥಿಗಳು ಪಿ.ಜಿ ಡಿಪ್ಲೊಮಾ 10, ಡಿಪ್ಲೊಮಾ 54, ವಿವಿಧ ಸರ್ಟಿಫಿಕೇಟ್ ಕೋರ್ಸುಗಳ 34 ಸೇರಿದಂತೆ ಒಟ್ಟು 216 ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ.

2022-23ನೇಯ ಸಾಲಿನ 9ನೇ ಘಟಿಕೋತ್ಸವದಲ್ಲಿ 3 ಪಿ.ಎಚ್.ಡಿ, 11 ಚಿನ್ನದ ಪದಕ, 1 ನಗದು ಬಹುಮಾನ, 14 ಪ್ರಥಮ ರ‌್ಯಾಂಕ್, ಎಂ.ಎ ಹಾಗೂ ಎಂ.ಬಿ.ಎ ವಿಭಾಗದ 179 ವಿದ್ಯಾರ್ಥಿಗಳು, ಡಿಪ್ಲೊಮಾ 101, ವಿವಿಧ ಸರ್ಟಿಫಿಕೇಟ್ ಕೋರ್ಸುಗಳ 43 ಸೇರಿದಂತೆ ಒಟ್ಟು 326 ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ.

ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ.ಟಿ.ಎಂ.ಭಾಸ್ಕರ ಸ್ವಾಗತಿಸಿ, ಜಾನಪದ ವಿವಿ ಪ್ರಗತಿ ವರದಿ ವಾಚಿಸಿದರು. ಕುಲಸಚಿವರಾದ ಪ್ರೊ.ಸಿ.ಟಿ.ಗುರುಪ್ರಸಾದ, ಪ್ರೊ.ಎನ್.ಎಂ.ಸಾಲಿ, ಸಿಂಡಿಕೇಟ್ ಸದಸ್ಯರು, ಶೈಕ್ಷಣಿಕ ಪರಿಷತ್ ಸದಸ್ಯರು, ಇತರರು ಪಾಲ್ಗೊಂಡಿದ್ದರು.

ಆರು ಸಾಧಕರಿಗೆ ಗೌಡಾ ಪ್ರದಾನ

2021-22ನೇ ಸಾಲಿಗೆ ಜಾನಪದ ವೈದ್ಯ ಡಾ.ಹನುಮಂತಪ್ಪ ಗೋವಿಂದಪ್ಪ ದಡ್ಡಿ, ಜಾನಪದ ಸಾಹಿತಿ ಡಾ.ಶಾಂತಿ ನಾಯಕ, ರಾಮನಗರದ ಹಾಸನ ರಘು ಅವರಿಗೆ ಹಾಗೂ 2022-23ನೇ ಸಾಲಿಗೆ ಬೆಂಗಳೂರಿನ ಡಾ.ಜ್ಯೋತಿರ್ಲಿಂಗ ಚಂದ್ರಾಮ ಹೊನಕಟ್ಟಿ, ಪುರಾಣ ಕಾವ್ಯ ಭಾರತೀಯ ಪರಂಪರೆಯ ವಿಮರ್ಶಕ ಡಾ.ಎಸ್.ಸಿ.ಶರ್ಮಾ, ಯಾದಗಿರಿಯ ಜನಪದ ವಿದ್ವಾಂಸ ಸಿದ್ರಾಮ ಹೊನ್ನಕಲ್ ಅವರಿಗೆ ಡಾ.ಎಂ.ಸಿ.ಸುಧಾಕರ ಗೌರವ ಡಾಕ್ಟರೆಟ್ ಪದವಿ ಪ್ರದಾನ ಮಾಡಿ ಗೌರವಿಸಿದರು.

ಗಮನ ಸೆಳೆದ ಮೆರವಣಿಗೆ

ಜಾನಪದ ವಿವಿ ಸಮಕುಲಾಧಿಪತಿ, ಕುಲಪತಿ, ಕುಲಸಚಿವರು ಹಾಗೂ ಗಣ್ಯರು ಸಾಂಪ್ರದಾಯಿಕ ಉಡುಗೆ ಮೂಲಕ ಕಂಗೊಳಿಸಿದರು. ಡೊಳ್ಳು, ಗೊಂಬೆ ಕುಣಿತ, ಪುವಂತಿಕೆ, ಪೂರ್ಣಕುಂಭ, ಹಲಿಗೆ ವಾದನ ಸೇರಿದಂತೆ ವಿವಿಧ ಸಾಂಪ್ರದಾಯಿಕ ವಾದನಗಳ ಮೂಲಕ ವೇದಿಕೆಗೆ ಮೆರವಣಿಗೆ ಮೂಲಕ ಕರೆತರಲಾಯಿತು.

ಚಿನ್ನದ ಪದಕ ವಿಜೇತರಿವರು

2021-22ನೇ ಸಾಲಿನಲ್ಲಿ ಜನಪದ ಸಾಹಿತ್ಯದಲ್ಲಿ ಮಂಜುನಾಥ ಶಿವಲಿಂಗಮ್ಮನವರ ಹಾಗೂ ಸಮಾಜಶಾಸ್ತ್ರ ವಿಭಾಗದಲ್ಲಿ ಭಾಗ್ಯಮ್ಮ ಸಿ. ಅವರಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು. 2022-23ನೇ ಸಾಲಿನಲ್ಲಿ ಜನಪದ ಸಾಹಿತ್ಯದಲ್ಲಿ ಸವಿತಾ ಶಾಮಪ್ಪ, ಸಮಾಜ ಶಾಸ್ತ್ರ ವಿಭಾಗದಲ್ಲಿ ಈಶ್ವರಪ್ಪ ಛತ್ರದ, ಜನಪದ ಕಲೆಯಲ್ಲಿ ಅನ್ನಪೂರ್ಣ ಗಾಣಿಗೇರ, ಜನಪದ ವಿಜ್ಞಾನ ವಿಭಾಗದಲ್ಲಿ ಶಶಿಕುಮಾರ ಹೊಸಮನಿ, ಕನ್ನಡ ಜಾನಪದ ವಿಭಾಗದಲ್ಲಿ ವಸಂತ ಭಜಂತ್ರಿ, ಪ್ರವಾಸೋದ್ಯಮ ಮತ್ತು ನಿರ್ವಹಣೆ ವಿಭಾಗದಲ್ಲಿ ಶೃತಿ ಸಂಸಗಿ ಹಾಗೂ ಪ್ರದರ್ಶನ ಕಲೆ ವಿಭಾಗದಲ್ಲಿ ಮಧುಚಂದ್ರ ಎಂ.ಆರ್. ಚಿನ್ನದ ಪದಕ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net