

ಹಾವೇರಿ: ಭಾರತದ ಸಂವಿಧಾನದ ಎಲ್ಲ ಆಶಯಗಳು, ಬಸವ ತತ್ವದ ಅಂಶಗಳೇ ಆಗಿದ್ದು, ಬಸವ ತತ್ವದ ಪಾಲನೆಯು ಸಂವಿಧಾನದ ಪಾಲನೆಯೇ ಆಗಿದೆ. ಅನುಭವ ಮಂಟಪದ ಮೂಲ ಆಶಯವೇ ಆಧುನಿಕ ಸಂಸತ್ತಿನ ಆಶಯವಾಗಿದ್ದು, ಬಸವ ತತ್ವವೂ ಜಗತ್ತಿನ ಶ್ರೇಷ್ಠ ತತ್ವವಾಗಿದೆ ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಹಾಗೂ ಅಖಿಲ ಭಾರತ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿ ಹೇಳಿದರು.
ನಗರದ ಹುಕ್ಕೇರಿ ಮಠದ ಶಿವಬಸವೇಶ್ವರ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಿರುವ ನಮ್ಮೂರ ಜಾತ್ರಾ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಬುಧವಾರ ಪಾಲ್ಗೊಂಡು ಅವರು ಮಾತನಾಡಿದರು. ಇಂದು ಸಮಾಜವು ಜಾತಿ, ಉಪಜಾತಿ ಎಂದು ವಿಘಟನೆ ಆಗಿದೆ. ನಮ್ಮಲ್ಲಿ ಒಗ್ಗಟ್ಟು ಇಲ್ಲವಾಗಿದ್ದು, ಪರಸ್ಪರ ದ್ವೇಷ, ಅಸೂಯೆ, ಸಂಕುಚಿತ ಭಾವಗಳೆ ತುಂಬಿವೆ. ನೈತಿಕತೆ ಇಲ್ಲವಾಗಿದ್ದು ಸಮಾಜಕ್ಕೆ ತ್ಯಾಗ ಮಾಡುವ ಗುಣವು ಮಾಯವಾಗಿದೆ. ಎಲ್ಲಡೆ ಸ್ವಾರ್ಥ ತುಂಬಿದ್ದು, ಸಮಾಜದ ಹಿತದ ಬದಲಾಗಿ ವ್ಯಕ್ತಿಹಿತ ಚಿಂತನೆ ಹೆಚ್ಚಾಗಿದೆ. ಮಹಾತ್ಮರ ಸ್ಮರಣೆಯು ಹಿಂದಿಗಿಂತಲೂ ಇಂದು ತುಂಬಾ ಅವಶ್ಯವಾಗಿದೆ ಎಂದು ಹೇಳಿದರು.
ಬಸವಾದಿ ಶಿವಶರಣರು ಜನರಾಡುವ ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯ ರಚಿಸಿದರು. ರಾಜಾಶ್ರಯವಿಲ್ಲದೇ ಸಮಾಜವನ್ನು ತಿದ್ದುವ ಕೆಲಸ ಅಂದು ಶರಣರ ಕೊಡುಗೆಯಾಗಿದೆ. ರಕ್ತ ಮತ್ತು ಬೆವರು ಹರಿಸುವ ಮೂಲಕ ದೇಶ ಕಟ್ಟವ ಅನಿವಾರ್ಯತೆ ಸೃಷ್ಟಿಯಾಗಿದೆ. ಕಾಯಕ ಸಿದ್ಧಾಂತ ನಮ್ಮ ಧ್ಯೇಯವಾಗಬೇಕು. ಮತ್ತೆ ಕಲ್ಯಾಣ ರಾಜ್ಯ ನಮ್ಮ ಗುರಿಯಾಗಬೇಕು ಎಂದರು.
ಅಕ್ಕಿಆಲೂರಿನ ವಿರಕ್ತಮಠದ ಶಿವಬಸವ ಶ್ರೀಗಳು ಸಮ್ಮುಖ ವಹಿಸಿದ್ದರು. ಹೆಗಾಪುರ ಶಿವಲಿಂಗೇಶ್ವರ ಹಿರೇಮಠದ ಧಾರುಕಲಿಂಗ ಶಿವಾಚಾರ್ಯರು ನೇತೃತ್ವ ವಹಿಸಿದ್ದರು.
