

ಹಾವೇರಿ: ಜಿಲ್ಲೆಯಲ್ಲಿ ಎಷ್ಟೇ ಅತಿವೃಷ್ಠಿ, ಅನಾವೃಷ್ಠಿ ಎದುರಾದರೂ ಅವುಗಳನ್ನು ಸಮರ್ಥವಾಗಿ ಎದುರಿಸಿದ ಸಂತೃಪ್ತಿ ನಮ್ಮ ಸರ್ಕಾರಕ್ಕಿದ್ದು, ಜಿಲ್ಲೆಯ ನೀರಾವರಿ ಯೋಜನೆಗಳು, ಕೃಷಿ, ತೋಟಗಾರಿಕೆ, ಶೈಕ್ಷಣಿಕ, ಆರೋಗ್ಯ ಹಾಗೂ ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳ ಸರ್ವಾಂಗೀಣ ಅಭಿವೃದ್ಧಿ ನಮ್ಮ ಸಂಕಲ್ಪವಾಗಿದೆ. ಇದಕ್ಕೆ ನಮ್ಮ ಜಿಲ್ಲೆಯ ಜನತೆಯ ಸಹಕಾರ ಅಗತ್ಯವಾಗಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಹಾವೇರಿ ಜಿಲ್ಲೆ ವಿಶಿಷ್ಟ ಸಂಸ್ಕೃತಿ, ವಿಚಾರಧಾರೆ, ಸಹೋದರತ್ವವನ್ನು ಪೋಷಿಸಿದ ಭೂಮಿ. ಈ ನೆಲದಲ್ಲಿ ಶಿಶುನಾಳ ಷರೀಫರು, ಕನಕದಾಸರು, ಸರ್ವಜ್ಞರು ಜನಿಸಿ ಭ್ರಾತೃತ್ವ, ಸೋದರತೆ, ಜಾತ್ಯಾತೀತ ಪರಂಪರೆಯನ್ನು ನಮಗೆ ಬಿಟ್ಟುಹೋಗಿದ್ದಾರೆ. ನಾವೆಲ್ಲರೂ ಅದನ್ನು ಬೆಳೆಸಿಕೊಂಡು ಹೋಗಬೇಕಿದೆ. ದೇಶದ ಸಮಗ್ರತೆ, ರಾಷ್ಟ್ರಾಭಿಮಾನವನ್ನು ಎತ್ತಿಹಿಡಿಯೋಣ. ದೇಶದ ರಕ್ಷಣೆಗೆ ಹಾಗೂ ಭಯೋತ್ಪಾದನೆ ನಿರ್ಮೂಲನೆ ಎಲ್ಲರೂ ಕಂಕಣಬದ್ಧರಾಗೋಣ ಎಂದರು.
ಸ್ವಾತಂತ್ರ್ಯ ಹೋರಾಟದಲ್ಲಿ ದೇಶದೊಂದಿಗೆ ಜಿಲ್ಲೆಯ ಈ ನೆಲ ಕೂಡ ತನ್ನ ಹೆಜ್ಜೆ ಗುರುತುಗಳನ್ನು ಮೂಡಿಸಿದೆ. ಅಖಂಡ ಧಾರವಾಡ ಜಿಲ್ಲೆಯ ಭಾಗವಾಗಿದ್ದ ಇಂದಿನ ಹಾವೇರಿ ಜಿಲ್ಲೆಯ ಅನೇಕ ಮಹನೀಯರು ಭಾರತ ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಪ್ರಾದೇಶಿಕ ಶಕ್ತಿಯನ್ನು ಮೆರೆದಿದ್ದಾರೆ. ಶಿವಪ್ಪ ನೇಸ್ವಿ, ಹೊಸಮನಿ ಸಿದ್ದಪ್ಪ ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಹೆಜ್ಜೆಗುರುತುಗಳು ಭಾರತದ ಸ್ವಾತಂತ್ರ್ಯ ಹೋರಾಟದ ಚರಿತ್ರೆಯಲ್ಲಿ ಅಚ್ಚಳಿಯದೇ ಉಳಿದಿವೆ ಎಂದರು.
