ಪ್ರಜಾಪ್ರಭುತ್ವ ದಿನಾಚರಣೆ ಯಶಸ್ವಿಗೆ ಕೈಜೋಡಿಸಿ; ಜಿಲ್ಲಾಧಿಕಾರಿ, ಜಿಪಂ ಸಿಇಒ, ಎಸ್‌ಪಿ ಮನವಿ

DC Pressmeet
Published on

ಹಾವೇರಿ: ರಾಜ್ಯದ ಬೀದರ್ ಜಿಲ್ಲೆಯಿಂದ ಚಾಮರಾಜನಗರ ಜಿಲ್ಲೆಯವರೆಗೆ ಮಾನವ ಸರಪಳಿ ನಿರ್ಮಿಸುವ ಮೂಲಕ ಸೆ.15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಜಿಲ್ಲಾಡಳಿತದಿಂದಲೂ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಮನವಿ ಮಾಡಿದ್ದಾರೆ.
ಭಾರತದ ಪ್ರಜಾಪ್ರಭುತ್ವ, ಸಂವಿಧಾನದ ಮಹತ್ವದ ಮೌಲ್ಯಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಈ ವಿಶೇಷ ಕಾರ್ಯಕ್ರಮದಲ್ಲಿ ಸಚಿವರು, ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸೆ.15ರಂದು ಬೆಳಗ್ಗೆ 9 ಗಂಟೆಯಿಂದ 9.30ರವರೆಗೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕು ಕುಮಾರಪಟ್ಟಣಂದಿಂದ ಕವಲೆತ್ತು- ಚಳಗೇರಿ- ರಾಣೆಬೆನ್ನೂರ- ಗುಡ್ಡದ ಆನ್ವೇರಿ-ಕೆರಿಮಲ್ಲಾಪೂರ- ಗುಡಿಹೊನ್ನತ್ತಿ- ಹಳೇಹೊನ್ನತ್ತಿ- ಮಾದಾಪೂರ, ತಿಮ್ಮಾಪೂರ- ಗುತ್ತಲ- ನೆಗಳೂರು- ಮರೋಳ- ಹಾಲಗಿ ಮಾರ್ಗವಾಗಿ ಲಕ್ಷ್ಮೇಶ್ವರ ತಾಲೂಕು ಬಾಲೇಹೊಸೂರವರೆಗೆ 75 ಕಿ.ಮೀ. ಮಾನವ ಸರಪಳಿ ನಿರ್ಮಿಸಲಾಗುವುದು.
ಈ ಮಾರ್ಗದ ಶಾಲಾ-ಕಾಲೇಜುಗಳನ್ನು ಗುರುತಿಸಲಾಗಿದ್ದು, ಪ್ರತಿ ಒಂದು ಕಿ.ಮೀ.ಗೆ ಒಂದು ಸಾವಿರ ವಿದ್ಯಾರ್ಥಿಗಳು ಭಾಗವಹಿಸುವರು. ಜಿಲ್ಲೆಯ ಎಲ್ಲ ಸಂಘ-ಸಂಸ್ಥೆಗಳು, ಕನ್ನಡಪರ ಸಂಘಟನೆಗಳು, ರೈತಪರ ಸಂಘಟನೆಗಳು, ದಲಿತ ಸಂಘಟನೆಗಳು, ಸಹಕಾರಿ ಸಂಘಟನೆಗಳು, ಸ್ತ್ರೀಶಕ್ತಿ ಸಂಘಗಳ ಸದಸ್ಯರು, ಕಲಾವಿದರು ಹಾಗೂ ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಕೋರಿದರು.
ಕಾರ್ಯಕ್ರಮದ ವ್ಯವಸ್ಥಿತ ನಿರ್ವಹಣೆ ಮಾಡಲು ಪ್ರತಿ ಎರಡೂವರೆ ಕಿ.ಮೀ.ಗೆ ಓರ್ವ ತಾಲೂಕು ಮಟ್ಟದ ನೋಡಲ್ ಅಧಿಕಾರಿ ಹಾಗೂ ಪ್ರತಿ ಐದು ಕಿ.ಮೀ.ಗೆ ಜಿಲ್ಲಾಮಟ್ಟದ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಪ್ರತಿ ಅರ್ಧ ಕಿ.ಮೀ.ಗೆ ಓರ್ವ ಎ.ಎಸ್.ಐ. ಹೆಡ್ ಕಾನ್‌ಸ್ಟೆಬಲ್, ಕಾನ್‌ಸ್ಟೆಬಲ್‌ರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ ಹಾಗೂ ಆರೋಗ್ಯ ಸಿಬ್ಬಂದಿ ನೇಮಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರಿಗೂ ತಮ್ಮ ಭಾವಚಿತ್ರವುಳ್ಳ ಪ್ರಮಾಣವನ್ನು ನೀಡಲಾಗುವುದು. ಭಾಗವಹಿಸುವವರು ವೆಬ್‌ಸೈಟ್https://www.democracydaykarnataka.in/registration ಲಿಂಕ್ ಮೂಲಕ ಹೆಸರು ನೋಂದಾಯಿಕೊಳ್ಳಬೇಕು ಹಾಗೂ ಆನ್‌ಲೈನ್ ಮೂಲಕ ಪ್ರಮಾಣಪತ್ರಗಳನ್ನು ಪಡೆದುಕೊಳ್ಳಬೇಕು ಎಂದು ಡಿಸಿ ಡಾ.ವಿಜಯಮಹಾಂತೇಶ, ಜಿಪಂ ಸಿಇಒ ಅಕ್ಷಯ ಶ್ರೀಧರ ಹಾಗೂ ಎಸ್‌ಪಿ ಅಂಶುಕುಮಾರ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಅಪರ ಜಿಲ್ಲಾಧಿಕಾರಿ ಪ್ರಜಾಪ್ರಭುತ್ವ ದಿನಾಚರಣೆ ಆಚರಣೆಯ ನಿಮಿತ್ತ ಜಿಲ್ಲೆಯಲ್ಲಿ ಮಾನವ ಸರಪಳಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ವಿವಿಧ ತಂಡಗಳನ್ನು ರಚಿಸಿ ಆ ತಂಡಗಳಿಗೆ (ಫಾರ್ಮ್ಯಾಟ್ )ಯೋಜನೆಗಳನ್ನು ರೂಪಿಸಿ ಸೂಕ್ತ ಸಲಹೆ, ಸೂಚನೆ ಹಾಗೂ ಮಾರ್ಗದರ್ಶನ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net