ಸೇನೆ ಕರೆಯ ಮೇರೆಗೆ ಕರ್ತವ್ಯಕ್ಕೆ ಮರಳಿದ ಯೋಧರು; ಮಾಜಿ ಸೈನಿಕರು, ಕುಟುಂಬಸ್ಥರಿಂದ ಆತ್ಮೀಯ ಬೀಳ್ಕೊಡುಗೆ; ರೈಲಿನ ಮೂಲಕ ದೆಹಲಿಯತ್ತ ಪ್ರಯಾಣ

10 HVR 10 D
Published on

ಹಾವೇರಿ: ಪಹಲ್ಗಾಮ್ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ಭಾರತೀಯ ಸೇನೆಯ ತುರ್ತು ಕರೆಯ ಮೇರೆಗೆ ಜಿಲ್ಲೆಯ ಐವರು ಯೋಧರು ರಜೆ ಮೊಟಕುಗೊಳಿಸಿ ಕರ್ತವ್ಯಕ್ಕೆ ಮರಳಿದರು.

ರಜೆಯ ಮೇಲೆ ಊರಿಗೆ ಬಂದಿದ್ದ ಯೋಧರು, ಕುಟುಂಬಸ್ಥರು, ಸ್ನೇಹಿತರೊಂದಿಗೆ ಕಾಲ ಕಳೆಯುತ್ತಿದ್ದರು. ಇಂಡೋ- ಪಾಕ್ ಯುದ್ದದ ಹಿನ್ನೆಲೆಯಲ್ಲಿ ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಸೇನೆಯಿಂದ ತುರ್ತು ಕರೆ ಬಂದಿದೆ. ಹಾಗಾಗಿ, ಸೈನಿಕರು ರಜೆಯನ್ನು ಅರ್ಧಕ್ಕೆ ಕೈಬಿಟ್ಟು ದೇಶ ಸೇವೆಗಾಗಿ ಹೊರಟರು.

ಹೀಗೆ ಜಿಲ್ಲೆ ಹಾಗೂ ಅಕ್ಕಪಕ್ಕದ ಜಿಲ್ಲೆಯ ಐವರು ಯೋಧರು ಶನಿವಾರ ಸಂಜೆ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲಿನ ಮೂಲಕ ದೆಹಲಿಯತ್ತ ಹೊರಡಲು ಸಜ್ಜಾಗಿ ರೈಲು ನಿಲ್ದಾಣಕ್ಕೆ ಬಂದಿದ್ದರು. ವಿಷಯ ತಿಳಿದ ಮಾಜಿ ಸೈನಿಕರು, ಕುಟುಂಬಸ್ಥರು, ಸ್ನೇಹಿತರು, ಸರ್ವಜನಿಕರು ಸೈನಿಕರನ್ನು ಸನ್ಮಾನಿಸಿ, ಬೀಳ್ಕೊಟ್ಟರು. ಸೈನಿಕರು ರೈಲು ಹತ್ತುತ್ತಿದ್ದಂತೆ ‘ಭಾರತ್ ಮಾತಾಕಿ ಜೈ’ ಎಂದು ಘೋಷಣೆ ಕೂಗಿ ದೇಶಭಕ್ತಿ ಮೆರೆದರು.

ಹಾವೇರಿ ನೆಹರು ನಗರದ ಮಾರುತಿ ಈಳಿಗೇರ (ಎಎಸ್‌ಸಿ), ಬಸ್ತಿ ಓಣಿಯ ಸಂಜೀವ ಸಂಗೂರ (ಸಿಆರ್‌ಪಿಎಫ್), ಹಾವೇರಿ ತಾಲೂಕು ನೆಲೊಗಲ್ಲ ಗ್ರಾಮದ ಶಶಾಂಕ ಎನ್.ಆರ್. (ಬಿಎಸ್‌ಎಫ್), ರಾಣೆಬೆನ್ನೂರಿನ ಪ್ರಭುಲಿಂಗ ಸೊಬರದ (ಬಿಎಸ್‌ಎಫ್), ಚಿತ್ರದುರ್ಗದ ಪ್ರದೀಪಕುಮಾರ (ಸಿಆರ್‌ಪಿಎಫ್, ದೆಹಲಿ) ಐವರು ಯೋಧರು ದೆಹಲಿಯತ್ತ ಪ್ರಯಾಣ ಬೆಳೆಸಿದರು. ಅಲ್ಲಿಂದ ಎಲ್ಲರೂ ದೆಹಲಿ, ಜಮ್ಮುಕಾಶ್ಮೀರಕ್ಕೆ ತೆರಳಲಿದ್ದಾರೆ.

ನಿವೃತ್ತ ಯೋಧರಾದ ಎಂ.ಡಿ ಚಿಕ್ಕಣ್ಣನವರ, ನೂರ್ ಅಹ್ಮದ್ ಕೊತ್ವಾಲ, ನಿವೃತ್ತ ಕ್ಯಾಪ್ಟನ್ ಎಂ.ಬಿ ಬಣಕಾರ, ಉಪತಹಸೀಲ್ದಾರ್ ಅಮೃತಗೌಡ ಪಾಟೀಲ, ಇತರರಿದ್ದರು.

ಯುದ್ಧ ಭೂಮಿಗೆ ಹೋಗಲು ರೆಡಿ

ಚಿಕ್ಕ ವಯಸ್ಸಿನಲ್ಲಿಯೇ ದೇಶ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಬದ್ಧ ವೈರಿಯಾದ ಪಾಕಿಸ್ತಾನದ ವಿರುದ್ಧ ಹೋರಾಡಲು ಅವಕಾಶ ಸಿಕ್ಕಿರುವುದು ಖುಷಿ ತಂದಿದೆ. ಯುದ್ಧದ ಭೂಮಿಗೆ ಹೋಗಲು ಸಿದ್ಧವಾಗಿಯೇ ಹೊರಟಿದ್ದೇನೆ ಎಂದು 23 ವರ್ಷದ ಹಾವೇರಿ ನೆಲೋಗಲ್ಲ ಮೂಲದ ಬಿಎಸ್‌ಎಫ್ ಜಮ್ಮು ರಜೋರಿಯ ಯೋಧ ಶಶಾಂಕ ಎನ್.ಆರ್. ಹೆಮ್ಮೆಯಿಂದ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net