

ಹಾವೇರಿ: ವಯೋಗಿ ಎಂಬ ಹೆಸರಿಗೆ ಅನ್ವರ್ಥವಾಗಿ ಬದುಕಿ, ತಾವು ಗಳಿಸಿದ ವಾಕ್ ಸಿದ್ಧಿ, ದೃಷ್ಟಿ ಸಿದ್ಧಿ ಮತ್ತು ಹಸ್ತಸಿದ್ಧಿಯನ್ನು ಲೋಕಕಲ್ಯಾಣಕ್ಕೆ ಮಾತ್ರ ಬಳಸಿ, ಶಿವಯೋಗದ ಸಾಧನೆಯಿಂದ ಅಂತರಂಗ ಮತ್ತು ಬಹಿರಂಗ ಸಾಧನೆ ಮಾಡಿ, ಕಾವಿ ಲೋಕದ ನಕ್ಷತ್ರವಾದವರು ಅಥಣಿ ಮುರುೇಂದ್ರ ಶಿವಯೋಗಿಗಳು ಎಂದು ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.
ನಗರದ ಹುಕ್ಕೇರಿಮಠದ ಶಿವಾನುಭವದ ಮಂಟಪದಲ್ಲಿ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಂಡಿದ್ದ ಅಥಣಿ ಮುರುಘೇಂದ್ರ ಶಿವಯೋಗಿಗಳ ಜೀವನ ದರ್ಶನ ಪ್ರವಚನದ ಮಂಗಲೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿ, ವಚನ ಸಾಹಿತ್ಯ ಪ್ರಕಟನೆಗೆ ಅಥಣಿ ಶಿವಯೋಗಿಗಳ ಪಾತ್ರ ಸ್ಮರಣೀಯವಾದದ್ದು. ಫ.ಗು.ಹಳಕಟ್ಟಿ ಅವರಿಗೆ ಶಿವಾನುಭವ ಪತ್ರಿಕೆ ಪ್ರಾರಂಭಿಸಲು ಪ್ರೇರಣೆ ನೀಡಿದರು. ವೀರಶೈವ ಸಾಹಿತ್ಯ ಪರಿಷತ್ತು ಸ್ಥಾಪನೆ ಹಾಗೂ ಪ್ರಥಮ ವೀರಶೈವ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಕಾರಣೀಕರ್ತರು ಅಥಣಿ ಶಿವಯೋಗಿಗಳು ಎಂದು ಹೇಳಿದರು.
ಅಕ್ಕಿಆಲೂರಿನ ಚನ್ನವಿರೇಶ್ವರ ವಿರಕ್ತಮಠದ ಶ್ರೀ ಶಿವಬಸವ ಸ್ವಾಮೀಜಿ ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರಣೆ ನೀಡಿದರು. ಹರ್ಡೇಕರ ಮಂಜಪ್ಪ ಅವರಿಗೆ ಸತ್ಯಾಗ್ರಹ, ಗ್ರಾಮೋದಯ, ಖಾದಿ ಪ್ರಚಾರ, ರಾಷ್ಟ್ರೀಯ ಆಂದೋಲನದಲ್ಲಿ ನೆರವು ನೀಡಿ, ಬಸವ ಜಯಂತಿ ನಡೆಸಲು ಕಾರಣೀಕರ್ತರಾದವರು ಅಥಣಿ ಶಿವಯೋಗಿಗಳು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಗೌರಿಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಅಥಣಿ ಶಿವಯೋಗಿಗಳು ಪ್ರಖಾಂಡ ಪಂಡಿತರಾಗಿದ್ದರು. ವೇದ ಆಗಮ, ಉಪನಿಷತ್ತು ಅಲ್ಲದೇ ವ್ಯಾಕರಣ, ವೀರಶೈವ ಆಗಮ, ಸಂಸ್ಕೃತದ ಅಧ್ಯಯನ ಮಾಡಿದ್ದರು. ಬಿ.ಡಿ ಜತ್ತಿ ಅವರು ಕರ್ನಾಟಕ ಮುಖ್ಯಮಂತ್ರಿಯಾಗುವಲ್ಲಿ ಅಥಣಿ ಶಿವಯೋಗಿಗಳ ವಾಕ್ ಸಿದ್ಧಿಯೇ ಕಾರಣವಾಗಿದೆ ಎಂದು ಹೇಳಿದರು.
ಹೊಳಲಿನ ಮಲ್ಲಿಕಾರ್ಜುನಸ್ವಾಮಿ ಮಠದ ಚನ್ನಬಸವ ದೇವರು ಪ್ರವಚನದ ಮಂಗಲ ನುಡಿದರು. ಶ್ರೀಮಠದ ಸೇವಾರ್ಥಿಗಳಾದ ರುದ್ರಪ್ಪ ಕನವಳ್ಳಿ, ನೀಲಪ್ಪ ಪುರದ, ರಾಮಚಂದ್ರಪ್ಪ ಹಾವನೂರ, ಬಸವರಾಜ ಬೈಲಣ್ಣನವರ ಅವರನ್ನು ಸನ್ಮಾನಿಸಲಾಯಿತು. ಸುರೇಶ ಅಂಗಡಿ ಮತ್ತು ಚನ್ನಪ್ಪ ಹಳಕೊಪ್ಪ ವಚನ ಸಂಗೀತ ನಡೆಸಿಕೊಟ್ಟರು.
ಸಮಾರಂಭದಲ್ಲಿ ಕೂಡಲದ ಶ್ರೀ ಗುರುಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಹೇರೂರಿನ ಶ್ರೀ ಗುಬ್ಬಿ ನಂಜುಂಡ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಉತ್ಸವ ಸಮಿತಿ ಅದ್ಯಕ್ಷ ವಿಜಯಕುಮಾರ ಕೂಡ್ಲಪ್ಪನವರ, ಕಾರ್ಯದರ್ಶಿ ಆನಂದ ಅಟವಾಳಗಿ, ಎಸ್.ಎಂ. ಹಾಲಯ್ಯಮನವರಮಠ, ಬಿ.ಬಸವರಾಜ, ಸುರೇಶ ಮುರಡಣ್ಣನವರ, ಶಿವಯೋಗಿ ಬೆಳವಿಗಿ, ಕಾಂತೇಶ ತಳವಾರ, ಜಯದೇವಯ್ಯ ಸಾವಿರಮಠ, ಮಹಾಂತೇಶ ಮಳಿಮಠ, ಸಿದ್ದಪ್ಪ ಕಡೇಮನಿ, ಎಸ್.ಎಸ್.ಮಠಪತಿ, ಚಂಪಾ ಹುಣಸಿಕಟ್ಟಿ, ಲಲಿತಕ್ಕ ಹೊರಡಿ, ಎಸ್.ವಿ. ಹಿರೇಮಠ, ಮತ್ತಿತರರು ಉಪಸ್ಥಿತರಿದ್ದರು.
ಸುರೇಶ ಅಂಗಡಿ ಪ್ರಾರ್ಥಿಸಿದರು. ವೀರಣ್ಣ ಅಂಗಡಿ ಸ್ವಾಗತಿಸಿದರು. ಎಸ್.ಎನ್.ಮಳೆಪ್ಪನವರ ನಿರೂಪಿಸಿದರು. ಎಸ್.ಎಸ್.ಮುಷ್ಠಿ ವಂದಿಸಿದರು.