ಕುಮಾರ ಸ್ವಾಮೀಜಿಯವರ ಕತೃತ್ವ ಶಕ್ತಿ ಬಣ್ಣಿಸಲಸದಳ; ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ

13 HVR 6
Published on

ಹಾವೇರಿ: ಕನ್ನಡನಾಡಿನ ಮಠ ಮಾನ್ಯಗಳಲ್ಲಿ ಇಂದು ಅನ್ನ, ಅರಿವು, ಆಶ್ರಯ ಸಿಗುತ್ತಿದ್ದರೆ ಅದಕ್ಕೆ ಹಾನಗಲ್ಲದ ಲಿಂ.ಕುಮಾರ ಸ್ವಾಮಿಯವರ ಕತೃತ್ವ ಶಕ್ತಿಯೇ ಕಾರಣ ಎಂದು ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.
ನಗರದ ಹುಕ್ಕೇರಿ ಮಠದ ಶಿವಾನುಭವದಲ್ಲಿ ರಾಜಯೋಗಿ ಶಿವಬಸವ ಸೇವಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಹಾನಗಲ್ಲ ಲಿಂ. ಕುಮಾರ ಮಹಾಸ್ವಾಮಿಗಳ 156 ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿನ ಉತ್ತಮ ವ್ಯಕ್ತಿಗಳನ್ನು ಗೌರವಿಸುವುದು ಶ್ರೇಷ್ಠ ಕಾರ್ಯವೆಂದು ಕುಮಾರ ಸ್ವಾಮೀಜಿ ಭಾವಿಸಿದ್ದರು. ಅದಕ್ಕಾಗಿಯೇ ಜನಪ್ರತಿನಿಧಿಗಳನ್ನು ಸನ್ಮಾನಿಸಿ, ಅವರು ಹೆಚ್ಚಿನ ಸೇವೆ ಸಲ್ಲಿಸಲು ಶ್ರೀಮಠ ಸದಾ ಪ್ರೋತ್ಸಾಹಿಸುತ್ತದೆ ಎಂದು ಹೇಳಿದರು.
ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಮಾತನಾಡಿ, ಕನ್ನಡ ನಾಡು ಆಧ್ಯಾತ್ಮಿಕ ಸಂಪತ್ತಿನ ಆಗರ. ಇಲ್ಲಿ ಹಲವಾರು ಸಂತ ಮಹಾತ್ಮರು ತಮ್ಮ ಜೀವನವನ್ನೇ ಆತ್ಮಕಲ್ಯಾಣ ಮತ್ತು ಸಮಾಜ ಕಲ್ಯಾಣಕ್ಕೆ ಮುಡಿಪಾಗಿಟ್ಟವರು. ಅಂತಹ ಮಹಾಮಹಿಮರ ಕೃಪೆಗೆ ಪಾತ್ರನಾವದನು ಜೀವನದಲ್ಲಿ ಉನ್ನತ ಸಾಧನೆ ಮಾಡುತ್ತಾನೆ. ನಾನು ಇಂದು ಅಲ್ಪ ಸಾಧನೆ ಮಾಡಿದ್ದರೆ ಅದಕ್ಕೆ ಇಂತಹ ಸತ್ಪುರುಷರ ಕೃಪೆಯೇ ಕಾರಣ ಎಂದು ಹೇಳಿದರು.
ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಸಮಾಜಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡು ಸಮಾಜೋದ್ಧಾರವೇ ಜೀವನದ ಪರಮ ಗುರಿ ಎಂದು ಬದುಕಿದ ಹಾನಗಲ್ಲ ಕುಮಾರ ಸ್ವಾಮಿಗಳು ಸ್ವಾಮಿ ಪರಂಪರೆಗೆ ಆದರ್ಶವಾಗಿ ಬದುಕಿದವರು. ಅವರ ಹಾದಿಯಲ್ಲಿಯೇ ಬದುಕಿದವರು ಲಿಂ.ಶಿವಲಿಂಗ ಸ್ವಾಮಿಗಳು. ಅವರ ಕೃಪೆಯಿಂದಲೇ ನಾನು ರಾಜ್ಯದ ಮಂತ್ರಿಯಾಗಿ ಸೇವೆ ಸಲ್ಲಿಸಲು ಅವಕಾಶ ಪಡೆದಿದ್ದೆ ಎಂದು ಹೇಳಿದರು.
ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ, ಅಧ್ಯಕ್ಷತೆ ವಹಿಸಿದ್ದ ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಶಾಸಕರಿಬ್ಬರನ್ನೂ ಶ್ರೀಮಠದಿಂದ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಕೂಡಲದ ಗುರುಮಹೇಶ್ವರ ಸ್ವಾಮೀಜಿ, ಹರಸೂರು ಬಣ್ಣದಮಠದ ಅಭಿನವ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ನಗರಸಭೆ ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಪ್ರವಚನಕಾರ ಶಿವಮೂರ್ತಿಸ್ವಾಮಿ ಹಿರೇಮಠ, ಶಿವಬಸಪ್ಪ ಮುಷ್ಠಿ, ಜಗದೀಶ ತುಪ್ಪದ, ತಮ್ಮಣ್ಣ ಮುದ್ದಿ, ಶಿವಣ್ಣ ಶಿರೂರ, ನಾಗಪ್ಪ ಮುರನಾಳ, ಕಾಂತೇಶ ತಳವಾರ, ಶಿವು ಬೆಳವಿಗಿ, ಶಿವಯೋಗೆಪ್ಪ ಅರಣಿ, ಚಂಪಾ ಹುಣಸಿಕಟ್ಟಿ, ಶಿವಲಿಂಗಯ್ಯ ಮಠಪತಿ, ಸಿಂದಗಿಮಠದ ಸಾಧಕವಟುಗಳು, ಮತ್ತಿತತರು ಭಾಗವಹಿಸಿದ್ದರು.
ಶಿವಕುಮಾರ ಹಡಗಲಿ ಪ್ರಾರ್ಥಿಸಿದರು. ವೀರಣ್ಣ ಅಂಗಡಿ ಸ್ವಾಗತಿಸಿದರು. ಶಿವಬಸವ ಮರಳಿಹಳ್ಳಿ ನಿರೂಪಿಸಿದರು. ಎಸ್.ಎನ್.ಮಳೆಪ್ಪನವರ ವಂದಿಸಿದರು.
ಮೆರವಣಿಗೆಗೆ ವಾದ್ಯಗಳ ರಂಗು
ಸಮಾರಂಭಕ್ಕೂ ಮೊದಲು ಹಾನಗಲ್ಲ ಲಿಂ.ಕುಮಾರ ಸ್ವಾಮಿಯವರ ಭಾವಚಿತ್ರದ ಮೆರವಣಿಗೆಯು ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ಹುಕ್ಕೇರಿಮಠದ ವರೆಗೆ ಸಕಲ ವಾದ್ಯಗಳೊಂದಿಗೆ ನೇರವೇರಿತು. ಶಿವಲಿಂಗೇಶ ತಳವಾರ ಮತ್ತು ಅಭಿಷೇಕ ಹಿರೇಮಠ ಇಬ್ಬರೂ ಮಕ್ಕಳು ಕುಮಾರ ಸ್ವಾಮಿಗಳ ವೇಷಭೂಷಣದಲ್ಲಿ ಬಂದಿದ್ದು ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net