

ಹಾವೇರಿ: ತಂತ್ರಜ್ಞಾನ ಬಳಕೆ ಹೆಚ್ಚಾದಂತೆ ಜಾನುವಾರುಗಳ ಪಾಲನೆ, ಪೋಷಣೆ ಕಡಿಮೆಯಾಗುತ್ತಿದೆ. ಪ್ರಯೋಗಾತ್ಮಕ ಮನೋಭಾವನೆಯ ಕೊರತೆಯಿಂದ ಗ್ರಾಮೀಣ ಜನರು ಬದುಕು ಬರಡಾಗಿದೆ. ದನಗಳ ಪಾಲನೆಯೂ ಒಂದು ಯಶಸ್ವಿ ಉದ್ಯಮ ಎಂಬುದನ್ನು ಅರಿತು ಹೈನುಗಾರಿಕೆಯನ್ನು ಶ್ರದ್ದೆಯಿಂದ ಮಾಡಬೇಕು ಎಂದು ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಕರೆ ನೀಡಿದರು.
ನಗರದ ಶಿವಬಸವ ಜಾನುವಾರು ಮಾರುಕಟ್ಟೆಯ ಪ್ರಾಂಗಣದಲ್ಲಿ ಹುಕ್ಕೇರಿ ಮಠದ ಲಿಂ.ಶಿವಬಸವ ಸ್ವಾಮೀಜಿಯವರ 78ನೇ ಮತ್ತು ಲಿಂ.ಶಿವಲಿಂಗ ಸ್ವಾಮೀಜಿಯವರ 15ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ 53ನೇ ಶಿವಬಸವ ಜಾನುವಾರು ಜಾತ್ರೆ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಶಿವಾಪುರದ ಅಡವಿ ಸಿದ್ಧೇಶ್ವರ ಮಠದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ಹಿಂದೆ ದನಗಳ ಆಧಾರದ ಮೇಲೆ ಶ್ರೀಮಂತಿಕೆಯನ್ನು ಅಳೆಯಲಾಗುತ್ತಿತ್ತು. ಆದರೆ, ಇಂದು ರೈತರ ಮನೆಯಲ್ಲಿ ಟ್ರಾೃಕ್ಟರ್‌ಗಳು ಬಂದು ನಿಂತಿವೆ. ದನಗಳು ಇದ್ದರೂ ಕೋಟಿ, ಸತ್ತ ಮೇಲೆಯೂ ಕೋಟಿ ಬೆಲೆ ಬಾಳುತ್ತವೆ. ಅದರ ಮಹತ್ವ ಇಂದಿನ ಯುವ ರೈತರು ಮನಗಾಣಬೇಕಾಗಿದೆ ಎಂದು ಹೇಳಿದರು.
ಎಪಿಎಂಸಿ ಕಾರ್ಯದರ್ಶಿ ಜೆ.ಬಿ.ಕಬ್ಬೇರಹಳ್ಳಿ ಮಾತನಾಡಿ, ದನಗಳ ಮಾರುಕಟ್ಟೆಯಲ್ಲಿ ಅತ್ಯಾದುನಿಕ ಶೆಡ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಕುಡಿಯಲು ನೀರು ಹಾಗೂ ಜಾನುವಾರುಗಳ ಮೈತೊಳೆಯಲು ಶಾವರ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಸದ್ಯದಲ್ಲಿಯೇ ಅವುಗಳನ್ನು ಉದ್ಘಾಟಿಸಲಾಗುವದು ಎಂದು ಹೇಳಿದರು.
ಪಶುಸಂಗೋಪನಾ ಇಲಾಖೆಯ ಎಸ್.ಕೆ. ಕರಿಯಣ್ಣನವರ, ಎಪಿಎಂಸಿ ಮಾಜಿ ಸದಸ್ಯ ರುದ್ರೇಶ ಚಿನ್ನಣ್ಣನವರ ಮಾತನಾಡಿದರು. ಪಿ.ಡಿ.ಶಿರೂರ, ಸಿದ್ದಣ್ಣ ಕಡೇಮನಿ, ಎಸ್.ಎಸ್.ಮುಷ್ಠಿ, ವಿಜಯಕುಮಾರ ಕೂಡ್ಲಪ್ಪನವರ, ಆನಂದ ಅಟವಾಳಗಿ, ಶಿವಯೋಗಿ ಹೂಲಿಕಂತಿಮಠ, ನಿರಂಜನ ತಾಂಡೂರ, ಸಿಜಿ.ತೋಟಣ್ಣನವರ, ಎಸ್.ವಿ.ಹಿರೇಮಠ, ರೈತರು, ಡಾವಣಿಗಾರರು, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಬಿ.ಬಸವರಾಜ ನಿರೂಪಿಸಿದರು. ಶಿವಯೋಗಿ ವಾಲಿಶೆಟ್ಟರ ವಂದಿಸಿದರು.