

ಹಾವೇರಿ: ಅಧಿಕ ಮಾಸದ ಅಂಗವಾಗಿ ನಗರದ ಹುಕ್ಕೇರಿ ಮಠದಲ್ಲಿ ಶುಕ್ರವಾರ ಹುಕ್ಕೇರಿಮಠದ ಅಕ್ಕನ ಬಳಗದ ವತಿಯಿಂದ 75 ಮುತ್ತೈದೆಯರಿಗೆ ಬಾಗಿನ ಅರ್ಪಿಸಲಾಯಿತು.
ಹಾವೇರಿ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವೆ ಡಾ.ವಿಜಯಲಕ್ಷ್ಮೀ ತಿರ್ಲಾಪುರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಬಸವಾದಿ ಶರಣರ ಸಮಾನತೆಯ ಹೋರಾಟದಿಂದ ನಮ್ಮ ಹೆಣ್ಣು ಮಕ್ಕಳಿಗೆ ಸಮಾನತೆ ದೊರೆತು ನಮ್ಮ ನಾಡಿನ ಸಂಸ್ಕೃತಿ ಹಾಗೂ ಧಾರ್ಮಿಕ ಆಚರಣೆಗಳು 21ನೇ ಶತಮಾನದಲ್ಲೂ ಮುಂದುವರೆದಿವೆ. ನಮ್ಮ ಹೆಣ್ಣು ಮಕ್ಕಳು ಗುಡಿಗೆ ಹೋಗುವುದರ ಜತೆಗೆ ಒಂದೊಂದು ಪುಸ್ತಕವನ್ನು ಓದಬೇಕು. ನುಡಿದಂತೆ ನಡೆಯಬೇಕು. ನಡೆದಂತೆ ನುಡಿಯಬೇಕು ಎಂದು ಹೇಳಿದರು.
ಬಳಗದ ಅಧ್ಯಕ್ಷೆ ಚಂಪಾ ಹುಣಸಿಕಟ್ಟಿ ಮಾತನಾಡಿ, 3 ವರ್ಷಕ್ಕೊಮ್ಮೆ ಬರುವ ಅಧಿಕ ಮಾಸದಲ್ಲಿ ಬಾಗಿನ ಕೊಡುವುದರಿಂದ 33 ದೇವತೆಗಳನ್ನು ಆಹ್ವಾನ ಮಾಡಿದಷ್ಟೂ ಪುಣ್ಯ ಪ್ರಾಪ್ತಿಯಾಗುತ್ತದೆ. ನಾವು ಮಾಡಿದ ದಾನ ಮೂರು ಪಟ್ಟು ಜಾಸ್ತಿ ಆಗುತ್ತದೆ ಎಂದು ಹೇಳಿದರು.
ಸಾಹಿತಿ ಲೀಲಾವತಿ ಪಾಟೀಲ, ಅಮೃತಮ್ಮ ಶೀಲವಂತರ, ಲಲಿತಕ್ಕ ಹೊರಡಿ, ವಿಜಯಲಕ್ಷ್ಮೀ ಹಾಲಯ್ಯನವರಮಠ, ಸುರೇಖಾ ಮಳಗಿ, ಕಸ್ತೂರೆಮ್ಮ ಆಟವಳಗಿ, ಇತರರು ಉಪಸ್ಥತರಿದ್ದರು. ಅಕ್ಕನ ಬಳಗದ ತಾಯಂದಿರು ಪ್ರಾರ್ಥಿಸಿದರು. ಕಮಲಾ ಬುಕಶೆಟ್ಟಿ ಸ್ವಾಗತಿಸಿದರು. ಶಿವಲೀಲಾ ಶಿರಸಪ್ಪನವರ ನಿರೂಪಿಸಿದರು. ಶಾಂತಾ ಕಬ್ಬಿನಕಂತಿಮಠ ವಂದಿಸಿದರು.