ಕೃಷಿ ಜತೆಗೆ ಕೈಗಾರಿಕೆಗಳಿಗೂ ಮಹತ್ವ ಕೊಡಬೇಕು; ಉದ್ಯಮಿಗಳಿಗೆ ಎಂಎಸ್‌ಎಂಇ ವರದಾನ; ರಫ್ತು ಉತ್ತೇಜನ ಕಾರ್ಯಾಗಾರದಲ್ಲಿ ಡಿಸಿ ದಾನಮ್ಮನವರ ಹೇಳಿಕೆ

29 HVR 6
Published on

ಹಾವೇರಿ: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂಎಸ್‌ಎಂಇ) ಸೆಕ್ಟರ್‌ನಲ್ಲಿ ಚೈನಾ ಅತಿ ದೊಡ್ಡ ಸಾಧನೆ ಮಾಡಿದೆ. 6.5 ಕೋಟಿ ಎಂಎಸ್‌ಎಂಇ ಹೊಂದಿದೆ. ಅದೇ ರಿತಿ ನಮ್ಮ ದೇಶದಲ್ಲೂ ಎಂಎಸ್‌ಎಂಇಗಳಿಗೆ ಹೆಚ್ಚು ಮಹತ್ವ ನೀಡಬೇಕು. ಕೃಷಿಯ ಜತೆಗೆ ಕೈಗಾರಿಕೆಗಳಿಗೂ ಮಹತ್ವ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

ನಗರದ ಶಿವಾ ರೆಸಿಡೆನ್ಸಿಯಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಹಾವೇರಿ ಹಾಗೂ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ (ವಿ.ಟಿ.ಪಿ.ಸಿ) ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಸಹಯೋಗದಲ್ಲಿ ಶುಕ್ರವಾರ ಎಂ.ಎಸ್.ಎಂ.ಇ.ಗಳ ಕಾರ್ಯಕ್ಷಮತೆ ಹೆಚ್ಚಿಸುವುದು ಮತ್ತು ವೇಗಗೊಳಿಸುವ ಯೋಜನೆಯಡಿ ಹಮ್ಮಿಕೊಂಡಿದ್ದ ಝಡ್.ಇ.ಡಿ./ಲೀನ್ ಯೋಜನೆ ಹಾಗೂ ರಫ್ತು ಕುರಿತ ಜಾಗೃತಿ ಕಾರ್ಯಾಗಾರದ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ಕೃಷಿ ಪ್ರಧಾನವಾದ ರಾಷ್ಟ್ರ. ಕೃಷಿ ರೈತರ ಬೆನ್ನೆಲುಬಾಗಿದ್ದು ದೇಶ ಅತಿ ಹೆಚ್ಚು ಕೃಷಿಯನ್ನೇ ಅವಲಂಬಿಸಿದೆ. ಭಾರತದಲ್ಲಿ 13 ಲಕ್ಷ ಎಂಎಸ್‌ಎಂಇಗಳು ನೋಂದಣಿಯಾಗಿವೆ. ಹಾವೇರಿ ಜಿಲ್ಲೆಯಿಂದ 8 ಸಾವಿರ ಎಂಎಸ್‌ಎಂಇಗಳು ನೋಂದಣಿಯಾಗಿವೆ. ದೇಶದಲ್ಲಿ 600ಕ್ಕಿಂತಲೂ ಹೆಚ್ಚು ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಎಲೆಕ್ಟ್ರಾನಿಕ್ ವಸ್ತುಗಳಿಂದ ಹಿಡಿದು ಔಷಧ ಉಪಕರಣಗಳವರೆಗೆ ವಸ್ತುಗಳು ಇಂದು ದೇಶಿಯವಾಗಿ ಉತ್ಪಾದನೆಯಾಗುತ್ತಿವೆ. ಇಂತಹ ಉತ್ಪನ್ನಗಳನ್ನು ಹೇಗೆ ಮಾರಾಟ ಮಾಡಬೇಕು. ಯಾವ ದೇಶಗಳಲ್ಲಿ ಮಾರಾಟಕ್ಕೆ ಅವಕಾಶಗಳಿವೆ. ರಿಯಾಯ್ತಿ ಏನಿವೆ, ಉತ್ಪನ್ನಗಳ ಕೋಡ್, ಗುಣಮಟ್ಟದ ಪ್ಯಾಕಿಂಗ್ ವಿಧಾನ, ಪರವಾನಗಿ ಇವೆಲ್ಲವುಗಳ ಅರಿವನ್ನು ಎಂಎಸ್‌ಎಂಇಗಳು ಉದ್ಯಮಿಗಳಿಗೆ ಮೂಡಿಸಲು ನೆರವಾಗಿವೆ ಎಂದರು.

