

ಹಾವೇರಿ: ನಗರದಲ್ಲಿ ಮೊದಲ ಬಾರಿಗೆ ಸಿದ್ಧಚಕ್ರ ಮಹಾಮಂಡಲ ಆರಾಧನೆ ಡಿ.12ರಿಂದ ಡಿ.20ರವರೆಗೆ ನಡೆಯಲಿದೆ. ಈ ಸಿದ್ಧಚಕ್ರ ಆರಾಧನೆ ವಿಧಾನದಲ್ಲಿ ಜೈನ ಸಮುದಾಯವರೆಲ್ಲರೂ ಸಕ್ರಿಯವಾಗಿ ಪಾಲ್ಗೊಂಡು ಧರ್ಮದ ಲಾಭ ಪಡೆದುಕೊಳ್ಳಬೇಕು ಎಂದು ಮುನಿಶ್ರೀ 108 ವಿಧಿತಸಾಗರಜಿ ಮಹಾರಾಜರ ಹೇಳಿದರು.
ನಗರದ ಜಿನಮಂದಿರದಲ್ಲಿ ಇತ್ತೀಚೆಗೆ ಸಿದ್ಧಚಕ್ರ ಆರಾಧನೆ ಪೂಜಾ ಸಿದ್ಧಚಕ್ರ ಆರಾಧನಾ ಕಿಟ್ ಬಿಡುಗಡೆಗೊಳಿಸಿ, ಮಾತನಾಡಿದರು.
ಸಿದ್ಧಚಕ್ರ ಆರಾಧನೆಗೆ ಅಗತ್ಯ ಸಿದ್ಧತೆಗಳು ಈಗಾಗಲೇ ಆರಂಭವಾಗಿದ್ದು, ಪೂಜಾ, ಆಹಾರ, ವಸತಿ , ಮೆರವಣಿಗೆ, ಅಲಂಕಾರ, ಸಾಂಸ್ಕೃತಿಕ ಸಮಿತಿಗಳನ್ನು ರಚಿಸಲಾಗಿದ್ದು, ಆಯಾ ಸಮಿತಿಗಳು ಯಾವುದೇ ವ್ಯತ್ಯಯವಾಗದಂತೆ ಅತ್ಯಂತ ಅಚ್ಚುಕಟ್ಟಾಗಿ ಆಯೋಜನೆಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಪೂಜಾ ಕಿಟ್‌ನಲ್ಲಿ, ಎರಡು ಬಿಳಿ ಕಾಟನ್ ಸೀರೆ ಮತ್ತು ಎರಡು ಸೆಟ್ ಧೋತಿ ದುಪ್ಪಟ್ಟ, ಕಿರೀಟ, ಜಪ ಮಾಲೆ, ಕಳಸ, ಪೂಜಾ ಪಾತ್ರೆ, ಪುರುಷರಿಗೆ ಒಂದು ಟೀಶರ್ಟ್ ಇರುತ್ತದೆ. ಪೂಜೆ ಕುಳಿತುಕೊಳ್ಳುವವರಿಗೆ ಶುದ್ಧ ಆಹಾರ, ಅವಶ್ಯಕತೆ ಇದ್ದವರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಕುರಿತು ಹಾವೇರಿ ನಗರ, ಸುತ್ತಮಲಿನ ಗ್ರಾಮಗಳು, ಅಕ್ಕಪಕ್ಕದ ಜಿಲ್ಲೆಗೆಗಳಲ್ಲಿ ವ್ಯಾಪಕ ಪ್ರಚಾರ ಕೈಗೊಂಡು ಸಿದ್ಧಚಕ್ರ ಆರಾಧನೆ ಕುರಿತು ಮಾಹಿತಿ ನೀಡಬೇಕು ಎಂದು ಪ್ರಚಾರ ಸಮಿತಿಗೆ ಸಲಹೆ ನೀಡಿದರು.
ಸಿದ್ಧಚಕ್ರ ಆರಾಧಾನ ಕಮೀಟಿ, ಭಗವಾನ ಶ್ರೀ 1008 ನೇಮಿನಾಥ ದಿಗಂಬರ ಜೈನ ಮಂದಿರ ಕಮೀಟಿ, ರತ್ನತ್ರಯ ಮಹಿಳಾ ಸಮಾಜ, ಭಾರತೀಯ ಜೈನ್ ಮಿಲನ್, ಸಮ್ಯಕ್ ಜ್ಞಾನ ಜಿನಧರ್ಮ ಪ್ರಭಾವನಾ ಯುವಕ ಸಂಘದ ಸರ್ವ ಸದಸ್ಯರು, ಸಮಸ್ತ ಶ್ರಾವಕ, ಶ್ರವಾಕಿಯರು ಭಾಗವಹಿಸಿದ್ದರು.