ಹಲವೆಡೆ ಇಸ್ಪೀಟ್ ಅಡ್ಡೆಗಳ ಮೇಲೆ ಖಾಕಿ ದಾಳಿ; ವಿಜಯವಾಣಿ ವರದಿ ಪರಿಣಾಮ; ಹಲವರ ಬಂಧನ, ಪ್ರಕರಣ ದಾಖಲು

14 HVR 3
Published on

ಸವಣೂರ: ತಾಲೂಕಿನ ತೆಗ್ಗಿಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ ಶುಕ್ರವಾರ ಬೆಳ್ಳಂಬೆಳಗ್ಗೆ ಇಸ್ಪೀಟ್ ಜೂಜಾಡುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ, ಐವರನ್ನು ಬಂಧಿಸಿದ್ದಾರೆ. ಪಿಎಸ್‌ಐ ರಂಗನಾಥ ನೇತೃತ್ವದ ತಂಡ ದಾಳಿ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.

ರಟ್ಟಿಹಳ್ಳಿ: ತಾಲೂಕಿನ ಕಡೂರ ಗ್ರಾಮದ ಸರ್ಕಾರಿ ಆಸ್ಪತ್ರೆ ಬಳಿ ರಸ್ತೆಬದಿ ಇಸ್ಪೀಟ್ ಜೂಜಾಡುತ್ತಿದ್ದ ಐವರನ್ನು ರಟ್ಟಿಹಳ್ಳಿ ಠಾಣೆ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಿಪ್ಪೇಶ ಕಮತಳ್ಳಿ, ಮಂಜು ಕಮತಳ್ಳಿ, ಸಿದ್ದಪ್ಪ ಓಲೇಕಾರ, ಆಂಜನೇಯ ಓಲೇಕಾರ, ಕುಮಾರ ಕಮತಳ್ಳಿ ಆರೋಪಿತರು.

ಕಾಗಿನೆಲೆ: ಬ್ಯಾಡಗಿ ತಾಲೂಕು ಫಾಳಪೂಜಿ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ರಸ್ತೆಬದಿ ಇಸ್ಪೀಟ್ ಆಡುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ, ಆರು ಜನರನ್ನು ಬಂಧಿಸಿದ್ದಾರೆ. ಗ್ರಾಮದ ಸಂತೋಷ ಮಡ್ಲೂರ, ಶಿವನಗೌಡ ದೊಡ್ಡಗೌಡ್ರ, ಸುರೇಶ ಕೊಂಡೋಜಿ, ಸಿದ್ದನಗೌಡ ದೊಡ್ಡಗೌಡ್ರ, ಶಿವಕುಮಾರ ಹಿರೇಮಠ, ಶಾಂತಪ್ಪ ಉಪ್ಪಣಸಿ ಆರೋಪಿತರು. ಕಾಗಿನೆಲೆ ಪಿಎಸ್‌ಐ ಎಸ್.ಡಿ.ಸಾಗರ ನೇತೃತ್ವದ ತಂಡ ದಾಳಿ ನಡೆಸಿ, ಪ್ರಕರಣ ದಾಖಲಿಸಿಕೊಂಡಿದೆ.

ಜಿಲ್ಲೆಯಲ್ಲಿ ಎಲ್ಲೆಡೆ ಇಸ್ಪೀಟ್ ಅವ್ಯಾಹತವಾಗಿ ನಡೆಯುತ್ತಿರುವ ಕುರಿತು ‘ದೀಪಾವಳಿ ನೆಪ ಇಸ್ಪೀಟ್ ಜಪ’ ಶೀರ್ಷಿಕೆಯಡಿ ‘ವಿಜಯವಾಣಿ’ ಅ.15ರಂದು ವಿಶೇಷ ವರದಿ ಪ್ರಕಟಿಸಿತ್ತು. ವರದಿ ಬೆನ್ನಲ್ಲೇ ಎಚ್ಚೆತ್ತುಕೊಂಡು ಇಲಾಖೆ ಹಲವೆಡೆ ದಾಳಿ ನಡೆಸುವ ಮೂಲಕ, ದಂಧೆಕೋರರಿಗೆ ಬಿಸಿ ಮುಟ್ಟಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net