

ಹಾವೇರಿ: ಸಮಾಜದ ಉದ್ದಾರವೇ ಮಹಾತ್ಮರ ಜೀವನದ ಪರಮ ಗುರಿ ಎಂದು ಭಾವಿಸುವ ಪರಂಪರೆಯು ಹಾವೇರಿಯ ಹುಕ್ಕೇರಿ ಮಠದ ಅಧ್ಯಾತ್ಮಿಕ ಸಂಪತ್ತಾಗಿದೆ. ತಿಂಗಳ ಕಾಲ ಮೌನ ಅನುಷ್ಠಾನ ಅನುಸರಿಸಿದ ಸದಾಶಿವ ಶ್ರೀಗಳೇ ಇದಕ್ಕೆ ಸಾಕ್ಷಿ ಎಂದು ಹುಬ್ಬಳ್ಳಿಯ ಮೂರು ಸಾವಿರ ಮಠದ ಜಗದ್ಗುರು ಡಾ.ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ನಗರದ ಹುಕ್ಕೇರಿ ಮಠದ ಶಿವಾನುಭವ ಮಂಟಪದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಸದಾಶಿವ ಸ್ವಾಮೀಜಿಯವರ ಜೇಷ್ಠ ಮಾಸದ ಒಂದು ತಿಂಗಳ ಮೌನಾನುಷ್ಠಾನದ ಮಂಗಲ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಮೌನಾನುಷ್ಠಾನದ ಬಲದಿಂದ ಗಳಿಸುವ ಶಕ್ತಿಯನ್ನು ಭಕ್ತರ ಉದ್ಧಾರಕ್ಕಾಗಿ ಬಳಸಿ ಎಂದು ಸಲಹೆ ನೀಡಿದರು.
ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಸಾಧು ಸಂತರ ಅನುಷ್ಠಾನ, ತಪಶಃಕ್ತಿ ಲೋಕ ಕಲ್ಯಾಣಕ್ಕೆ ಬಳಕೆಯಾಗುತ್ತದೆ. ಅನುಷ್ಠಾನದಂತಹ ಕಾರ್ಯ ಮಾಡಿದಾಗ ಶರೀರವೇ ಮಂತ್ರ ಶರೀರವಾಗಿ, ತಪಸ್ಸಿನ ಪುಣ್ಯ ಫಲವು ಭಕ್ತನಿಗೆ ದೊರೆತಾಗ ಆತನ ಸಕಲ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಶ್ರೀ ಸದಾಶಿವ ಸ್ವಾಮೀಜಿ ತಮ್ಮ ಗುರುಗಳಾದ ಜಗದ್ಗುರು ಡಾ.ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳ ಪಾದಪೂಜೆ ನೇರವೇರಿಸಿದರು. ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ನಿವೃತ್ತ ಶಿಕ್ಷಕರಾದ ಬಿ.ಸಿ.ಹಿರೇಮಠ, ಎ.ಎಚ್.ಕೋಳಿವಾಡ ಮತ್ತು ಲಕ್ಷ್ಮೀ ಗಾಮನಗಟ್ಟಿ ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಅಕ್ಕಿಆಲೂರಿನ ವಿರಕ್ತ ಮಠದ ಶ್ರೀ ಶಿವಬಸವ ಸ್ವಾಮೀಜಿ, ಕೂಡಲ ಗುರು ನಂಜೇಶ್ವರ ಮಠದ ಗುರು ಮಹೇಶ್ವರ ಸ್ವಾಮೀಜಿ, ಹಾವನೂರು ದಳವಾಯಿ ಮಠದ ಶ್ರೀ ಶಿವಕುಮಾರ ಸ್ವಾಮೀಜಿ, ಆಸಂಗಿಯ ವೀರಬಸವ ದೇವರು, ಜಗದೀಶ ತುಪ್ಪದ, ಗಣೇಶಪ್ಪ ಹೂಗಾರ, ಶಿವಯೋಗಿ ವಾಲಿಶೆಟ್ಟರ, ಬಿ.ಬಸವರಾಜ, ಶಿವಯೋಗಿ ಯರೇಶೀಮಿ, ಶಿವಕುಮಾರ ಮುದಗಲ್ಲ, ಮಹಾಂತೇಶ ಮಳಿಮಠ, ಮಹೇಶ ಚಿನ್ನಿಕಟ್ಟಿ, ನಿರಂಜನ ತಾಂಡೂರ, ಚಂಪಾ ಹುಣಸಿಕಟ್ಟಿ, ಮತ್ತಿತರರು ಉಪಸ್ಥಿತರಿದ್ದರು.
ಎಸ್.ಎಸ್. ಮುಷ್ಠಿ ಸ್ವಾಗತಿಸಿದರು. ವೀರಣ್ಣ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎನ್.ಮಳೆಪ್ಪನವರ ನಿರೂಪಿಸಿದರು. ಎಸ್.ವಿ.ಹಿರೇಮಠ ವಂದಿಸಿದರು.