ಹಾವೇರಿಗೆ ಬೇಕು ಎರಡನೇ ಹಂತದ ಎಸ್ಟೇಟ್; ಇಜಾರಿ ಲಕಮಾಪುರ ಕೈಗಾರಿಕಾ ವಲಯ ಭರ್ತಿ; ಆಸಕ್ತಿ ತೋರಲಿ ಜಿಲ್ಲಾಡಳಿತ, ಜನಪ್ರತಿನಿಧಿಗಳು

Industrial Estate Serias 1
Published on

ಕೇಶವಮೂರ್ತಿ ವಿ.ಬಿ. ಹಾವೇರಿ
ಜಿಲ್ಲಾ ಕೇಂದ್ರ ಹಾವೇರಿ ಶಹರ ಹಾಗೂ ತಾಲೂಕಿನಲ್ಲಿ ಎರಡು ನದಿ (ತುಂಗಭದ್ರಾ ಹಾಗೂ ವರದಾ), ರಾಷ್ಟ್ರೀಯ ಹೆದ್ದಾರಿ, ರೈಲು ಮಾರ್ಗ, ಇನ್ನಿತರ ಅಗತ್ಯ ಸಂಪನ್ಮೂಲಗಳ ಲಭ್ಯತೆ ಇದ್ದರೂ ಇಲ್ಲಿ ಬೃಹತ್ ಕೈಗಾರಿಕೆಗಳ ಸ್ಥಾಪನೆ ಮಾಡಲು ಹಾಗೂ ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳುವಲ್ಲಿ ಇಲ್ಲಿನ ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಆಡಳಿತ ಸಾಕಷ್ಟು ತಯಾರಿ ಮಾಡಿಕೊಂಡಿಲ್ಲ ಎಂಬ ಆರೋಪಗಳಿವೆ.
ಇದೇ ಕಾರಣಕ್ಕೆ ಹಾವೇರಿ ಜಿಲ್ಲೆಯಾಗಿ 26 ವರ್ಷವಾದರೂ ಜಿಲ್ಲಾ ಕೇಂದ್ರ ಇಜಾರಿ ಲಕಮಾಪುರದಲ್ಲಿ ಕೇವಲ ನಾಲ್ಕು ಎಕರೆ ಜಾಗದಲ್ಲಿ 1992ರಲ್ಲಿ ನಿರ್ಮಾಣವಾದ ಇಂಡಸ್ಟ್ರಿಯಲ್ ಎಸ್ಟೇಟ್ ಬಿಟ್ಟರೆ ನಂತರದಲ್ಲಿ ಯಾವ ಅಭಿವೃದ್ಧಿ ಕಾಣಲಿಲ್ಲ. ಲಕಮಾಪುರದ ಎಸ್ಟೇಟ ಭರ್ತಿಯಾದ್ದರಿಂದ ಹಲವು ಕೈಗಾರಿಕೆಗಳು ಹಾವೇರಿ ಕೈತಪ್ಪಿ ಹೋಗುತ್ತಿವೆ. ಹಾಗಾಗಿ, ಜಿಲ್ಲಾ ಕೇಂದ್ರ ನಿರೀಕ್ಷಿತ ಮಟ್ಟದಲ್ಲಿ ಬೆಳೆಯುತ್ತಿಲ್ಲ. ಆರ್ಥಿಕವಾಗಿಯೂ ಹೊಡೆತ ಬೀಳುತ್ತಿದೆ.
ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ (ಕೆಎಸ್‌ಎಸ್‌ಐಡಿಸಿ) ವತಿಯಿಂದ 33 ವರ್ಷಗಳ ಹಿಂದೆ ಇಜಾರಿ ಲಕಮಾಪುರದಲ್ಲಿ ನಾಲ್ಕು ಎಕರೆ ಜಾಗದಲ್ಲಿ 10 ಮಳಿಗೆ ಹಾಗೂ 27 ನಿವೇಶನಗಳನ್ನು ಸ್ಥಾಪಿಸಲಾಗಿತ್ತು. ಆಗಲೇ ಇವುಗಳನ್ನು ಹಂಚಿಕೆ ಮಾಡಲಾಗಿದ್ದು, ಇದೀಗ ಎಲ್ಲವೂ ಭರ್ತಿಯಾಗಿವೆ. ಇನ್ನೂ ಹೆಚ್ಚಿನ ಕೈಗಾರಿಕೆಗಳ ಸ್ಥಾಪನೆಗಾಗಿ ಎರಡನೇ ಹಂತದ ಕೈಗಾರಿಕಾ ವಲಯ ಸ್ಥಾಪನೆ ಮಾಡುವುದು ಇಲ್ಲಿನ ಉದ್ಯಮಿಗಳ ಒತ್ತಾಸೆಯಾಗಿದೆ.
