

ಹಾವೇರಿ: ಹುಕ್ಕೇರಿಮಠದ ನಮ್ಮೂರ ಜಾತ್ರಾ ಹುಕ್ಕೇರಿ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಜ.18ರಿಂದ 20ರವರೆಗೆ ಮೂರು ದಿನ ಶ್ರೀಮಠದ ಆವರಣದಲ್ಲಿ ಫಲ-ಪುಷ್ಪ ಪ್ರದರ್ಶನ ಆಯೋಜಿಸಲಾಗುವುದು ಎಂದು ತೋಟಗಾರಿಕೆ ಇಲಾಖೆಯ ಕೇಂದ್ರ ಕಚೇರಿ ಸಹಾಯಕ ರಂಗಪ್ಪ ಸಿ.ಎನ್. ತಿಳಿಸಿದರು.
ಹುಕ್ಕೇರಿ ಮಠದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.18ರಂದು ಸಂಜೆ 6 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಉದ್ಘಾಟಿಸಲಿದ್ದಾರೆ. ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ವಿಧಾನಸಭಾ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ರೈತರಿಗೆ ಪ್ರಸ್ತುತ ದಿನಮಾನಗಳಲ್ಲಿನ ಕೃಷಿ ತಾಂತ್ರಿಕತೆ, ತರಕಾರಿ ಮತ್ತು ಪುಷ್ಪ ಕೃಷಿಯಿಂದಾಗುವ ಲಾಭಗಳ ಕುರಿತು ಮಾಹಿತಿ ಹಾಗೂ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಫಲ-ಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಜಾತ್ರೆಗೆ ಬರುವ ಭಕ್ತರು ಮೂರು ದಿನ ಬೆಳಗ್ಗೆ 10ರಿಂದ ರಾತ್ರಿ 9ರವರೆಗೆ ಕಣ್ತುಂಬಿಕೊಳ್ಳಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಬರೆಗಾರ, ಮಠದ ಪದಾಧಿಕಾರಿಗಳಾದ ಎಸ್.ಎಸ್.ಮುಷ್ಟಿ, ಪಿ.ಡಿ.ಶಿರೂರ, ಆರ್.ಎಸ್.ಮಾಗನೂರ, ಆನಂದ ಅಟವಾಳಗಿ, ಸುಭಾಷ ಹುರುಳಿಕುಪ್ಪಿ, ಜಗದೀಶ ತುಪ್ಪದ ಮುಂತಾದವರು ಇದ್ದರು.
ಆನೆ, ಚಂದ್ರಯಾನ ಮಿಷನ್ ಕಲಾಕೃತಿ
ಪ್ರದರ್ಶನದಲ್ಲಿ ಹೂವು, ಹಣ್ಣು ತರಕಾರಿಗಳಿಂದ ವಿವಿಧ ಕಲಾಕೃತಿಗಳನ್ನು ತಯಾರಿಸಿ ಪ್ರದರ್ಶಿಸಲಾಗುವುದು. ಭಾರತದ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ಚಂದ್ರಯಾನ-3 ಯಶಸ್ವಿ ಉಡಾವಣೆ ಮಾಡಿದ ಅಂಗವಾಗಿ ಚಂದ್ರಯಾನ-3 ಮಿಷನ್, ವಿಕ್ರಂ ಲ್ಯಾಂಡರ್ ಮತ್ತು ಇಸ್ರೊ ಸಂಸ್ಥೆಯ ಲೋಗೊ ಕಲಾಕೃತಿಯನ್ನು ಫಲಪುಷ್ಪಗಳಿಂದ ಪ್ರದರ್ಶಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಬರೆಗಾರ ಹೇಳಿದರು.
ಪುಷ್ಪ ಗಡಿಯಾರ, ಹೂವಿನ ಆನೆ, ಗೋಡಂಬಿ ಮಾದರಿಯ ಫೋಟೊ ಫ್ರೇಮ್, ಸೆಲ್ಪಿ ಪಾಯಿಂಟ್, ದೀಪಗಳು, ಕರ್ನಾಟಕ ನಕ್ಷೆ, ಎಲೆ ಮೇಲೆ ಕುಳಿತ ಚಿಟ್ಟೆ, ಕಾರಂಜಿ, ಬಸವಣ್ಣ, ಏಲಕ್ಕಿ ಗಣಪ, ಈಶ್ವರ ಲಿಂಗ ಮುಂತಾದ ಕಲಾಕೃತಿಳನ್ನು ಫಲಪುಷ್ಪಗಳಲ್ಲಿ ಅರಳಿಸಿ ಪ್ರದರ್ಶಿಸಲಾಗುವುದು ಎಂದ ತಿಳಿಸಿದರು.