

ಹಾವೇರಿ: ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನೀಡಿದ ಪ್ರಣಾಳಿಕೆಯಲ್ಲಿನ ಐದು ಗ್ಯಾರಂಟಿಗಳ ಪೈಕಿ ಮೊದಲ ಗ್ಯಾರಂಟಿ ಶಕ್ತಿ ಯೋಜನೆ ಈಗ ಜಾರಿಯಾಗಿದ್ದು, ಉಳಿದ ಯೋಜನೆಗಳೂ ಶೀಘ್ರದಲ್ಲೇ ಜಾರಿಯಾಗಲಿವೆ. ದೇಶದಲ್ಲಿ ಯಾವುದೇ ರಾಜ್ಯದಲ್ಲಿ ಇಂತಹ ಚಿಂತನೆ ನಡೆದಿಲ್ಲ. ಈ ಯೋಜನೆಗಳ ಮೂಲಕ ರಾಜ್ಯದ ಮಹಿಳೆಯರ ಮೇಲಿನ ಭಾರ ಇಳಿಯಲಿದೆ ಎಂದು ನೂತನ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಾವೇರಿ ವಿಭಾಗದ ವತಿಯಿಂದ ಹಾವೇರಿ ಜಿಲ್ಲಾ ಕೇಂದ್ರ ಬಸ್ ನಿಲ್ದಾಣದಲ್ಲಿ ಭಾನುವಾರ ಆಯೋಜಿಸಿದ್ದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ ‘ಶಕ್ತಿ’ ಯೋಜನೆಗೆ ಅಧಿಕೃತ ಚಾಲನೆ ನೀಡಿ ಮಾತನಾಡಿದರು.
ರಾಜ್ಯದ ಮಹಿಳೆ ಸಬಲೆ. ಆಕೆ ಸ್ವಾವಲಂಬಿ ಆಗಬೇಕು. ಆಕೆ ಮನೆಯ ಚಿಂತೆ ಮಾಡದಂಥ ಯೋಜನೆಗಳನ್ನು ನಾವು ಜಾರಿ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಸಿದೆ. ಇದರ ಹೊರೆ ನೇರವಾಗಿ ಹೆಣ್ಣು ಮಕ್ಕಳ ಮೇಲೆ ಬೀಳುತ್ತದೆ. ಇಂತಹ ಹೊರೆ ಇಳಿಸುವ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಕೊಟ್ಟಿದೆ. ಇಂತಹ ಎಷ್ಟೇ ಹೊರೆ ಬಂದರೂ ನಿಭಾಯಿಸುವ ಶಕ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿದೆ. ಈ ಮೂಲಕ ಕೆಎಸ್‌ಆರ್‌ಟಿಸಿಗೆ ಶಕ್ತಿ ತುಂಬುವ ಕೆಲಸವನ್ನೂ ಮಾಡಿದ್ದೇವೆ ಎಂದರು.
ಒಂದು ಯೋಜನೆ ಜಾರಿಯಾಗುವಾಗ ಪ್ರತಿಪಕ್ಷದವರು ಟೀಕಿಸುವುದು ಸಾಮಾನ್ಯ. ಆದರೆ, ನೂರಕ್ಕೆ 95ರಷ್ಟು ಜನರು ಐದು ಗ್ಯಾರಂಟಿ ಯೋಜನೆ ಜಾರಿಯಾಗಬೇಕು ಎಂದು ಭಾವಿಸಿದ್ದಾರೆ. ಟೀಕೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಪರ್ಧಾತ್ಮಕವಾಗಿ ಸ್ವೀಕರಿಸಿದ್ದಾರೆ ಎಂದರು.
ಬಡವರಿಗಾಗಿ ಶಕ್ತಿ ಯೋಜನೆ ಜಾರಿಗೆ ತಂದಿದ್ದೇವೆ. ಆದರೆ, ದುಡ್ಡು ಕೊಟ್ಟು ಹೋಗುವವರಿಗೆ ಸ್ವಾಗತ ಮಾಡುತ್ತೇವೆ. ಪ್ರಧಾನಿ ಉಜ್ವಲ ಯೋಜನೆಯಲ್ಲಿ ಗ್ಯಾಸ್ ಕೊಟ್ಟರು. ಕೆಲವರು ವಾಪಸ್ ಕೊಟ್ಟರು. ಅಂಥವರನ್ನು ನಾವೂ ಸ್ವಾಗತಿಸುತ್ತೇವೆ ಎಂದರು.
ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಮೊದಲ ಭರವಸೆ ಈಡೇರಿದೆ. ಇದನ್ನು ನಾಡಿನ ಮಹಿಳೆಯರು ಸದುಪಯೋಗಪಡಿಸಿಕೊಳ್ಳಬೇಕು. ಒಳ್ಳೆಯ ಸಚಿವರನ್ನು ಸಿಎಂ ನಮ್ಮ ಜಿಲ್ಲೆಗೆ ಉಸ್ತುವಾರಿಯನ್ನಾಗಿ ಕೊಟ್ಟಿದ್ದಾರೆ. ಅವರನ್ನು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬಳಸಿಕೊಳ್ಳುತ್ತೇವೆ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಮಾತನಾಡಿ, ನುಡಿದಂತೆ ನಡೆದ ಸರ್ಕಾರ ಕಾಂಗ್ರೆಸ್ ಸರ್ಕಾರ. ಐದೂ ಕಾರ್ಯಕ್ರಮಗಳನ್ನು ಘೋಷಿಸಿದ್ದೇವೆ. ಶಕ್ತಿ ಇದೊಂದು ಕ್ರಾಂತಿಕಾರಕ ಕಾರ್ಯಕ್ರಮ. ಇದರಿಂದ ಮಹಿಳೆಯರಿಗೆ ಶಕ್ತಿ ಸಿಕ್ಕಿದೆ. ನಾಲ್ಕು ಗ್ಯಾರಂಟಿಗಳನ್ನೂ ಜಾರಿಗೊಳಿಸುತ್ತೇವೆ. ಸ್ವಲ್ಪ ಸಮಯ ಬೇಕು. ಒಳ್ಳೆಯ ಆಡಳಿತ ಕೊಡುತ್ತೇವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ರುದ್ರಪ್ಪ ಲಮಾಣಿ ಮಾತನಾಡಿ, ವಿರೋಧ ಪಕ್ಷ ಸೇರಿ ಅನೇಕರು ಚುನಾವಣೆ ಆದ ಕೂಡಲೇ ‘ಕರೆಂಟ್‌ಬಿಲ್ ಕಟ್ಟಬೇಡಿ. ಬಸ್ ಟಿಕೆಟ್ ತೆಗೆದುಕೊಳ್ಳಬೇಡಿ’ ಎಂದು ಗೇಲಿ ಮಾಡುತ್ತಿದ್ದರು. ಮದುವೆ ಆದ ಮೇಲೆ ಮಗು ಆಗಲು ಕನಿಷ್ಠ 9 ತಿಂಗಳು ಬೇಕು. ಒಂದು ತಿಂಗಳು ಆಗದಿದ್ದರೂ ಬಿಜೆಪಿ ಅಪಪ್ರಚಾರ ಮಾಡಿತು. ಮೋದಿ 15 ಲಕ್ಷ ರೂ. ಕೊಡುವುದಾಗಿ ದೊಡ್ಡ ಸುಳ್ಳು ಹೇಳಿ ಪ್ರಧಾನಿ ಆದರು. ಜಿಎಸ್‌ಟಿ ಕುರಿತು ತುಟಿ ಪಿಟಕ್ ಎನ್ನದ ಸಂಸದರು ನಮ್ಮ ಬಗ್ಗೆ ಮಾತನಾಡುತ್ತಿದ್ದಾರೆ. ಇವರಿಗೆ ನಾಚಿಕೆ ಆಗಬೇಕು ಎಂದು ಛೇಡಿಸಿದರು.
ಸಮಾರಂಭದಲ್ಲಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ, ವಾಕರಸಾ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಶಶಿಧರ ಮರಿದೇವರಮಠ, ಮಾಜಿ ಸಂಸದ ಮಂಜುನಾಥ ಕುನ್ನೂರ, ಸೋಮಣ್ಣ ಬೇವಿನಮರದ, ಯಾಸೀರ್‌ಖಾನ್ ಪಠಾಣ, ಸಂಜೀವಕುಮಾರ ನೀರಲಗಿ, ಸತೀಶ ಕಾಡನವರ, ಮತ್ತಿತರರು ಪಾಲ್ಗೊಂಡಿದ್ದರು.
ನಾನು ಆಸೆ ಪಟ್ಟು ಜಿಲ್ಲೆಗೆ ಬಂದಿಲ್ಲ
ಹಾವೇರಿ ಜಿಲ್ಲೆಯಲ್ಲಿ ಮಂತ್ರಿಗಳ ಬರ ಇದೆ. ನಾನು ಈ ಜಿಲ್ಲೆಗೆ ಬರಬೇಕು ಎಂದು ಆಸೆ ಪಟ್ಟಿಲ್ಲ. ನಾನು ಎಷ್ಟು ದಿನ ಇರುತ್ತೇನೆ ಅಷ್ಟು ದಿನ ಜಿಲ್ಲೆಗಾಗಿ ಕೆಲಸ ಮಾಡುತ್ತೇನೆ. ನಂತರ ಜಿಲ್ಲೆಯ ಶಾಸಕರೂ ಒಂದು ದಿನ ಮಂತ್ರಿಯಾಗಿ ಮುಂದುವರಿಸಲೆಂದು ಹಾರೈಸುತ್ತೇನೆ. ಇಲ್ಲಿನ ಶಾಸಕರ ಸಹಕಾರದಿಂದ ಜಿಲ್ಲೆಯ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ಕೋಟ್:
ವಿರೋಧ ಪಕ್ಷದವರು ಎಷ್ಟು ಟೀಕೆ ಮಾಡುತ್ತಾರೋ ಅಷ್ಟು ಯೋಜನೆಗಳನ್ನು ನಾವು ಹೆಚ್ಚು ತರಲು ಸಾಧ್ಯವಾಗುತ್ತದೆ. ಮಹಿಳೆಯರ ಪ್ರಯಾಣ ಸುಖಕರವಾಗಿರಲಿ. ಅವಶ್ಯಕತೆಗೆ ಅನುಗುಣವಾಗಿ ಪ್ರಯಾಣ ಮಾಡಿ. ಅನವಶ್ಯಕವಾಗಿ ಪ್ರಯಾಣ ಮಾಡಿ ಸಮಾಜಕ್ಕೆ ಹೊರೆ ಮಾಡಬೇಡಿ. ಮೇಲಿಂದ ಮೇಲೆ ಪ್ರಯಾಣಿಸಿದರೆ ಕುಟುಂಬ ನಡೆಸುವುದು ಕಷ್ಟ ಆಗುತ್ತದೆ.
- ಶಿವಾನಂದ ಪಾಟೀಲ, ಉಸ್ತುವಾರಿ ಸಚಿವ