ನಮ್ಮ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳು ರಾಜ್ಯದ ಮತ್ತು ಜಿಲ್ಲೆಯ ಜನತೆಗೆ ಹೊಸ ಚೈತನ್ಯ ನೀಡಿವೆ. ಅಭಿವೃದ್ಧಿಯ ಅನೇಕ ಕನಸುಗಳನ್ನು ರಾಜ್ಯ ಸರ್ಕಾರ ಕಟ್ಟಿಕೊಂಡಿದೆ. ಅವುಗಳ ಸಾಕಾರಕ್ಕಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ರಾಜಕೀಯ ಸ್ವಾತಂತ್ರ್ಯದ ಜತೆಗೆ ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರೃವನ್ನೂ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವುದೇ ಅರ್ಥಪೂರ್ಣ ಸ್ವಾತಂತ್ರೊೃೀತ್ಸವ ಆಚರಣೆ. ಅಧಿಕಾರ, ಅವಕಾಶ ಮತ್ತು ಸಂಪತ್ತು ಸಮಾಜದ ಎಲ್ಲ ಜನರಿಗೂ ಹಂಚಿಕೆಯಾಗಬೇಕೆಂಬುದು ಪ್ರಜಾಪ್ರಭುತ್ವದ ಮೂಲ ಆಶಯ. ಇದು ನಮ್ಮ ಸರ್ಕಾರದ ಧ್ಯೇಯವೂ ಆಗಿದೆ. ಈ ನಿಟ್ಟಿನಲ್ಲಿ ಜನಪರವಾಗಿರುವ ಅನೇಕ ಕಾರ್ಯಕ್ರಮಗಳು ಸಾಕ್ಷಿಯಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಂ.ಎಂ.ಹಿರೇಮಠ, ನಗರಸಭೆ ಅಧ್ಯಕ್ಷೆ ಶಶಿಕಲಾ ರಾಮು ಮಾಳಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್.ಗಾಜಿಗೌಡ್ರ, ಎಂ.ಎಂ.ಮೈದೂರ, ಮಲ್ಲಿಕಾರ್ಜುನ ಸಾತೇನಹಳ್ಳಿ, ಸಂಜೀವಕುಮಾರ ನೀರಲಗಿ, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಬಿಂದಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಎಡಿಸಿ ಡಾ.ನಾಗರಾಜ ಎಲ್., ಎಎಸ್‌ಪಿ ಲಕ್ಷ್ಮಣ ಶಿರಕೋಳ, ಎಸಿ ಕಲ್ಯಾಣಿ ಕಾಂಬಳೆ, ತಹಸೀಲ್ದಾರ್ ಶರಣಮ್ಮ ಕೆ., ಕೊಟ್ರೇಶಪ್ಪ ಬಸೇಗಣ್ಣಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಇತರರು ಉಪಸ್ಥಿತರಿದ್ದರು.
ಆಕರ್ಷಕ ಪಥಸಂಚಲನ:
ಧ್ವಜಾರೋಹಣ ನಂತರ ಸಚಿವರು ಅಲಂಕೃತ ತೆರೆದ ವಾಹನದಲ್ಲಿ ಗೌರವ ವಂದನೆ ಸ್ವೀಕರಿಸಿದರು. ಬಳಿಕ ಸಶಸ್ತ್ರಮೀಸಲು ಪಡೆ, ನಾಗರಿಕ ಪೊಲೀಸ್, ಅಬಕಾರಿ, ಅರಣ್ಯ, ಗೃಹರಕ್ಷಕದಳ, ಎನ್.ಸಿ.ಸಿ., ಸ್ಕೌಟ್ ಆಂಡ್ ಗೌಡ್ಸ್ ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳು ಸೇರಿ 15 ತಂಡಗಳಿಂದ ಆಕರ್ಷಕ ಪಥಸಂಚಲನ ಜರುಗಿತು.
15 ಸಾಧಕರಿಗೆ ಸನ್ಮಾನ
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಜಿಲ್ಲೆಯ 15 ಸಾಧಕರನ್ನು ಸಚಿವರು ಸನ್ಮಾನಿಸಿದರು. ವನ್ಯಜೀವಿ ಸಂರಕ್ಷಣೆ ಕ್ಷೇತ್ರದಿಂದ ಶ್ರೀಕಾಂತ ಮರಿಯಮ್ಮನವರ, ಮಹ್ಮದ್‌ಇಸಾಕ್ ಕುಸನೂರ, ಗಸ್ತು ಅರಣ್ಯ ಪಾಲಕ ಕೃಷ್ಣ ನಾಯ್ಕ, ಸಮಾಜ ಸೇವೆ ಕ್ಷೇತ್ರದಿಂದ ಉಡಚಪ್ಪ ಮಾಳಗಿ, ಅಬ್ದುಲ್‌ಖಾದರ್ ಧಾರವಾಡ, ಶೌರ್ಯ ಕ್ಷೇತ್ರದಿಂದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿನಾಯಕ ಹಟ್ಟೇಕರ್, ವಿರೇಶ ತೆಗ್ಗಿನ್, ಕ್ರೀಡಾ ಕ್ಷೇತ್ರದಿಂದ ಅಮೂಲ್ಯ ಮಾಜಿಗೌಡ್ರ, ಮನೀಷಾ ಕಬ್ಬೂರ, ಕುಬೇರ ಓಲೇಕಾರ, ಸಾಹಿತ್ಯ ಕ್ಷೇತ್ರದಿಂದ ಲತಾ ಹಳಕೊಪ್ಪ, ಅನಿತಾ ಮಂಜುನಾಥ, ಆನಂದ ದೊಡ್ಡಕುರಬರ, ಸಂಘ-ಸಂಸ್ಥೆಯಿಂದ ಎಂ.ಬಿ.ಸತೀಶ ಹಾಗೂ ಜಂಟಿ ಕೃಷಿ ನಿರ್ದೇಶಕ ಡಾ.ಕೆ.ಮಲ್ಲಿಕಾರ್ಜುನ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಮಳೆಯಲ್ಲೂ ಮಕ್ಕಳ ನೃತ್ಯದ ಝಲಕ್
ಆಪರೇಷನ್ ಸಿಂಧೂರ ಸೇರಿದಂತೆ ಶಾಲಾ ವಿದ್ಯಾರ್ಥಿಗಳಿಂದ ಜರುಗಿದ ವಿವಿಧ ದೇಶಭಕ್ತಿಗಳ ನೃತ್ಯಪ್ರದರ್ಶನ ನೋಡುಗರ ಕಣ್ಮನ ಸೆಳೆಯಿತು. ನಿರಂತರ ಮಳೆಯ ನಡುವೆಯೂ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ನೃತ್ಯ ಪ್ರದರ್ಶಿಸುವ ಮೂಲಕ ರಾಷ್ಟ್ರಾಭಿಮಾನ ಮರೆದರು.