ನಾಡಿಗೆ ಆಧ್ಯಾತ್ಮಿಕ ಸಿಂಚನದ ಅಗತ್ಯವಿದೆ; ಬದುಕು ಸತ್ಯ- ಅಸತ್ಯದ ಮಧ್ಯದಲ್ಲಿದೆ; ಹುಕ್ಕೇರಿ ಮಠದ ಜಾತ್ರಾ ಮಹೋತ್ಸವದಲ್ಲಿ ಬೊಮ್ಮಾಯಿ ಹೇಳಿಕೆ

7 HVR 3
Published on

ಹಾವೇರಿ: ಸಮಾಜದಲ್ಲಿ ಇಂದು ಸದ್ಭಾವನೆ, ಸದ್ವಿಚಾರ, ಸಹಬಾಳ್ವೆ, ಸಹನಶೀಲತೆ ಕಡಿಮೆಯಾಗಿವೆ. ಪುಣ್ಯ ಸ್ಮರಣೆಯ ಜತೆಗೆ ಮುಂದಿನ ಜನಾಂಗಕ್ಕೆ ಭಕ್ತಿ ಕ್ರಾಂತಿಯ ನೇತೃತ್ವವನ್ನು ವಹಿಸಿಕೊಳ್ಳುವ ಅನಿವಾರ್ಯತೆ ಇದೆ. ಕಾಲ ಬದಲಾದಂತೆ ವೈಚಾರಿಕತೆ ಹೆಸರಿನಲ್ಲಿ ಅರಾಜಕತೆ ಕಾಣದೇ ಇರಲು ಆಧ್ಯಾತ್ಮಿಕ ಸಿಂಚನದ ಅವಶ್ಯಕತೆ ಇದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಶಿವಬಸವೇಶ್ವರ ಪ್ರೌಢಶಾಲಾ ಆವರಣದಲ್ಲಿ ಹಮ್ಮಿಕೊಂಡಿರುವ ಹುಕ್ಕೇರಿ ಮಠದ ಲಿಂ.ಶಿವಬಸವ ಸ್ವಾಮೀಜಿ 79ನೇ ಹಾಗೂ ಲಿಂ.ಶಿವಲಿಂಗ ಸ್ವಾಮೀಜಿಯವರ 16ನೇ ಪುಣ್ಯ ಸ್ಮರಣೋತ್ಸವದ 2ನೇ ದಿನದ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು. ಹಸಿವು, ಅರಿವು, ಮರೆವು ಮತ್ತು ಸಾವು ಇವು ದೇವರು ಮನುಷ್ಯನಿಗೆ ಕೊಟ್ಟಿರುವ ಮಹಾನ್ ವರಗಳು, ಇವುಗಳು ಇಲ್ಲದಿದ್ದರೆ ಮಾನವನ ಬದುಕು ಕ್ರಿಯಾಶೀಲತೆ ಇಲ್ಲದ ನಿಸ್ಸಾರವಾಗುತ್ತಿತ್ತು. ಇವುಗಳನ್ನು ಬಳಸಿಕೊಂಡು ಬದಕನ್ನು ಹಸನ ಮಾಡಿಕೊಳ್ಳಬೇಕು. ಅದಕ್ಕೆ ಮಹಾನ್ ಪುಣ್ಯ ಪುರುಷರ ಜೀವನವು ಸಾಕ್ಷಿಯಾಗಿದೆ ಎಂದು ಹೇಳಿದರು.

ಬದುಕು ಸತ್ಯ ಮತ್ತು ಅಸತ್ಯದ ಮಧ್ಯೆ ಹಾಗೂ ನಡೆ- ನುಡಿ, ಪಾಪ- ಪುಣ್ಯದ ಮಧ್ಯೆ ಇದೆ. ಬಸವಾದಿ ಶಿವ ಶರಣರು ಸತ್ಯಶುದ್ಧ ಕಾಯಕದ ಮೂಲಕ ತಮ್ಮ ಜೀವನವನ್ನೇ ಆದರ್ಶವಾಗಿಸಿಕೊಂಡರು. ಸಕಲರಿಗೆ ಲೇಸನ್ನೇ ಬಯಸಿದ ಧರ್ಮವನ್ನು ಪ್ರತಿಪಾದಿಸಿ, ಆತ್ಮಸಾಕ್ಷಿಯಂತೆ ನಡೆದುಕೊಂಡರು. ಹೃದಯ ಮತ್ತು ಬುದ್ಧಿಯನ್ನು ಏಕವಾಗಿಸಿದ ಪರಂಪರೆಯಲ್ಲಿ ನಾವು ನಡೆದುಕೊಳ್ಳಬೇಕು ಎಂದು ಹೇಳಿದರು.

ವಾಸನದ ನಾಟಿ ವೈದ್ಯ ಹನುಮಂತಪ್ಪ ಮಳಲಿ ಮಾತನಾಡಿ, ನಮ್ಮ ಆರೋಗ್ಯ ನಮ್ಮ ಅಡುಗೆ ಮನೆಯಲ್ಲಿಯೇ ಇದೆ. ಆಧುನಿಕತೆ ಹೆಚ್ಚಿದಂತೆ ಹೊಸ ರೋಗಗಳು ಹೆಚ್ಚುತ್ತಿವೆ. ಷಡ್‌ರಸಗಳು ನಮ್ಮ ಅಡುಗೆಯಲ್ಲಿ ಇದ್ದರೆ ಯಾವದೇ ರೋಗಗಳು ನಮ್ಮನ್ನು ಬಾಧಿಸುವುದಿಲ್ಲ. ದೇಶಿ ಹಸುಗಳ ಹಾಲು, ಸಗಣಿ ಮತ್ತು ಗೋಮೂತ್ರಗಳು ನಮಗೆ ದಿವ್ಯ ಔಷಧ ಎಂದು ಹೇಳಿದರು.