ಎಂಎಸ್‌ಎಂಇಗಳಿಂದ ದೇಶದಲ್ಲಿ ಸಾಕಷ್ಟು ಅವಕಾಶಗಳಿದ್ದು, ಇಲ್ಲಿ ಜನರು ಉದ್ಯೋಗವಕಾಶಗಳನ್ನು ಹೆಚ್ಚು ಪಡೆದುಕೊಳ್ಳಬಹುದು. ಬೃಹತ್ ಉದ್ಯಮಗಳಲ್ಲಿ ನಾವುಗಳು ಅಷ್ಟಾಗಿ ಉದ್ಯೋಗಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಇಂತಹ ಉದ್ಯಮಗಳಲ್ಲಿ ಆಟೋಮಷಿನ್ ಬಳಕೆ ಹೆಚ್ಚಿಗೆ ಇರುವುದರಿಂದ ಮಾನವ ಸಂಪನ್ಮೂಲಗಳ ಬಳಕೆ ಕಡಿಮೆ ಇರುತ್ತದೆ. ಹೀಗಾಗಿ ಹೆಚ್ಚು ಹೆಚ್ಚು ಎಂಎಸ್‌ಎಂಇಗಳನ್ನು ಸ್ಥಾಪಿಸುವ ಮೂಲಕ ಕೈಗಾರಿಕಾ ವಲಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ರವಿ ಮೆಣಸಿನಕಾಯಿ ಮಾತನಾಡಿ, ಲೀನ್ ಯೋಜನೆಗಳು ಕೈಗಾರಿಕೋದ್ಯಮ ಹಾಗೂ ಇತರೆ ವ್ಯಾಪಾರಿಗಳಿಗೆ ಸಹಕಾರಿಯಾಗಿದೆ. ಜಿಲ್ಲೆಯ ಉದ್ಯಮಿಗಳು ಇದರ ಸಂಪೂರ್ಣ ಲಾಭ ಪಡೆದುಕೊಳ್ಳಬೇಕು ಎಂದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಅಶೋಕ ಪ್ಯಾಟಿ ಮಾತನಾಡಿ, ಲೀನ್ ಯೋಜನೆಗಳು ಕೈಗಾರಿಕೆ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಸೂಕ್ಷ್ಮ ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವಲ್ಲಿ ಲೀನ್ ಹೆಚ್ಚು ಅನುಕೂಲವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕ ಪ್ರಭುದೇವ ಎಸ್.ಜಿ., ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಸಹಾಯಕ ಪ್ರಧಾನ ವ್ಯವಸ್ಥಾಕ ಎನ್.ಭಾಸ್ಕರ, ಜಂಟಿ ಕಾರ್ಯದರ್ಶಿ ಕೇಶವಮೂರ್ತಿ, ಕಾಸಿಯಾ ಉಪಾಧ್ಯಕ್ಷ ನಿಂಗಣ್ಣ ಎಸ್. ಬಿರಾದಾರ, ಕಾಸಿಯಾ ಪ್ಯಾನೆಲ್ ಅಧ್ಯಕ್ಷ ಗಿರೀಶ ನಲವಡಿ, ಸಿ.ಎಚ್.ಅಂಗಡಿ, ರಮೇಶ ಬಳ್ಳಾರಿ, ಜಿಲ್ಲೆಯ ವಿವಿಧ ಕೈಗಾರಿಕೋದ್ಯಮಿಗಳು, ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲೆಯಿಂದ 570 ಕೋಟಿ ರೂ. ಪದಾರ್ಥ ವಿದೇಶಕ್ಕೆ

ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರವು ರಾಜ್ಯ ಸರ್ಕಾರದ ಅಂಗ ಸಂಸ್ಥೆಯಾಗಿದ್ದು, ರಫ್ತು ಉತ್ತೇಜನಕ್ಕೆ ಪ್ರಾಮುಖ್ಯತೆ ನೀಡುತ್ತದೆ. ದೇಶದಲ್ಲಿ ಕರ್ನಾಟಕವು ಐಟಿ ಮತ್ತು ಸರ್ವಿಸ್ ರಫ್ತು ಮಾಡುವಲ್ಲಿ ಪ್ರಥಮ ಸ್ಥಾನದಲ್ಲಿದೆ. ದೇಶದ ಒಟ್ಟು ರಫ್ತುವಿನಲ್ಲಿ ಕರ್ನಾಟಕ ಶೇ.40ರಷ್ಟು ಐಟಿ ಮತ್ತು ಸರ್ವಿಸ್‌ಗಳನ್ನು ರಫ್ತು ಮಾಡುತ್ತದೆ. ಇನ್ನೂ ವಸ್ತುಗಳ ರಫ್ತುವಿನಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿಯೇ 4ನೇ ಸ್ಥಾನದಲ್ಲಿದೆ. ರಾಜ್ಯದ 31 ಜಿಲ್ಲೆಗಳಿಂದಲೂ ವಿವಿಧ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತಿದೆ. 2024-25ನೇ ಸಾಲಿನಲ್ಲಿ ಹಾವೇರಿ ಜಿಲ್ಲೆಯಿಂದ 570 ಕೋಟಿ ರೂ. ಮೊತ್ತದ ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ. ಜಿಲ್ಲೆಯಿಂದ ಮುಖ್ಯವಾಗಿ ಚಿಲ್ಲಿ ಪೌಡರ್, ತರಕಾರಿ ಮುಂತಾದ ಪದಾರ್ಥಗಳನ್ನು ರಫ್ತು ಮಾಡಲಾಗುತ್ತದೆ ಎಂದು ಧಾರವಾಡ ವಿಟಿಪಿಸಿ ಉಪ ನಿರ್ದೇಶಕ ಟಿ.ಎಸ್.ಮಲ್ಲಿಕಾರ್ಜುನ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net