ಕೆಎಸ್‌ಆರ್‌ಟಿಸಿಗೆ ಸೇರಿದ್ದ ಜಾಗವನ್ನು ಕೆಎಸ್‌ಎಸ್‌ಐಡಿಸಿ ಖರೀದಿಸಿ ಇಜಾರಿ ಲಕಮಾಪುರ ಕೈಗಾರಿಕಾ ಎಸ್ಟೇಟ್ ಮಾಡಿತ್ತು. ಈಗಾಗಲೇ ಸೇಲ್‌ಡೀಡ್ ಮಾಡಿ ನಗರಸಭೆಗೆ ಹಸ್ತಾಂತರಿಸಲಾಗಿದೆ. ಈ ಸ್ವತ್ತು ಆಗಬೇಕಿದೆ. ಇಲ್ಲಿ ಸದ್ಯ ಟ್ರಾೃಕ್ಟರ್, ಟ್ರೇಲರ್, ಕೃಷಿ ಯಂತ್ರೋಪಕರಣ ತಯಾರಿಸುವ ಕೈಗಾರಿಕೆ, ಐಸ್ ಕ್ರೀಮ್ ಪ್ಲಾಂಟ್, ಇಂಜೆಕ್ಷನ್ ಟ್ಯೂಬ್ ತಯಾರಿಕಾ ಕೈಗಾರಿಕೆ, ಆಹಾರ ಸಂಸ್ಕರಣಾ ಘಟಕ, ಟೈರ್, ವುಡ್ ಫರ್ನಿಚರ್ ಇಂಡಸ್ಟ್ರಿ, ಐಟಿಐ ಕಾಲೇಜ್, ಸೇರಿದಂತೆ 20ಕ್ಕೂ ಅಧಿಕ ಕೈಗಾರಿಕೆಗಳಿವೆ.
ಲಕಮಾಪುರದ ಎಸ್ಟೇಟ್‌ನಲ್ಲಿ ಸ್ವಚ್ಛತೆಯ ಕೊರತೆ ಇದೆ. ಎಲ್ಲೆಂದರಲ್ಲಿ ಕಸದ ರಾಶಿ ಕಾಣುತ್ತದೆ. ಚರಂಡಿಗಳಲ್ಲಿ ನೀರು ಹರಿಯುವುದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕಿದೆ. ಎರಡನೇ ಹಂತದ ಎಸ್ಟೇಟ್ ಆರಂಭಕ್ಕೆ ಸಜ್ಜಾಗಬೇಕಿದೆ.
ತೋಟದ ಯಲ್ಲಾಪುರದ ಜಾಗ ತಟಸ್ಥ
ಹಾವೇರಿ ತಾಲೂಕಿನ ತೋಟದ ಯಲ್ಲಾಪುರದಲ್ಲಿ ಈ ಹಿಂದೆ ಕೆಎಸ್‌ಎಸ್‌ಐಡಿಸಿ ವತಿಯಿಂದ 45 ಎಕರೆ ನೋಟಿಫಿಕೇಶನ್ ಮಾಡಲಾಗಿತ್ತು. ಆದರೆ, ಅಲ್ಲಿ ರೈತರು ಭೂಮಿ ಬಿಟ್ಟುಕೊಡಲು ಹಿಂದೇಟು ಹಾಕಿದರು. ಹಾಗಾಗಿ, ಹತ್ತಾರು ವರ್ಷಗಳಿಂದ ಎರಡನೇ ಹಂತದ ಎಸ್ಟೇಟ್ ನಿರ್ಮಾಣ ಕನಸು ಈಡೇರಿಲ್ಲ. ಜನಪ್ರತಿನಿಧಿಗಳು, ಅಧಿಕಾರಿ ವರ್ಗ ಇದಕ್ಕೆ ಸೂಕ್ತ ಜಾಗ ಹುಡುಕಿ, ರೈತರಿಗೆ ಸೂಕ್ತ ಪರಿಹಾರ ಕೊಟ್ಟು ಎರಡನೇ ಹಂತ ಆರಂಭಿಸಬೇಕು ಎನ್ನುತ್ತಾರೆ ಕೈಗಾರಿಕೋದ್ಯಮಿಗಳು.

ಕೋಟ್:
ಇಜಾರಿ ಲಕಮಾಪುರದ ಕೈಗಾರಿಕಾ ವಸಾಹತು ನಿರ್ಮಾಣಗೊಂಡು 33 ವರ್ಷಗಳಾಗಿವೆ. ಇದು ತುಂಬ ಚಿಕ್ಕದಾಗಿದ್ದು, ಹೆಚ್ಚಿನ ಕೈಗಾರಿಕೆಗಳ ಸ್ಥಾಪನೆಗೆ ಎರಡನೇ ಹಂತದ ಎಸ್ಟೇಟ್ ನಿರ್ಮಾಣ ಮಾಡಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಇದೆ. ಈ ಬಗ್ಗೆ ಶಾಸಕರು, ಜಿಲ್ಲಾಧಿಕಾರಿಗಳು ಮುತುವರ್ಜಿ ವಹಿಸಬೇಕು.
- ರಮೇಶ ಬಳ್ಳಾರಿ, ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಕೈಗಾರಿಕೆಗಳ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net