

ಹಾವೇರಿ: ಇತ್ತೀಚಿನ ದಿನಗಳಲ್ಲಿ ಯುವಕರು ದುಶ್ಚಟ, ದುರ್ವ್ಯಸನಗಳ ದಾಸರಾಗುತ್ತಿರುವುದು ಕಳವಳ ಉಂಟು ಮಾಡಿದೆ. ಈ ನಿಟ್ಟಿನಲ್ಲಿ ಶಾಲಾ-ಕಾಲೇಜುಗಳಲ್ಲಿ ದುಶ್ಚಟಗಳಿಂದಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಜನ ಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಶನಿವಾರ ನಗರದ ಟ್ರಸ್ಟ್ ಸಭಾಭವನದಲ್ಲಿ ಆಯೋಜಿಸಿದ್ದ ಜನಜಾಗೃತಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಯೋಜನೆಯ ವತಿಯಿಂದ ಮದ್ಯವರ್ಜನ ಶಿಬಿರ, ಸ್ವಾಸ್ಥ್ಯ ಸಂಕಲ್ಪ, ಮಾದಕ ವಸ್ತು ವಿರೋಧಿ ಹಾಗೂ ತಂಬಾಕು ವಿರೋಧಿ ದಿನಾಚರಣೆಗಳು ಯಶಸ್ವಿಯಾಗಿ ನಡೆಯುತ್ತಿವೆ ಎಂದರು.
ಟ್ರಸ್ಟ್ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು ಮಾತನಾಡಿ, ಡಾ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಹತ್ತು ಹಲವಾರು ಜನಜಾಗೃತಿ ಹಾಗೂ ಸಮಾಜಮುಖಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಜನರಿಂದಲೂ ಉತ್ತಮ ಸ್ಪಂದನೆ ಸಿಗುತ್ತಿದೆ ಎಂದರು.
ಭಾಸ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಕಟಪೂರ್ವ ಅಧ್ಯಕ್ಷ ಡಾ.ಮುತ್ತಣ್ಣ ಎಲಿಗಾರ, ಕೋಶಾಧಿಕಾರಿ ಮಂಜುನಾಥ, ಪ್ರಕಾಶ ಶೆಟ್ಟಿ, ನಿಜಲಿಂಗಪ್ಪ ಬಸೇಗೆಣ್ಣಿ, ಪ್ರಭಾಕರರಾವ್ ಮಂಗಳೂರು, ನಾಗೇಂದ್ರ ಕಟಕೋಳ, ವೇದಿಕೆಯ ಸದಸ್ಯರು ಪಾಲ್ಗೊಂಡಿದ್ದರು.
ತಾಲೂಕು ಯೋಜನಾಧಿಕಾರಿ ನಾರಾಯಣ ಜಿ. ಸ್ವಾಗತಿಸಿದರು. ತೀರ್ಥಪ್ರಸಾದ ನಿರೂಪಿಸಿದರು. ಮಂಜುನಾಥ ವಂದಿಸಿದರು.