

ಹಾವೇರಿ: ಕರ್ನಾಟಕದ ಉಕ್ಕಿನ ಮನುಷ್ಯ, ಸ್ವಾತಂತ್ರೃ ವೀರ ಗುದ್ಲೆಪ್ಪ ಹಳ್ಳಿಕೇರಿ ಅವರ ಜೀವನ ಚರಿತ್ರೆಯನ್ನು ಮುಂದಿನ ಜನಾಂಗಕ್ಕೆ ತಿಳಿಸಬೇಕು. ಈ ನಿಟ್ಟಿನಲ್ಲಿ ಹೊಸರಿತ್ತಿಯಲ್ಲಿ ಹಾವೇರಿ ವಿಶ್ವವಿದ್ಯಾಲಯದಿಂದ ಅಧ್ಯಯನ ಪೀಠ ತೆರೆಯಲು ಸಿದ್ಧರಿದ್ದು, ಪ್ರತಿಷ್ಠಾನದಿಂದ ಪ್ರಸ್ತಾವ ಸಲ್ಲಿಸಿದರೆ, ತ್ವರಿತವಾಗಿ ಒಪ್ಪಿಗೆ ನೀಡಲಾಗುವುದು ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸುರೇಶ ಜಂಗಮಶೆಟ್ಟಿ ಹೇಳಿದರು.
ತಾಲೂಕಿನ ಹೊಸರಿತ್ತಿ ಗ್ರಾಮದ ಮಹಾತ್ಮ ಗಾಂಧಿ ಗುರುಕುಲದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಹಾಗೂ ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನದಿಂದ ಶುಕ್ರವಾರ ಆಯೋಜಿಸಿದ್ದ ಗುದ್ಲೆಪ್ಪ ಹಳ್ಳಿಕೇರಿ ಅವರ 120ನೇ ಜಯಂತ್ಯುತ್ಸವ ಹಾಗೂ ಸೇವಾ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮ ದೇಶದ ಇತಿಹಾಸ ನೋಡಬೇಕಾದರೆ, ನಾವೆಲ್ಲರೂ ಈ ಗಾಂಧೀ ಗುರುಕುಲಕ್ಕೆ ಬರಬೇಕು. ಇಲ್ಲಿ ನನಗೂ ದೇಶದ ಇತಿಹಾಸದ ದರ್ಶನವಾಯಿತು. ಬೀಚ್‌ಗೆ ಹೋಗುವುದು, ಸ್ಮಾರಕಗಳನ್ನು ನೋಡುವುದು, ರೆಸಾರ್ಟ್‌ನಲ್ಲಿ ಉಳಿದುಕೊಳ್ಳುವುದಷ್ಟೇ ಪ್ರವಾಸೋದ್ಯಮವಲ್ಲ. ಗುರುಕುಲದಲ್ಲಿ ಗುದ್ಲೆಪ್ಪ ಹಳ್ಳಿಕೇರಿ ಅವರ ಫೋಟೊಗಳ ಮ್ಯೂಸಿಯಂ ಇದೆ. ಗಾಂಧಿ ತತ್ವದಲ್ಲಿ ಬೋಧಿಸುವ ಗುರುಕುಲವಿದೆ. ಈ ಸ್ಥಳವನ್ನೂ ಪ್ರವಾಸೋದ್ಯಮ ಸ್ಥಳವನ್ನಾಗಿ ಮಾಡಲು ಊರಿನ ಜನರೆಲ್ಲರೂ ಪಣ ತೊಡಬೇಕು ಎಂದು ಕರೆ ನೀಡಿದರು.
