ಮನುಕುಲದ ಒಳಿತು ಬಯಸಿದ ಬಸವಾದಿ ಶರಣರು; ಗಾಣಿಗ ಗುರುಪೀಠ ಶ್ರೀ ಬಸವಕುಮಾರ ಸ್ವಾಮೀಜಿ ಹೇಳಿಕೆ; ಹುಕ್ಕೇರಿ ಮಠದ ಜಾತ್ರಾ ಮಹೋತ್ಸವ

8 HVR 8
Published on

ಹಾವೇರಿ: ವೈಚಾರಿಕತೆ, ವೈಜ್ಞಾನಿಕ, ಸರ್ವಸಮಾನತೆ ಧರ್ಮವನ್ನು ಜಗತ್ತಿಗೆ ಕೊಟ್ಟು, ಮನುಕುಲದ ಒಳಿತನ್ನು ಸಾರ್ವತ್ರಿಕರಣಗೊಳಿಸಿ, ಕಾಯಕ ಸಿದ್ಧಾಂತವನ್ನು ಶಿವಯೋಗದೊಂದಿಗೆ ಬೆರೆಸಿ, ವಚನ ಸಾಹಿತ್ಯದ ಬೆಳಕನ್ನು ಜಗತ್ತಿಗೆ ನೀಡಿದ ಮಹಾನ್ ಮಾನವಾತಾದಿಗಳು ಬಸವಾದಿ ಶಿವಶರಣರು ಎಂದು ವಿಜಯಪುರದ ಗಾಣಿಗ ಗುರುಪೀಠ ವನಶ್ರೀ ಸಂಸ್ಥಾನ ಮಠದ ಜಗದ್ಗುರು ಬಸವಕುಮಾರ ಸ್ವಾಮೀಜಿ ಹೇಳಿದರು.

ನಗರದ ಶಿವಬಸವೇಶ್ವರ ಪ್ರೌಢಶಾಲೆಯ ಆವರಣದಲ್ಲಿ ಹಮ್ಮಿಕೊಂಡಿರುವ ಹುಕ್ಕೇರಿ ಮಠದ ಲಿಂ.ಶಿವಬಸವ ಸ್ವಾಮಿಗಳ 79ನೇ ಹಾಗೂ ಲಿಂ.ಶಿವಲಿಂಗ ಸ್ವಾಮೀಜಿಯವರ 16ನೇ ಪುಣ್ಯ ಸ್ಮರಣೋತ್ಸವದ ಮಂಗಳವಾರದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಚಿಕ್ಕಮಗಳೂರಿನ ಬಸವತತ್ವ ಪೀಠದ ಬಸವಮರುಳಸಿದ್ಧ ಸ್ವಾಮೀಜಿ ಮಾತನಾಡಿ, ಒಂದು ಕಾಲದಲ್ಲಿ ಬದುಕೇ ಬರಡಾಗಿದ್ದ ಊರು ಹಾನಗಲ್ಲ. ಆದರೆ ಯುಗಪುರುಷ ಕುಮಾರ ಸ್ವಾಮಿಗಳ ಕತೃತ್ವ ಶಕ್ತಿಯಿಂದ ಈ ಪ್ರದೇಶವೂ ಸಾಂಸ್ಕೃತಿಕ ಪ್ರತಿಫಲವಾಗಿದೆ. ಅಂತಹ ಕರ ಸಂಜಾತರಾದ ಹುಕ್ಕೇರಿಮಠದ ಲಿಂ.ಶಿವಬಸವ ಶ್ರೀಗಳು ಮತ್ತು ಲಿಂ.ಶಿವಲಿಂಗ ಶ್ರೀಗಳು ತಮ್ಮ ತಪಶ್ಯಕ್ತಿಯಿಂದ ಮರಿಕಲ್ಯಾಣ ಹಾವೇರಿಯನ್ನು ಹಿರಿಕಲ್ಯಾಣವಾಗಿಸಿದ್ದಾರೆ ಎಂದರು.

ಜಡೆ ಸಂಸ್ಥಾನಮಠದ ಜಗದ್ಗುರು ಕುಮಾರಕೆಂಪಿನ ಸಿದ್ಧವೃಷಬೇಂದ್ರ ಸ್ವಾಮೀಜಿ, ಚಿತ್ರದುರ್ಗದ ಮಡಿವಾಳ ಗುರುಪೀಠದ ಬಸವಮಾಚೀದೇವ ಸ್ವಾಮೀಜಿ ಮಾತನಾಡಿದರು.

ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಂಕಮ್ಮ ಸಂಕಮ್ಮನವರ, ಎಸ್.ಆರ್. ಜೋಳದ ಹಾಗೂ ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗೆ ಭಾಜನರಾದ ಪತ್ರಕರ್ತ ಮಾಲತೇಶ ಅಂಗೂರ ಅವರನ್ನು ಸನ್ಮಾನಿಸಲಾಯಿತು.

