ಜೈಲುಗಳು ಶರಣರ ಅನುಭವ ಮಂಟಪವಾಗಲಿ; ಜಿಲ್ಲಾ ಕಾರಾಗೃಹದ ಕೈದಿಗಳ ಸಾಹಿತ್ಯ ಕಮ್ಮಟದಲ್ಲಿ ಡಾ. ನಾಗರಾಜ ದ್ಯಾಮನಕೊಪ್ಪ ಹೇಳಿಕೆ

20 HVR 6
Published on

ಹಾವೇರಿ: ಕೊಲೆ, ಸುಲಿಗೆ, ಕಳ್ಳತನ, ಸೇರಿದಂತೆ ಯಾವುದೋ ಅಪರಾಧ ಹೊತ್ತು ಜೈಲಿಗೆ ಬರುವವರಿಗೆ ಜೈಲು ಪರಿವರ್ತನೆಯ ವೇದಿಕೆಯಾಗಿದೆ. ಜೈಲುಗಳು ಶರಣರ ಅನುಭವ ಮಂಟಪಗಳಾಗಬೇಕು. ಸಾಹಿತ್ಯ ಸಂಪರ್ಕದಿಂದ ಕೈದಿಗಳು ಶರಣರಾಗಬೇಕು ಎಂದು ಶಿಗ್ಗಾಂವಿಯ ಚನ್ನಪ್ಪ ಕುನ್ನೂರು ಪದವಿಪೂರ್ವ ಕಾಲೇಜ್ ಪ್ರಾಂಶುಪಾಲ ಡಾ.ನಾಗರಾಜ ಜಿ. ದ್ಯಾಮನಕೊಪ್ಪ ಹೇಳಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಇಲ್ಲಿನ ಕೆರಿಮತ್ತಿಹಳ್ಳಿಯ ಜಿಲ್ಲಾ ಕಾರಾಗೃಹದಲ್ಲಿ ಆಯೋಜಿಸಿರುವ ಸಾಹಿತ್ಯ ಕಮ್ಮಟದ ಎರಡನೇ ದಿನವಾದ ಶುಕ್ರವಾರ ವಚನ ಸಾಹಿತ್ಯದ ಮಹತ್ವ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಜಡತ್ವ ಸಮಾಜವನ್ನು ಜಂಗಮವಾಗಿಸಿದ ಹಾಗೂ ಜಾತಿ ವ್ಯವಸ್ಥೆ ಮುರಿದು ಸಮಾನತೆಯ ಸಮಾಜ ಕಟ್ಟಲು ಬಸವಾದಿ ಶರಣರು ಶ್ರಮಿಸಿದರು. ಸಮಾಜದ ಔನ್ನತ್ಯಕ್ಕೆ ಶ್ರಮಿಸಿದ ಬಸವಾದಿ ಶರಣರ ಆಶಯಕ್ಕೆ ಅನುಗುಣವಾಗಿ ಬದುಕಬೇಕಿದೆ. ‘ಕಲಬೇಡ ಕೊಲಬೇಡ ಹುಸಿಯ ನುಡಿಯಲುಬೇಡ’ ಎಂಬ ಬಸವಣ್ಣನವರ ವಚನದಂತೆ ತತ್ವಗಳನ್ನು ಅಳವಡಿಸಿಕೊಂಡರೆ ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಕಿವಿಮಾತು ಹೇಳಿದರು.

ಕನ್ನಡ ಕಾವ್ಯದಲ್ಲಿ ಸೌಹಾರ್ದ ನೆಲೆಗಳು ಕುರಿತು ಸಾಹಿತಿ ಹೆಬಸೂರ ರಂಜಾನ್ ಮಾತನಾಡಿ, ತುಳಿದು ಬದುಕುವುದಕ್ಕಿಂತ ತಿಳಿದು ಬದುಕಬೇಕು. ತಿಳಿದು ಬದುಕಿದರೆ ಅಳಿದ ಮೇಲೂ ಉಳಿಯುತ್ತೇವೆ. ಸೌಹಾರ್ದ ಎಂದರೆ ಮನುಷ್ಯತ್ವ. ಆದರೆ ಮನುಷ್ಯರನ್ನು, ಮನುಷ್ಯತ್ವವನ್ನು ಕೊಲ್ಲುವ ವ್ಯವಸ್ಥೆಯಲ್ಲಿದ್ದೇವೆ. ಇದಕ್ಕಾಗಿ ಸಾಹಿತ್ಯ ಓದಬೇಕು. ಸಾಹಿತ್ಯವು ಜ್ಞಾನದ ಜತೆಗೆ ವಿವೇಕವನ್ನು ಮತ್ತು ಮನುಷ್ಯತ್ವವನ್ನು ಕಲಿಸುತ್ತದೆ ಎಂದು ಹೇಳಿದರು.

