ಉಭಯ ಶ್ರೀಗಳ ಭಾವಚಿತ್ರದ ಅದ್ಧೂರಿ ಮೆರವಣಿಗೆ; ಹುಕ್ಕೇರಿ ಮಠದ ನಮ್ಮೂರ ಜಾತ್ರೆಯಲ್ಲಿ ಕಲಾತಂಡಗಳ ಸೊಬಗು

21 HVR 9 A
Published on

ಹಾವೇರಿ: ಇಲ್ಲಿನ ಹುಕ್ಕೇರಿ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ನಗರದಲ್ಲಿ ಭಾನುವಾರ ಶ್ರೀ ಶಿವಬಸವ ಸ್ವಾಮೀಜಿ ಹಾಗೂ ಶ್ರೀ ಶಿವಲಿಂಗ ಸ್ವಾಮೀಜಿಯವರ ಭಾವಚಿತ್ರದ ಮೆರವಣಿಗೆ ಅದ್ಧೂರಿಯಾಗಿ ಜರುಗಿತು.
ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಜಾನಪದ ಕಲಾ ತಂಡಗಳಾದ ರಾಣೆಬೆನ್ನೂರಿನ ಹನುಮಾನ್ ಬ್ಯಾಂಡ್, ಕುಂದಾಪುರದ ಚಂಡೆ ಮೇಳ, ತುಮ್ಮಿಕಟ್ಟಿಯ ಸಮಾಳ, ದಾವಣಗೆರೆಯ ನಂದಿಕೋಲು ಕುಣಿತ, ನಂದಿಹಳ್ಳಿ ಭಜನಾ ಮಂಡಳಿ, ಹುಲಿವೇಷ, ಗೊಂಬೆ ವೇಷ, ಜಾಂಜ್ ಮೇಳ, ಐರಣಿ ಮಠದ ಆನೆ, ನಂದಿಕೋಲು, ಮಹಿಳಾ ಡೊಳ್ಳು ಕುಣಿತ ತಂಡ, ಲಕಮಾಪುರದ ಜಾಂಜ್ ಮೇಳ, ಸೇರಿದಂತೆ ವಿವಿಧ ಕಲಾ ತಂಡಗಳು ಗಮನ ಸೆಳೆದವು.
ಮೆರವಣಿಗೆಯು ಹುಕ್ಕೇರಿ ಮಠದಿಂದ ಆರಂಭವಾಗಿ ಎಂ.ಜಿ.ರೋಡ್, ಮೇಲಿನ ಪೇಟೆ, ಸುಭಾಸ ಸರ್ಕಲ್, ಹಳೆ ಅಂಚೆ ಕಚೇರಿ ರಸ್ತೆ, ದೇಸಾಯಿ ಗಲ್ಲಿ, ರೈತರ ಓಣಿ, ಕಂದಕ ರಸ್ತೆ, ಬಸ್ತಿಬಾವಿ ರಸ್ತೆ, ಅಕ್ಕಿಪೇಟೆ, ಯಾಲಕ್ಕಿ ಓಣಿ, ಪುಸಿದ್ದೇಶ್ವರ ನಗರದಿಂದ ತಡರಾತ್ರಿ ಶ್ರೀಮಠವನ್ನು ತಲುಪಿತು. ದಾರಿಯುದ್ದಕ್ಕೂ ಭಕ್ತರು ಹಣ್ಣು, ಕಾಯಿಗಳನ್ನು ರಥಕ್ಕೆ ಅರ್ಪಿಸಿದರು. ಮೆರವಣಿಗೆಗೆ ಬಂದ ಭಕ್ತರಿಗೆ ಕೆಲವೆಡೆ ಅಲ್ಪೋಪಹಾರ ವ್ಯವಸ್ಥೆ ಮಾಡಲಾಗಿತ್ತು.
ಮದನಹಿಪ್ಪರಗಿಯ ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ, ಅಕ್ಕಿಆಲೂರಿನ ಶ್ರೀ ಶಿವಬಸವ ಸ್ವಾಮೀಜಿ, ಕೂಡಲದ ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಅಕ್ಕಿಆಲೂರಿನ ಮುತ್ತಿನಕಂತಿಮಠದ ಶ್ರೀಗಳು, ಶಿವಯೋಗಿ ಹೂಲಿಕಂತಿಮಠ, ವೀರಬಸವ ದೇವರು, ಚಂದ್ರಶೇಖರ ದೇವರು, ಶಿವಪ್ರಸಾದ ದೇವರು, ಉತ್ಸವ ಸಮಿತಿ ಅಧ್ಯಕ್ಷ ವಿಜಯಕುಮಾರ ಕೂಡ್ಲಪ್ಪನವರ, ಆನಂದ ಅಟವಾಳಗಿ, ಕರಬಸಪ್ಪ ಹಲಗಣ್ಣನವರ, ಮತ್ತಿತರರು ಉಪಸ್ಥಿತರಿದ್ದರು.
ಗದ್ದುಗೆಗೆ ಬಿಲ್ವಾರ್ಚನೆ
ಬೆಳಗ್ಗೆ 8 ಗಂಟೆಗೆ ಉಭಯ ಶ್ರೀಗಳ ಗದ್ದುಗೆಗೆ ಬಿಲ್ವಾರ್ಚನೆ ಮತ್ತು ಮಹಾಪೂಜೆ ನಡೆಯಿತು. ಗದ್ದುಗೆಗಳನ್ನು ವಿವಿಧ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಸಾವಿರಾರು ಭಕ್ತರು ಗದ್ದುಗೆಯ ದರ್ಶನ ಪಡೆದು ಪುನೀತರಾದರು. ಸಹಸ್ರಾರು ಭಕ್ತರಿಗೆ ದಾಸೋಹ ಏರ್ಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net