

ಹಾವೇರಿ: ಈ ಹಿಂದೆ ಮಂತ್ರಗಳು ಕೆಲಸ ಮಾಡುತ್ತಿದ್ದರೆ, ಇಂದಿನ ತಂತ್ರಜ್ಞಾನ ಯುಗದಲ್ಲಿ ತಂತ್ರಗಳು ಕೆಲಸ ಮಾಡುತ್ತಿವೆ. ನಾವು ಸಂಗ್ರಹಿಸಿದ ಹಣ, ಆಸ್ತಿ ಅಳಿಯಬಹುದು. ಆದರೆ, ಗ್ರಹಿಸಿದ ಜ್ಞಾನ ಅಳಿದು ಹೋಗಲಾರದು ಎಂದು ಹೊಸಮಠದ ಶ್ರೀ ಶಾಂತಲಿಂಗ ಸ್ವಾಮೀಜಿ ಹೇಳಿದರು.
ನಗರದ ಹೊಸಮಠದಲ್ಲಿ ಬಸವ ಕೇಂದ್ರ, ಅಕ್ಕನ ಬಳಗ, ಶೂನ್ಯ ಫೌಂಡೇಶನ್ ಹಾಗೂ ತಾಯಿ ಸೇವಾ ಫೌಂಡೇಶನ್‌ನಿಂದ ಭಾನುವಾರ ಆಯೋಜಿಸಿದ್ದ ‘ಸಾಮಾಜಿಕ ಜಾಲತಾಣಗಳ ಸಾಧಕ ಬಾದಕಗಳ ಸಂವಾದ ಕಾರ್ಯಕ್ರಮ’ ಉದ್ಘಾಟಿಸಿ ಅವರು ಮಾತನಾಡಿದರು. ಸಾಮಾಜಿಕ ಜಾಲತಾಣಗಳು ಬೆಂಕಿ ಇದ್ದಂತೆ. ಅದರಿಂದ ಉದ್ದಾರ ಆಗಬಹುದು. ಹಾಳಾಗಲೂಬಹುದು. ಯಾವುದನ್ನು ಹೇಗೆ, ಎಷ್ಟು ಬಳಸಿಕೊಳ್ಳಬೇಕು ಎಂಬುದನ್ನು ಅರಿಯಬೇಕು. ಇತ್ತೀಚೆಗೆ ಯುವಕರಲ್ಲಿ ಸೃಜನಶೀಲತೆ ಸತ್ತು ಹೋಗಿದೆ. ಅಶ್ಲೀಲತೆ, ಅಸ್ಥಿರತೆಯಿಂದ ಕುಟುಂಬಗಳು ಹಾಳಾಗುತ್ತಿವೆ ಎಂದರು.
ಲೇಖಕ ಹನುಮಂತಗೌಡ ಗೊಲ್ಲರ ಮಾತನಾಡಿ, ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವುದರ ಕುರಿತು ವಿಶ್ವದಾದ್ಯಂತ ಪರ-ವಿರೋಧ ಚರ್ಚೆಗಳು ಬಹಳ ಜೋರಾಗಿ ನಡೆದಿವೆ. ಆಸ್ಟ್ರೇಲಿಯಾದಲ್ಲಿ 16 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳು ಬಳಕೆ ಮಾಡುವಂತಿಲ್ಲ ಎಂದು ಕಾನೂನು ರೂಪಿಸಿದ ಮೊದಲ ದೇಶವಾಗಿದೆ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಮಲ್ಲೇಶ ಕರಿಗಾರ ಮಾತನಾಡಿದರು.
ಸಾಧಕಗಳ ಕುರಿತು ಸಾಕ್ಷಿಚಿತ್ರ ನಿರ್ದೇಶಕ ಗೂಳಪ್ಪ ಅರಳಿಕಟ್ಟಿ, ವಕೀಲೆ ಅನಿತಾ ಹರನಗೇರಿ ಹಾಗೂ ಹಿರಿಯ ಪತ್ರಕರ್ತ ಬಸವರಾಜ ಮರಳಿಹಳ್ಳಿ ಮಾತನಾಡಿದರು. ಬಾಧಕಗಳಿಗಿಂತ ಸಾಧಕಗಳೇ ಹೆಚ್ಚಿವೆ. ಜನಾಭಿಪ್ರಾಯ ರೂಪಿಸಲು ಮಾರುಕಟ್ಟೆಗಳಾಗಿವೆ. ತಮ್ಮ ವಿಚಾರಗಳನ್ನು ಹಂಚಿಕೊಳ್ಳಲು ಉತ್ತಮ ವೇದಿಕೆ ಇದಾಗಿದೆ ಎಂದು ಹೇಳಿದರು.
ಬಾದಕಗಳ ಕುರಿತು ನಿವೃತ್ತ ಪೊಲೀಸ್ ಅಧಿಕಾರಿ ಶಶಿಧರ, ಹಾವೇರಿ ವಿಶ್ವವಿದ್ಯಾಲಯದ ಕೌಶಲ ತರಬೇತಿ ಅಧಿಕಾರಿ ಅಂಬಿಕಾ ಹಂಚಾಟೆ, ಲಿಂಗರಾಜ ಸುಳ್ಳಳ್ಳಿ ಮಾತನಾಡಿದರು. ಯುವಜನ ಮಾತ್ರವಲ್ಲ ಎಲ್ಲ ವಯೋಮಾನದ ಮೊಬೈಲ್ ಬಳಸುವ ಪ್ರತಿ ಮೂರಲ್ಲಿ ಇಬ್ಬರು ಅದಕ್ಕೆ ದಾಸರಾಗುತ್ತಿದ್ದಾರೆ ಎಂದು ಅಧ್ಯಯನಗಳು ತಿಳಿಸುತ್ತವೆ ಎಂದು ಪ್ರತಿ ಸವಾಲು ಹಾಕಿದರು.
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಹಿತಿ ಸುರೇಶ ಮಲ್ಲಾಡ, ಶಿಕ್ಷಕ ಸಿ.ಎನ್.ಪಾಟೀಲ ಹಾಗೂ ಕಲಾವಿದ ಬಸವರಾಜ ಗೊಬ್ಬಿ ಅವರನ್ನು ಸ್ನಾಮನಿಸಲಾಯಿತು.
ಶಿಕ್ಷಕ ಸಾಹಿತಿ ನಾಗರಾಜ ಹೊನ್ನತ್ತಿಗೌಡ, ಇತರರಿದ್ದರು. ಮಮತಾ ನಂದಿಹಳ್ಳಿ ವಚನ ಪ್ರಾರ್ಥನೆ ಮಾಡಿದರು. ಶಿಕ್ಷಕ ಎ.ಎಚ್.ಕಬ್ಬಿಣ ಕಂತಿಮಠ ಸ್ವಾಗತಿಸಿದರು. ಶಿಕ್ಷಕ ಚನ್ನಪ್ಪ ನಿರೂಪಿಸಿದರು.