ಹಾವೇರಿ: ವಿದ್ಯುತ್ ದರ ಏರಿಕೆ ಖಂಡಿಸಿ ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಹಾವೇರಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಬೆಂಬಲ ಸೂಚಿಸಿ, ಜೂ.22ರಂದು ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ರವಿ ಮೆಣಸಿನಕಾಯಿ ತಿಳಿಸಿದರು.
ನಗರದ ಜೆಪಿ ರೋಟರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.22ರಂದು ಬೆಳಗ್ಗೆ 10.30ಕ್ಕೆ ನಗರದ ಪುರ ಸಿದ್ದೇಶ್ವರ ದೇವಸ್ಥಾನದಿಂದ ಮೆರವಣಿಗೆ ಆರಂಭಿಸಿ ಹೊಸಮನಿ ಸಿದ್ದಪ್ಪ ವೃತ್ತದ ವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಲಾಗುವುದು ಎಂದರು.
ಚುನಾವಣಾ ಸಂದರ್ಭದಲ್ಲಿ ಕೆಇಆರ್‌ಸಿ ವಿದ್ಯುತ್ ದರ ಹೆಚ್ಚಿಸಿದೆ. ರಾಜಕೀಯ ಪಕ್ಷದವರು ಆರೋಪ, ಪ್ರತ್ಯಾರೋಪ ಮಾಡುತ್ತಿದ್ದಾರೆ. ವ್ಯಾಪಾರಸ್ಥರಿಗೆ ಹಾಗೂ ಮನೆಗಳಿಗೆ ಪ್ರತಿ ಯೂನಿಟ್‌ಗೆ ಶುಲ್ಕ ದ್ವಿಗುಣಗೊಂಡಿದೆ. ಇದರಿಂದ ವಾಣಿಜ್ಯೋದ್ಯಮ ಸಂಸ್ಥೆಗಳಿಗೆ ಬಿಸಿ ತಟ್ಟಿದೆ. ಇದರಿಂದ ಗ್ರಾಹಕರಿಗೆ ದೊಡ್ಡ ಹೊರೆಯಾಗಿದೆ. ಹೆಚ್ಚಿನ ವಿದ್ಯುತ್ ಬಿಲ್ ಹಿಂಪಡೆಯುವಂತೆ ಹೆಸ್ಕಾಂ ಹಾಗೂ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರೂ ಹಿಂಪಡೆಯುತ್ತಿಲ್ಲ ಎಂದರು.
ಈ ಹಿನ್ನೆಲೆಯಲ್ಲಿ ಸಂಸ್ಥೆ ಹಮ್ಮಿಕೊಂಡಿರುವ ಪ್ರತಿಭಟನೆಗೆ ಜಿಲ್ಲೆಯ ಹೋಟೆಲ್ ಮಾಲೀಕರ ಸಂಘ, ಬಟ್ಟೆ ವ್ಯಾಪಾರಿಗಳ ಸಂಘ, ಸಣ್ಣ ಹಾಗೂ ದೊಡ್ಡ ವ್ಯಾಪಾರಸ್ಥರು, ದಲಾಲರು, ಕಿರಾಣಿ, ಎಪಿಎಂಸಿ ವರ್ತಕರು ಸೇರಿದಂತೆ ಇತರ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಗೌರವ ಕಾರ್ಯದರ್ಶಿ ಮಲ್ಲಿಕಾರ್ಜುನ ಹಂದ್ರಾಳ, ಬಾಬಣ್ಣ ಹಿರೇಗೌಡ್ರ, ಅಜಿತ್ ಮಾಗಾವಿ, ಆರ್.ಎಸ್.ಮಾಗನೂರ, ಎ.ಎಸ್.ಮಾಗನೂರ, ಶಿವರಾಜ ಮರ್ತೂರ, ಸತೀಶ ಚಿಕ್ಕಮಠ, ರಾಜಣ್ಣ ಕೋರಿ, ಇತರರಿದ್ದರು.