ಸಮಾರಂಭದಲ್ಲಿ ಮಾದನಹಿಪ್ಪರಗಿಯ ಅಭಿನವ ಶಿವಲಿಂಗ ಸ್ವಾಮೀಜಿ, ದುಂಡಸಿಯ ಕುಮಾರ ಸ್ವಾಮೀಜಿ, ಜಮಖಂಡಿಯ ಓಲೆಮಠದ ಶ್ರೀಗಳು, ಹೊಳಲಿನ ಚನ್ನಬಸವ ದೇವರು, ಸಿ.ಜಿ.ತೋಟಣ್ಣವರ, ಸಿ.ಡಿ.ಹಾವೇರಿ, ಎಸ್.ಎಸ್.ಗೌಡಪ್ಪನವರ, ಸ್ನೇಹಾ ಹಿರೇಮಠ, ಚನ್ನಪ್ಪ ಸುರಳಿಹಳ್ಳಿ, ಸಂಜೀವಕುಮಾರ ನೀರಲಗಿ, ಗಂಗಾಧರ ಹತ್ತಿ, ನಿರಂಜನ ಮರಡೂರಮಠ, ರತ್ಮಾ ಪಾಟೀಲ, ಎಸ್.ಎಂ.ಮೆಡ್ಲೇರಿ, ಪ್ರಭಾವತಿ ಪುರದ, ಸಿದ್ದಲಿಂಗೇಶ ಶೆಟ್ಟರ, ಅಶೋಕ ಮಾಗನೂರ, ಅಮೃತಾ ಶೀಲವಂತರ, ಲಲಿತಕ್ಕ ಹೊರಡಿ, ಗಣೇಶ ಮುಷ್ಠಿ, ಮಾಂತಣ್ಣ ಸುರಳಿಹಳ್ಳಿ, ಆಸಂಗಿ ವೀರಬಸವ ದೇವರು, ಬಿ.ಬಸವರಾಜ, ಮತ್ತಿತರರು ಉಪಸ್ಥಿತರಿದ್ದರು.
ಬಸವರಾಜ ಚಳಗೇರಿ ಪ್ರಾರ್ಥಿಸಿದರು. ವೀರಣ್ಣ ಅಂಗಡಿ ಸ್ವಾಗತಿಸಿದರು. ಶಿಕ್ಷಕ ನಾಗರಾಜ ನಡುವಿನಮಠ ನಿರೂಪಿಸಿದರು. ತಮಣ್ಣ ಮುದ್ದಿ ವಂದಿಸಿದರು.
ಕೋಟ್:
ಶಿವಯೋಗ ಸಾಧನೆಯನ್ನು ಸಮಾಜೋಧಾರ್ಮಿಕ ಉದ್ಧಾರಕ್ಕೆ ಬಳಸಿದ ಮಹಾತ್ಮರಲ್ಲಿ ಹುಕ್ಕೇರಿಮಠದ ಲಿಂ.ಶಿವಬಸವ ಮತ್ತು ಲಿಂ.ಶಿವಲಿಂಗ ಶ್ರೀಗಳು ಅಗ್ರಗಣ್ಯರು. ಅವರ ಪುಣ್ಯಸ್ಮರಣೆಯು ಎಲ್ಲ ಮಹಾತ್ಮರ ಸ್ಮರಣೆಯೂ ಆಗಿದೆ.
- ಡಾ.ಮಲ್ಲಿಕಾರ್ಜುನ ಸ್ವಾಮೀಜಿ, ಧಾರವಾಡದ ಮುರುಘಾಮಠ
ಸಾಧಕ ರತ್ನ ಪ್ರಶಸ್ತಿ
ಹಾವೇರಿಯ ಓಂ ಸಂಸ್ಥೆಯಿಂದ ಶಿಗ್ಗಾಂವಿಯ ಜಾನಪದ ಕಲಾವಿದ ಬಸವರಾಜ ಶಿಗ್ಗಾಂವಿ ಅವರಿಗೆ ಸಾಧಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರೌಢಶಾಲೆ ಕಟ್ಟಡ ದಾನಿಗಳನ್ನು ಸನ್ಮಾನಿಸಲಾಯಿತು. ಕಬನೂರಿನ ಜಾನಪದ ಕಲಾ ತಂಡವು ಜೋಗತಿ ನೃತ್ಯವನ್ನು ಪ್ರದರ್ಶಿಸಿತು.
ಬೃಹತ್ ಮೆರವಣಿಗೆ ಇಂದು
ಜ.10ರಂದು ಬೆಳಗ್ಗೆ 8 ಗಂಟೆಗೆ ಶ್ರೀಗಳ ಗದ್ದುಗೆಗಳಿಗೆ ಮಹಾಪೂಜೆ, ಬಿಲ್ವಾರ್ಚನೆ, ಮದ್ಯಾಹ್ಮ 12ಕ್ಕೆ ಮಹಾಗಣಾರಾಧನೆ ನಡೆಯಲಿದೆ. ಸಂಜೆ 4 ಗಂಟೆಗೆ ಲಿಂ.ಶಿವಬಸವ ಮತ್ತು ಲಿಂ.ಶಿವಲಿಂಗ ಶ್ರೀಗಳ ಭಾವಚಿತ್ರದ ಭವ್ಯ ಮೆರವಣಿಗೆ ಆರಂಭವಾಗಲಿದೆ. ವಿವಿಧ ವಾದ್ಯ ತಂಡಗಳು ಮತ್ತು ಜಾನಪದ ಕಲಾ ತಂಡಗಳು ಭಾಗವಹಿಸಲಿವೆ ಎಂದು ಶ್ರೀಮಠ ತಿಳಿಸಿದೆ.