ಕರಜಗಿ ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜಲ, ನೆಲ ಮತ್ತು ಸುಭಾಷಿತಗಳು ತ್ರಿರತ್ನಗಳಾಗಿದ್ದು, ಅವುಗಳು ಪವಿತ್ರವಾದಷ್ಟು ನಮ್ಮ ಬದುಕು ಉತ್ತಮ. ಅವುಗಳ ಮಲಿನತೆ ಮಾನವನ ಬದುಕಿಗೆ ಕಂಟಕವಾಗಿವೆ ಎಂದರು.

ಹೊಸಮಠದ ಬಸವಶಾಂತ ಶ್ರೀಗಳು ಮತ್ತು ಹರಸೂರು ಬಣ್ಣದಮಠದ ಅಭಿನವ ಚನ್ನಮಲ್ಲಿಕಾರ್ಜುನ ಶ್ರೀಗಳು ಮಾತನಾಡಿದರು.

ಸಮಾರಂಭದಲ್ಲಿ ಸೈಕ್ಲಿಂಗ್ ಸಾಧಕ ತಿಮ್ಮೇಶಕುಮಾರ ಸಂಪಳ್ಳಿ ಮತ್ತು ಉಪ ವಿಭಾಗಾಧಿಕಾರಿ ಎಚ್.ಬಿ.ಚನ್ನಪ್ಪ ಅವರನ್ನು ಸನ್ಮಾನಿಸಲಾಯಿತು. ಹಿಂದುಸ್ಥಾನಿ ಕೊಳಲು ವಾದಕ ಅಕ್ಷಯ ಜೋಶಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಸಮಾರಂಭದಲ್ಲಿ ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ದುಂಡಸಿಯ ಕುಮಾರ ಸ್ವಾಮೀಜಿ, ಹಾವನೂರ ದಳವಾಯಿಮಠದ ಶ್ರೀಗಳು, ಮಾಜಿ ಶಾಸಕ ಶಿವರಾಜ ಸಜ್ಜನರ, ಕಮಲಾ ಯಡ್ರಾಮಿ, ಸಣ್ಣಗೋವಿಂದಪ್ಪ ಕಲಾಲ, ಪ್ರಕಾಶ ಶೆಟ್ಟಿ, ಗಂಗನಗೌಡ್ರ ಪಾಟೀಲ, ಮಲ್ಲೇಶ ಬಣಕಾರ, ರೋಹಿಣಿ ಪಾಟೀಲ, ಎಂ.ಸಿ.ಮಳಿಮಠ, ಶಿವಬಸಪ್ಪ ಶೀಲವಂತ, ತಮ್ಮಣ್ಣ ಮುದ್ದಿ, ಅಮೃತಮ್ಮ ಶೀಲವಂತರ, ಸಿ.ಜಿ.ತೋಟಣ್ಣನವರ, ಮಾಂತಣ್ಣ ಹಲಗಣ್ಣವರ, ಗಂಗಣ್ಣ ಮಳಗಿ, ಗಣೇಶ ಮುಷ್ಠಿ, ಲಲಿತಕ್ಕ ಹೊರಡಿ, ಶಿವಯೋಗಿ ಬೆನಕೊಪ್ಪ, ಸೋಮಶೇಖರ ಯಾಡವಾಡ, ಮತ್ತಿತರರು ಉಪಸ್ಥಿತರಿದ್ದರು.

ಮಮತಾ ನಂದೀಹಳ್ಳಿ ಪ್ರಾರ್ಥಿಸಿದರು. ಅಶೋಕ ಮಾಗನೂರ ಸ್ವಾಗತಿಸಿದರು. ಎಸ್.ಎನ್.ಮಳೆಪ್ಪನವರ ನಿರೂಪಿಸಿದರು. ಬಿ. ಬಸವರಾಜ ವಂದಿಸಿದರು.

ಸಂಸ್ಕೃತಿಯ ಉಳಿವು ಆಗಲಿ

ಶರಣ ಸಂಸ್ಕೃತಿ ಜೀವಂತಿಕೆಯನ್ನು ನಾವು ಹುಕ್ಕೇರಿ ಮಠದಲ್ಲಿ ಕಾಣಬಹುದು. ನಾಗರೀಕತೆ ಬೆಳೆದಂತೆ ಸಂಸ್ಕೃತಿಯು ಬೆಳೆಯುತ್ತಿಲ್ಲ. ಭಕ್ತಿ, ಭಾವ ನಮ್ಮಲ್ಲಿ ಕಡಿಮೆಯಾಗುತ್ತಿದೆ. ನಾಗರೀಕತೆಗಿಂತ ಸಂಸ್ಕೃತಿಯ ಉಳಿವು ಅವಶ್ಯವಾಗಿದೆ. ಪುಣ್ಯ ಸ್ಮರಣೋತ್ಸವಗಳು ನಮ್ಮಲ್ಲಿ ಸಂಸ್ಕೃತಿಯ ಪುನರಾರಂಭಕ್ಕೆ ದಾರಿದೀಪವಾಗಿವೆ ಎಂದು ಸಾನ್ನಿಧ್ಯ ವಹಿಸಿದ್ದ ಶಿರಹಟ್ಟಿಯ ಜಗದ್ಗುರು ಶ್ರೀ ಫಕೀರಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net