ಪ್ರತಿಷ್ಠಾನದ ಸಂಸ್ಥಾಪಕ ಧರ್ಮದರ್ಶಿ ವೀರಣ್ಣ ಚೆಕ್ಕಿ ಮಾತನಾಡಿ, ಗುದ್ಲೆಪ್ಪ ಹಳ್ಳಿಕೇರಿ ಅವರ ಅಧ್ಯಯನ ಪೀಠ ತೆರೆಯುವ ಚಿಂತನೆ ಮಾಡಿರುವುದು ಸಂತೋಷದ ಸಂಗತಿ. ಈ ಬಗ್ಗೆ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ, ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಾದ ಜಗದೀಶ ಮಾಡಳ್ಳಿ, ಕೃಷ್ಣ ಮರಡಿ, ಸುರೇಶ ಯಾದವಾಡ, ಲಕ್ಷ್ಮೀ ಬ್ಯಾಹಟ್ಟಿ, ಹರೀಶ ಕಾಳಗಿ, ಐಶ್ವರ್ಯ ಕೋಡಶೆಟ್ರ, ಮನೋಜಕುಮಾರ ನಿ., ಚೈತ್ರಾ ಕಮತರ, ಕವಿತಾ ಅರಳಿ, ಅಭಿಷೇಕ ಅಕ್ಕೂರ, ಆಕಾಶ ಪೂಜಾರ, ವಿನಾಯಕ ಅರಳಿ, ನಾಗರತ್ನಾ ಅಗಡಿ, ದೀಪಾ ಪಾಟೀಲ, ಸಾದಿಕಾ ಗಂದಿಗೇರ, ಸುಚಿತ್ರಾ ಶಿಂಧೆ, ಅಂಕಿತಾ ಗೋಪಾಳಿ, ಪ್ರಿಯಾಂಕಾ ಕಾಯಕದ, ಅಕ್ಷತಾ ಜಂಗಳಿ ಅವರನ್ನು ಸನ್ಮಾನಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಗುರುಪಾದಯ್ಯ ಸಾಲಿಮಠ, ಪತ್ರಕರ್ತ ರವೀಂದ್ರ ಮುದ್ದಿ, ಚನ್ನಬಸಪ್ಪ ದಾವಲಶೆಟ್ಟರ, ಡಾ.ರಾಜೇಂದ್ರಪ್ರಸಾದ ಹಳ್ಳಿಕೇರಿ, ರಮೇಶ ಏಕಬೋಟೆ, ಗಿರೀಶ ಅಂಕಲಕೋಟಿ, ಚಂದ್ರಶೇಖರ ಅರಳಿಹಳ್ಳಿ, ಇತರರು ಉಪಸ್ಥಿತರಿದ್ದರು.
ಮೋಹನ ಹೆಗಡೆಗೆ ಸೇವಾ ಗೌರವ ಪ್ರಶಸ್ತಿ
ಹಿರಿಯ ಪತ್ರಕರ್ತ ಮೋಹನ ಹೆಗಡೆ ಅವರಿಗೆ 2025ನೇ ಸಾಲಿನ ಗುದ್ಲೆಪ್ಪ ಹಳ್ಳಿಕೇರಿ ಸೇವಾ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ನಂತರ ಮಾತನಾಡಿದ ಮೋಹನ ಹೆಗಡೆ, ಗುದ್ಲೆಪ್ಪ ಹಳ್ಳಿಕೇರಿ ಅವರಲ್ಲಿದ್ದ ಕಾಯಕತ್ವ ಹಾಗೂ ದೂರದೃಷ್ಟಿ ಇಂದಿನ ಯಾವ ನಾಯಕರಲ್ಲೂ ಇಲ್ಲ. ಗುದ್ಲೆಪ್ಪ ಹಳ್ಳಿಕೇರಿ ಸೇರಿ ಮಹಾನ್ ವ್ಯಕ್ತಿಗಳು ಹಾವೇರಿಯವರು. ಇವರ ಜೀವನ ಚರಿತ್ರೆಯನ್ನು ಎಲ್ಲರಿಗೂ ತಿಳಿಸುವ ನಿಟ್ಟಿನಲ್ಲಿ ಹಾವೇರಿ ವಿಶ್ವವಿದ್ಯಾಲಯದಲ್ಲಿ ಫೋಟೊ ಮ್ಯೂಸಿಯಂ ನಿರ್ಮಿಸಲು ಕುಲಪತಿಗಳು ಮುಂದಾಗಬೇಕು ಎಂದರು.