ಗೊಟಗೋಡಿಯ ರಾಕ್ ಗಾರ್ಡನ್ ಕ್ಯುರೇಟರ್ ವೇದಾರಾಣಿ ದಾಸನೂರ ಮಾತನಾಡಿ, ಇನ್ನೊಬ್ಬರೊಂದಿಗೆ ಹೊಡೆದಾಡಲು ಜಿಮ್‌ಗೆ ಹೋಗಬೇಡಿ. ಹರೆಯ ಎಂದರೆ ಕುದಿಯಿದ್ದ ಹಾಗೆ. ಕುದಿಯದೆ ಕುದ್ದು ಆರಿದ ನೀರಿನ ಹಾಗೆ ಬದುಕಿರಿ. ಕುಡಗೋಲು, ಕೊಡಲಿಗಳನ್ನು ಹೊಲದಲ್ಲಿ ಕೆಲಸ ಮಾಡಲು ಬಳಸಿ. ಯಾವುದೇ ಕಾರಣಕ್ಕೂ ಇನ್ನೊಬ್ಬರ ಕುತ್ತಿಗೆ ಕೊಯ್ಯಲು ಬಳಸಬೇಡಿ. ಮದ್ಯವ್ಯಸನಿಯಾಗದೇ ಹೊಸ ಬದುಕು ಕಟ್ಟಿಕೊಳ್ಳಿ ಎಂದು ತಿಳಿಸಿದರು.

ಜನಪದ ಕಲಾವಿದರಾದ ಬಸವರಾಜ ಶಿಗ್ಗಾಂವಿ ಮತ್ತು ಬಸವರಾಜ ಕರಡಿ ತತ್ವಪದಗಳನ್ನು ಹಾಡಿದರು.

ಸಾಹಿತ್ಯ ಕಮ್ಮಟದ ಸಂಚಾಲಕ ಗಣೇಶ ಅಮೀನಗಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯ ಸಂಚಾಲಕ ಡಾ.ಮಲ್ಲಿಕಾರ್ಜುನ ಬಿ.ಮಾನ್ಪಡೆ ಸ್ವಾಗತಿಸಿ, ನಿರೂಪಿಸಿದರು.

ಸಾವಯವ ಕೃಷಿಯಿಂದ ಲಾಭ ಹೆಚ್ಚು

ನಮ್ಮ ಜಮೀನಿಗೆ ಗೊಬ್ಬರ, ಔಷಧ ಹಾಕದೇ ಸಾವಯವ ಕೃಷಿಯಿಂದಾಗಿ ಖರ್ಚು ಕಡಿಮೆಯಾಗಿದೆ. ಬೀಜ, ಗೊಬ್ಬರ, ಔಷಧ ಖರೀದಿಸದೇ ಇರುವುದರಿಂದ ಬಂಡವಾಳ ಕಡಿಮೆ ಹಾಗೂ ಲಾಭ ಹೆಚ್ಚು. ಕೃಷಿ ಸಲುವಾಗಿ ಸಾಲ ಮಾಡದೇ ನೆಮ್ಮದಿಯಿಂದ ಇದ್ದೇನೆ ಎಂದು ರೈತ ಹಾಗೂ ಕವಿ ಚಂಸು ಪಾಟೀಲ ಹೇಳಿದರು. ಕೃಷಿಯಿಂದ ಲಾಭವಿಲ್ಲ ಎಂದು ಊರು ತೊರೆಯುವ ಯುವಕರು ಸಣ್ಣಪುಟ್ಟ ಕೆಲಸಗಳಿಗಾಗಿ ನಗರ ಸೇರುತ್ತಾರೆ. ಆದರೆ ಭೂಮಿತಾಯಿ ನಂಬಿ ಕೃಷಿ ಮಾಡಬೇಕು. ಇದರಿಂದ ಹಳ್ಳಿಗಳಲ್ಲಿ ಉಳಿಯಲು ಸಾಧ್ಯವಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net