38 ವರ್ಷ ಸೇವೆ ಸಲ್ಲಿಸಿದ ಯೋಧನಿಗೆ ಆತ್ಮೀಯ ಸ್ವಾಗತ; ಹಾವೇರಿ ರೈಲುನಿಲ್ದಾಣದಿಂದ ಅದ್ಧೂರಿ ಮೆರವಣಿಗೆ ಜೂ.3ರಂದು

2 Prabhakar Karishettar
Published on

ಹಾವೇರಿ: ಸಿಆರ್‌ಪಿಎಫ್‌ನಲ್ಲಿ ಸುದೀರ್ಘ 38 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ, ಜಿಲ್ಲೆಗೆ ಆಗಮಿಸುತ್ತಿರುವ ಜಿಲ್ಲೆಯ ಯೋಧ ಪ್ರಭಾಕರ ವೀರಪ್ಪ ಕರಿಶೆಟ್ಟರ್ ಅವರನ್ನು ಜೂ.3ರಂದು ಬೆಳಗ್ಗೆ 10 ಗಂಟೆಗೆ ರೈಲು ನಿಲ್ದಾಣದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಗುವುದು ಎಂದು ಜಿಲ್ಲಾ ಮಾಜಿ ಸೈನಿಕರ ಸಂಘದ ಮಾಜಿ ಅಧ್ಯಕ್ಷ ಕೆ.ಸಿ ಕೋರಿ ಹೇಳಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಹೊಸರಿತ್ತಿ ಮೂಲದ ಪ್ರಭಾಕರ ಕರಿಶೆಟ್ಟರ್ ಅವರು ಸಿಆರ್‌ಪಿಎಫ್‌ನಲ್ಲಿ 38 ವರ್ಷ ಸೇವೆ ಸಲ್ಲಿಸಿ, ಛತ್ತೀಸಘಡದಲ್ಲಿ ನಿವೃತ್ತಿ ಹೊಂದಿದ್ದಾರೆ. ದೇಶದ ನಾನಾ ಭಾಗದಲ್ಲಿ ಸೇವೆ ಸಲ್ಲಿಸಿದ ಅವರು, ಕೊನೆಗೆ ಇನ್‌ಸ್ಪೆಕ್ಟರ್ ಆಗಿ ನಿವೃತ್ತಿ ಹೊಂದಿದ್ದಾರೆ. 15, 20 ವರ್ಷ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದುವುದನ್ನು ನೋಡಿದ್ದೇವೆ. ಆದರೆ, ಪ್ರಭಾಕರ ಅವರು 38 ವರ್ಷಗಳ ಕಾಲ ಸೇವೆ ಸಲ್ಲಿಸಿರುವುದು ನಮ್ಮ ಜಿಲ್ಲೆ ಸೇರಿ ರಾಜ್ಯಕ್ಕೆ ಹೆಮ್ಮೆಯ ಸಂಗತಿ ಎಂದರು.

ಬೆಂಗಳೂರಿನಿಂದ ವಂದೇ ಭಾರತ ರೈಲಿನ ಮೂಲಕ ಬೆಳಗ್ಗೆ 10 ಗಂಟೆಗೆ ಹಾವೇರಿ ರೈಲು ನಿಲ್ದಾಣಕ್ಕೆ ಪ್ರಭಾಕರ ಅವರು ಆಗಮಿಸುತ್ತಾರೆ. ಮಾಜಿ ಸೈನಿಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸಾರ್ವಜನಿಕರು ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಗುವುದು. ನಂತರ ರೈಲು ನಿಲ್ದಾಣದಿಂದ ಹೊಸಮನಿ ಸಿದ್ದಪ್ಪ ವೃತ್ತದವರೆಗೆ ಮೆರವಣಿಗೆ ಮೂಲಕ ಕರೆತರಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಪುತ್ರಪ್ಪ ಕಡ್ಲಿ, ಶಂಕ್ರಪ್ಪ ಕರಮಡಿ, ಚನ್ನಬಸಪ್ಪ ಹಾವೇರಿ, ಶ್ರೀನಿವಾಸ ಯರೇಸೀಮಿ, ಇತರರಿದ್ದರು.

ಹೊಸರಿತ್ತಿಯಲ್ಲಿ ಅಭಿನಂದನೆ

ಹೊಸರಿತ್ತಿ ಗ್ರಾಮದಲ್ಲಿ ಮಧ್ಯಾಹ್ನ 2 ಗಂಟೆಗೆ ಪ್ರಭಾಕರ ಅವರ ಮೆರವಣಿಗೆ ನಡೆಸಿ ಶ್ರೀ ಗುದ್ದಲೀಶ್ವರ ಮಠದ ಆವರಣದಲ್ಲಿ ಅಭಿನಂದನಾ ಸಮಾರಂಭ ಆರಂಭಿಸಲಾಗುವುದು. ಗ್ರಾಮಸ್ಥರು ಸೇರಿದಂತೆ ಎಲ್ಲರೂ ಸೇರಿ ಸನ್ಮಾನಿಸಿ, ಗೌರವಿಸಲಾಗುವುದು ಎಂದು ಕೆ.ಸಿ ಕೋರಿ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net