

ಹಾವೇರಿ: ಮಾನವ ಹಕ್ಕುಗಳ ಆಯೋಗದ ರೀತಿಯ ಹೆಸರಲ್ಲಿ ಕೆಲ ಸಂಸ್ಥೆ ಸ್ಥಾಪಿಸಿ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಡಾ.ಟಿ.ಶ್ಯಾಮ್ ಭಟ್ ಎಚ್ಚರಿಕೆ ನೀಡಿದರು.
ತಾಲೂಕಿನ ದೇವಗಿರಿಯ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಯೋಗದಿಂದ ಯಾರನ್ನೂ ನೇಮಿಸಿಲ್ಲ. ಯಾವ ಸಂಸ್ಥೆಯನ್ನೂ ಅಂಗೀಕರಿಸಿಲ್ಲ. ಇಂತಹ ಕಿರುಕುಳದ ಎರಡು ಪ್ರಕರಣ ನಮ್ಮ ಗಮನಕ್ಕೆ ಬಂದಿದೆ. ‘ನ್ಯಾಷನಲ್ ಹ್ಯೂಮನ್ ರೈಟ್ ಕಮಿಷನ್’ ಎಂದು ಕಾರಿನ ಮೇಲೆ ಬರೆದುಕೊಂಡಿದ್ದವರ ಮೇಲೆ ಮೊನ್ನೆ ಕೇಸ್ ಮಾಡಲಾಗಿದೆ. ಇಂಥವರು ಕಂಡುಬಂದಲ್ಲಿ ಆಯೋಗಕ್ಕೆ ದೂರು ನೀಡಿ. ಈ ರೀತಿ ಹೆಸರು ನೋಂದಣಿ ಆಗದಂತೆ ಚಿಂತನೆ ನಡೆದಿದೆ ಎಂದು ತಿಳಿಸಿದರು.
ಎಲ್ಲ ಸಮಸ್ಯೆಗೂ ಬೆಂಗಳೂರಿಗೆ ಬರುವುದನ್ನು ತಪ್ಪಿಸಲು, ಸಮಯ ಉಳಿತಾಯ ಮಾಡಲು ಪ್ರತಿ ಜಿಲ್ಲೆಗೂ ನಮ್ಮ ತಂಡ ಭೇಟಿ ನೀಡಿ ಪರಿಶೀಲಿಸುತ್ತಿದೆ. ಈಗಾಗಲೇ 12 ಜಿಲ್ಲೆಗೆ ಭೇಟಿ ನೀಡಲಾಗಿದ್ದು, ಹಾವೇರಿ 13ನೇ ಜಿಲ್ಲೆಯಾಗಿದೆ. ಹಾವೇರಿಯಲ್ಲಿ ಇಂದು ಎಂಟು ಅಹವಾಲು ಬಂದಿದ್ದವು. ಮನೆಹಾನಿ ಪರಿಹಾರ ಸೇರಿದಂತೆ ಏಳು ಅಹವಾಲುಗಳನ್ನು ಇಲ್ಲೇ ಇತ್ಯರ್ಥಪಡಿಸಲಾಯಿತು. ಸೈನಿಕರಿಗೆ ಜಮೀನು ನೀಡುವ ಒಂದು ಪ್ರಕರಣ ಬಾಕಿ ಇದೆ ಎಂದರು.
ಹಾವೇರಿಯಲ್ಲಿ ನಿರಾಶ್ರಿತರ ಕೇಂದ್ರ ಸ್ಥಾಪಿಸುವ ಅಗತ್ಯವಿದೆ. ರಸ್ತೆಬದಿಗಳಲ್ಲಿ 30ಕ್ಕೂ ಅಧಿಕ ಜನ ಮಲಗುತ್ತಿದ್ದಾರೆ ಎಂದು ಹರೀಶ ಇಂಗಳಗಿ ಎಂಬುವರು ಗಮನಕ್ಕೆ ತಂದರು. ಈ ಕುರಿತು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದರು. ಎಲ್ಲ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸುವಂತೆ. ಪಾದಚಾರಿ ಮಾರ್ಗ ಒತ್ತುವರಿ ಮಾಡಿ ಮದ್ಯವ್ಯಸನ ಕೇಂದ್ರದ ಪಕ್ಕದಲ್ಲಿನ ಪೊಲೀಸ್ ಕ್ವಾರ್ಟರ್ಸ್ ನಿರ್ಮಿಸಿರುವ ಬಗ್ಗೆ ಕ್ರಮ ಕೈಗೊಳ್ಳಲು ಎಸ್‌ಪಿ ಅಂಶುಕುಮಾರ ಅವರಿಗೆ ಸೂಚಿಸಿದರು.
ಹಾವೇರಿ ನಗರದಲ್ಲಿ ಕುಡಿಯುವ ನೀರು ಪುರೈಕೆ ಹಾಗೂ ಒಳಚರಂಡಿ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯ ಸಮಸ್ಯೆ ಬಗೆಹರಿಸುವಂತೆ ಜಿಲ್ಲಾಧಿಕಾರಿಯವರಿಗೆ ಅಧ್ಯಕ್ಷರು ಸೂಚಿಸಿದರು.
ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ನಂತರ ಈವರೆಗೆ 108 ಸುಮೊಟೊ ಕೇಸ್ ದಾಖಲಿಸಿದ್ದೇವೆ. 8 ಸಾವಿರ ಹಳೆ ಕೇಸ್‌ಗಳಲ್ಲಿ ಹಲವು ಪ್ರಕರಣ ಇತ್ಯರ್ಥಪಡಿಸಿದ್ದು, 2,917 ಕೇಸ್ ಬಾಕಿ ಉಳಿದಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮಮನವರ, ಜಿಪಂ ಸಿಇಒ ಅಕ್ಷಯ ಶ್ರೀಧರ, ಎಸ್‌ಪಿ ಅಂಶುಕುಮಾರ, ಆಯೋಗದ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಅರುಣ ಪೂಜಾರ, ಎಡಿಸಿ ಪೂಜಾರ ವೀರಮಲ್ಲಪ್ಪ, ಇತರರಿದ್ದರು.
ಉಚಿತ ಸಹಾಯವಾಣಿ ಸಂಪರ್ಕಿಸಿ
ಮಾನವ ಹಕ್ಕುಗಳ ಉಲ್ಲಂಘನೆ ತಡೆಯುವಲ್ಲಿ ಪತ್ರಿಕೆ, ಮಾಧ್ಯಮಗಳ ಪಾತ್ರ ಮಹತ್ವದ್ದಾಗಿದೆ. ಅನೇಕ ವರದಿಗಳನ್ನು ಗಮನಿಸಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದೇವೆ. ಪ್ರಕರಣ ದಾಖಲಿಸಿದ್ದೇವೆ. ಪತ್ರಕರ್ತರು, ಸಾರ್ವಜನಿಕರು ಶೌಚಗೃಹ, ರಸ್ತೆ, ಚರಂಡಿ ಅವ್ಯವಸ್ಥೆ ಸೇರಿದಂತೆ ಯಾವುದೇ ದೂರು ಇದ್ದಲ್ಲಿ ಆಯೋಗಕ್ಕೆ ತಿಳಿಸಿ. ಉಚಿತ ಸಹಾಯವಾಣಿ 180042523333 ಸಂಪರ್ಕಿಸಿ ಎಂದು ಆಯೋಗದ ಸದಸ್ಯ ಎಸ್.ಕೆ.ವಂಟಿಗೋಡಿ ತಿಳಿಸಿದರು.