

ಹಾವೇರಿ: ಭಾರತ ಜಗತ್ತಿನಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಅಮೃತ ಮಹೋತ್ಸವದ ಈ ಶುಭ ಸಂದರ್ಭದಲ್ಲಿ ಭಾರತ ಎಲ್ಲ ರಂಗಗಳಲ್ಲಿಯೂ ಅಭೂತಪೂರ್ವ ಸಾಧನೆ ಮಾಡುತ್ತಿದೆ. ರಾಷ್ಟ್ರೀಯ ಭಾವೈಕ್ಯತೆಗೆ ಹಲವು ಅಡೆತಡೆಗಳನ್ನು ಭಾರತ ಸಮರ್ಥವಾಗಿ ಎದುರಿಸಿ, 2047ರ ಶತಮಾನೋತ್ಸವದ ಹೊತ್ತಿಗೆ ವಿಶ್ವಗುರುವಾಗಿ ಹೊರಹೊಮ್ಮಲಿ ಎಂದು ಹುಕ್ಕೇರಿಮಠದ ಶ್ರೀ ಸದಾಶಿವ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.
ನಗರದ ಹುಕ್ಕೇರಿಮಠ ಆವರಣದಲ್ಲಿ ಮಂಗಳವಾರ ಶ್ರೀ ಶಿವಲಿಂಗೇಶ್ವರ ವಿದ್ಯಾಪೀಠದ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆದ ದ್ವಜಾರೋಹಣ ನೆರವೇರಿಸಿ ಅವರು ಮಾಡಿದರು.
ಭಾರತ ಪ್ರತಿ ಪ್ರಜೆಗೂ ಸಮಾನ ಅವಕಾಶ ನೀಡಿದ್ದು, ಎಲ್ಲರೂ ತಮ್ಮ ಜವಾಬ್ದಾರಿ ಅರಿತು, ದೇಶಕ್ಕಾಗಿ ಸೇವೆ ಸಲ್ಲಿಸಬೇಕು. ಭಾರತವು ಜಗತ್ತಿನಲ್ಲಿಯೇ ಪ್ರಬಲ ನಾಯಕತ್ವದ ರಾಷ್ಟ್ರವಾಗಿ ಹೊರಹೊಮ್ಮಿದ್ದು, ಚಂದ್ರಯಾನ-3 ಯೋಜನೆ ಯಶಸ್ಸು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದಾಪುಗಾಲು ಇಡುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ದೇಶಭಕ್ತಿ ಸಾರುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಸಮಾರಂಭದಲ್ಲಿ ಶ್ರೀ ಶಿವಲಿಂಗೇಶ್ವರ ವಿದ್ಯಾಪೀಠದ ಚೇರ್ಮನ್ ಎಸ್.ಎಸ್ ಮುಷ್ಠಿ, ಜಗದೀಶ ತುಪ್ಪದ, ನಿರಂಜನ ತಾಂಡೂರ, ವೀರಣ್ಣ ಅಂಗಡಿ, ಮಹಾಂತೇಶ ಮಳಿಮಠ, ಮಹೇಶ ಚಿನ್ನಿಕಟ್ಟಿ, ಶಿವಯೋಗಿ ವಾಲಿಶೆಟ್ಟರ, ಸಿದ್ದಣ್ಣ ಕಡೇಮನಿ, ಎಸ್.ವಿ ಕೂಡ್ಲಪ್ಪನವರ, ಪ್ರಾಚಾರ್ಯರಾದ ಡಾ.ಸವಿತಾ ಹಿರೇಮಠ, ಎಸ್.ವಿ.ಹಿರೇಮಠ, ಎಸ್.ಬಿ.ಅಣ್ಣಿಗೇರಿ, ಮುಖ್ಯೋಪಾಧ್ಯಾಯೆ ಚನ್ನಮ್ಮ ಅಂತರವಳ್ಳಿ, ರೇಣುಕಾ ಮಡಿವಾಳರ, ಇತರರು ಪಾಲ್ಗೊಂಡಿದ್ದರು.