

ಹಾವೇರಿ: ಘಟದಿಂದ ಮಠ ಹೊರತು ಮಠದಿಂದ ಘಟವಲ್ಲ ಎನ್ನುವಂತೆ, ಮಠ ಮಂದಿರಗಳು ಕೇವಲ ಧಾರ್ಮಿಕ ಚಟುಚಟಿಕೆಯಲ್ಲಿ ತೊಡಗದೇ ಶೈಕ್ಷಣಿಕವಾಗಿ ಸೇವೆ ಸಲ್ಲಿಸಿ, ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಉಚಿತ ಪ್ರಸಾದ ನಿಲಯವನ್ನು ಸ್ಥಾಪಿಸಿ ಶಿಕ್ಷಣ ನೀಡುವುದರ ಜತೆಗೆ ಉತ್ತಮ ಸಂಸ್ಕಾರ, ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಂಡು ಮಠವನ್ನು ಜನಾನುರಾಗಿಸಿದವರು ಲಿಂ.ಶಿವಲಿಂಗ ಸ್ವಾಮೀಜಿ ಎಂದು ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮಿಜಿ ಹೇಳಿದರು.
ನಗರದ ಅಮೃತಮ್ಮ ಶೀಲವಂತರ ನಿವಾಸದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಮತ್ತು ತಾಲ್ಲೂಕು ಘಟಕ ಮತ್ತು ಕದಳಿ ವೇದಿಕೆಯ ಸಹಯೋಗದಲ್ಲಿ ಆಯೋಜಿಸಿದ್ದ ಸಿದ್ದಣ್ಣ ಚೌಶೆಟ್ಟಿ ದತ್ತಿ ನಿಧಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅತಿಥಿಯಾಗಿ ಪಾಲ್ಗೊಂಡಿದ್ದ ಸಾಹಿತಿ ಕೆ.ಬಿ.ಬಿಕ್ಷಾವರ್ತಿಮಠ ಮಾತನಾಡಿ, ಮಠಾಧೀಶರಾದವರು ಸಮಾಜದ ಮುಖ್ಯವಾಹಿನಿಯಲ್ಲಿ ನಿಂತು ತಮ್ಮ ಆತ್ಮೋನ್ನತೆ ಮಾಡಿಕೊಳ್ಳುವದರ ಜತೆಗೆ ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ಭಕ್ತರಿಗೆ ಸನ್ಮಾರ್ಗವನ್ನು ತೋರುವ ಜವಾಬ್ದಾರಿ ಹೊಂದಿರುತ್ತಾರೆ. ಅಂತಹ ಸಮಾಜೋದ್ಧಾರಕ ಕಾರ್ಯವನ್ನು ಮಾಡಿದವರು ಹುಕ್ಕೇರಿ ಮಠದ ಲಿಂ.ಶಿವಲಿಂಗ ಸ್ವಾಮೀಜಿಯವರು ವಿರಕ್ತ ಪರಂಪರೆಯ ದಾರಿದೀಪವಾಗಿದ್ದಾರೆ ಎಂದು ಹೇಳಿದರು.
ದತ್ತಿ ದಾನಿಗಳಾದ ಹೋರಾಟಗಾರ ಸಿದ್ದಣ್ಣ ಚೌಶೆಟ್ಟಿ ಅವರ ಜೀವನ ಸಾಧನೆಯನ್ನು ನಿವೃತ್ತ ಶಿಕ್ಷಕ ಸಿ.ಎಸ್.ಮರಳಿಹಳ್ಳಿ ಪ್ರಸ್ತುತ ಪಡಿಸಿದರು. ಕದಳಿ ವೇದಿಕೆಯ ಅಮೃತಮ್ಮ ಶೀಲವಂತರ ವಚನ ವಿಶ್ಲೇಷಣೆ ಮಾಡಿದರು. ದಾಕ್ಷಾಯಣಿ ಗಾಣಗೇರ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಶೈಲಾ ಕೋರಿಶೆಟ್ಟರ, ಲಲಿತಕ್ಕ ಹೊರಡಿ, ಚಂಪಾ ಹುಣಸಿಕಟ್ಟಿ, ಶಿದ್ಲಿಂಗಪ್ಪ ಶೀಲವಂತರ, ಶಿವಲಿಂಗಯ್ಯ ಮಠಪತಿ, ಮಹಾಧೆವಕ್ಕ ಬೆಳ್ಳಟ್ಟಿ, ಲಲಿತಾ ಅಂಕಲಕೋಟಿ, ಮಹೇಶ್ವರಿ ಹಿರೇಮಠ, ಕಸ್ತೂರೆಮ್ಮ ಮಹಾರಾಜಪೇಟಿ, ಮಹಾಂತಮ್ಮ, ಮತ್ತಿತರರು ಉಪಸ್ಥಿತರಿದ್ದರು.
ರೇಣುಕಾ ಗುಡಿಮನಿ ಪ್ರಸ್ತಾವಿಕವಾಗಿ ಮಾತನಾಡಿದರು. ಸುಕನ್ಯಾ ಶೀಲವಂತರ ಪ್ರಾರ್ಥಿಸಿದರು. ಸುವರ್ಣ ಶೀಲವಂತರ ಸ್ವಾಗತಿಸಿದರು. ಅಕ್ಕಮಹಾದೇವಿ ಕಬ್ಬಿಣಕಂತಿಮಠ ನಿರೂಪಿಸಿದರು. ಕವಿತಾ ಚೌಶೆಟ್ಟಿ ವಂದಿಸಿದರು.