ಹುಕ್ಕೇರಿಮಠ ಶಿವಬಸವೇಶ್ವರ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸುವರ್ಣ ಮಹೋತ್ಸವದ ಲೋಗೋವನ್ನು ಅನಾವರಣಗೊಳಿಸಲಾಯಿತು. ಅಕ್ಕಮಹಾದೇವಿ ವಿವಿ ಪರೀಕ್ಷೆಯ ಪದವಿಯಲ್ಲಿ 8ನೇ ರ‌್ಯಾಂಕ್ ಪಡೆದ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದ ಮೇಘಾ ದೇವಗಿರಿಯನ್ನು ಅಭಿನಂದಿಲಾಯಿತು.

ಸಮಾರಂಭದಲ್ಲಿ ದುಂಡಿಸಿಯ ಕುಮಾರ ಸ್ವಾಮೀಜಿ, ಅಕ್ಕಿಆಲೂರಿನ ಶಿವಬಸವ ಶ್ರೀಗಳು, ಅಶೋಕ ಹಾವನೂರ, ತಮ್ಮಣ್ಣ ಮುದ್ದಿ, ಗಂಗಮ್ಮ ಯರೇಶೀಮಿ, ತಿಪ್ಪೇಸ್ವಾಮಿ ಶಿವಸಾಲಿ, ನೀಲಮ್ಮ ಗುಂಜೆಟ್ಟಿ, ಶಿವಬಸಪ್ಪ ತುಪ್ಪದ, ಗಣೇಶ ಮುಷ್ಠಿ, ಗಿರಿಜಮ್ಮ ಹೂಗಾರ, ಬಸವರಾಜ ಉಳ್ಳಾಗಡ್ಡಿ, ಚಂದ್ರಶೇಖರ ಸೊಲಭಗೌಡ್ರ, ಪ್ರೇಮಾ ಕಬ್ಬೂರ, ಅಶೋಕ ಮಾಗನೂರ, ಮಾಂತಣ್ಣ ಸುರಳಿಹಳ್ಳಿ, ಅಮೃತಮ್ಮ ಶೀಲವಂತರ, ಲಲಿತಕ್ಕ ಹೊರಡಿ, ಗಂಗಣ್ಣ ಮಳಗಿ, ಬಿ.ಬಸವರಾಜ, ನಾಗರಾಜ ನಡುವಿನಮಠ, ಮತ್ತಿತರರು ಉಪಸ್ಥಿರಿದ್ದರು.

ಶಿವರುದ್ರಯ್ಯ ಗೌಡಗಾಂವ್ ಪ್ರಾರ್ಥಿಸಿದರು. ಆನಂದ ಅಟವಾಳಗಿ ಸ್ವಾಗತಿಸಿದರು. ವೀರಬಸವ ದೇವರು ನಿರೂಪಿಸಿದರು.

ಭಾವೈಕ್ಯತೆಗೆ ಧಕ್ಕೆ ಆಗದಿರಲಿ

ದೇಶದಲ್ಲಿ ಹಲವು ಜಾತಿ, ಧರ್ಮ ಮತ್ತು ಭಾಷೆಯ ಜನರಿದ್ದಾರೆ. ಆದರೆ ನಾವೆಲ್ಲ ಭಾರತೀಯರು ಎನ್ನುವ ಭಾವೈಕ್ಯತೆ ಇದೆ. ಇಂಥಹ ಭಾವೈಕ್ಯತೆಗೆ ಧಕ್ಕೆ ತರುವ ಮತೀಯ ಶಕ್ತಿಗಳೂ ಇವೆ. ಆದರೆ ಮಹಾನ್ ತಪಸ್ವಿಗಳ ದಾರಿಯಲ್ಲಿ ನಡೆದುಕೊಂಡರೆ ಸಂಘರ್ಷಗಳಿಗೆ ಅವಕಾಶವೇ ಇರುವುದಿಲ್ಲ. ಅಂತಹ ಧಾರ್ಮಿಕ ಪರಂಪರೆಗೆ ಹುಕ್ಕೇರಿಮಠ ಹೆಸರುವಾಸಿಯಾಗಿದೆ ಎಂದು ಹಾವೇರಿ ವಿಶ್ವವಿದ್ಯಾಲಯ ಕುಲಪತಿ ಡಾ.ಸುರೇಶ ಜಂಗಮಶೆಟ್ಟಿ ಹೇಳಿದರು.

ನೆರಳು ಬೆಳಕಿನ ಆಟ

ಉಡುಪಿಯ ಪ್ರಹ್ಲಾದ ಆಚಾರ್ಯ ನೆರಳು ಬೆಳಕಿನ ಆಟವನ್ನು ಪ್ರದರ್ಶಿಸಿದರು. ಪುಣ್ಯಕೋಟಿ ಹಾಡು, ಕೋತಿ ಸಂಭಾಷಣೆ, ಮಹಾನ್ ಸಾಧಕರ ನೆರಳು ಭಾವಚಿತ್ರದ ಪ್ರದರ್ಶನ ನೋಡುಗರ ಜನಮನಸೂರೆಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net