ಕ್ರಿಯೆ- ಜ್ಞಾನಗಳ ಸಮನ್ವಯದಿಂದ ಆತ್ಮಜ್ಞಾನ ಪ್ರಾಪ್ತಿ; ಶರಣ ಸಂಗಮ ಕಾರ್ಯಕ್ರಮದಲ್ಲಿ ಹೊಸಮಠದ ಶ್ರೀ ಹೇಳಿಕೆ

4 HVR 2
Published on

ಹಾವೇರಿ: ಕ್ರಿಯೆ, ಜ್ಞಾನಗಳ ಸಮನ್ವಯದಿಂದಲೇ ಆತ್ಮಜ್ಞಾನವೂ ಪ್ರಾಪ್ತಿಯಾಗುವುದು. ಕ್ರಿಯೆ ಮತ್ತು ಜ್ಞಾನಗಳ ಸಮನ್ವಯವೂ ಭಕ್ತಿಯನ್ನೇ ಅವಲಂಬಿಸಿರಬೇಕು. ಕ್ರಿಯೆ ಮತ್ತು ಜ್ಞಾನಗಳು ನಿರ್ವಂಚಕ ಹಾಗೂ ನಿರ್ಮಲ ಭಕ್ತಿಯ ಅಂತರ ಬಾಹ್ಯ ಸ್ವರೂಪಗಳಾಗಿರುತ್ತವೆ ಎಂದು ಹೊಸಮಠದ ಶ್ರೀ ಶಾಂತಲಿಂಗ ಸ್ವಾಮೀಜಿ ಹೇಳಿದರು.

ನಗರದ ಹೊಸಮಠದ ಬಸವಕೇಂದ್ರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶರಣ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಗತ್ತಿನ ಸಾಂಸ್ಕೃತಿಕ ಇತಿಹಾಸವೆಂದರೆ ಆಂದೋಲನಗಳ ಚರಿತ್ರೆ. ಪ್ರಪಂಚದ ಬೇರೆ ಬೇರೆ ರಾಷ್ಟ್ರಗಳಲ್ಲಿ ಇಂಥ ಚಳುವಳಿಗಳು ಕಾಲದಿಂದ ಕಾಲಕ್ಕೆ ನಡೆಯುತ್ತಲೇ ಬಂದಿವೆ. ಆದರೆ 12ನೇ ಶತಮಾನದಲ್ಲಿ ಕರ್ನಾಟಕದಲ್ಲಿ ನಡೆದ ಕಲ್ಯಾಣದ ಶಿವಶರಣರ ಆಂದೋಲನ ಇಡೀ ವಿಶ್ವವನ್ನೇ ವಿಸ್ಮಯಗೊಳಿಸಿದ ಒಂದು ಅದ್ಭುತ ಘಟನೆ ಎಂದರು.

ಈ ಚಳುವಳಿ ಕೇವಲ ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಇಡೀ ಮಾನವ ಬದುಕನ್ನೇ ಸುತ್ತು ಹಾಕಿಕೊಂಡಿತ್ತು. ಯಾವುದೇ ಕ್ರಾಂತಿ ಒಬ್ಬ ವ್ಯಕ್ತಿಯಿಂದ ಆದುದ್ದಲ್ಲ. ಆ ಯುಗದ ಒಟ್ಟು ಸಮಸ್ಟಿ ಮನಸ್ಸಿನ ಒತ್ತಡದಿಂದ ಅದು ಸಾಧ್ಯವಾಗಿರುತ್ತದೆ. ಆದರೆ, ಅದು ಯಶಸ್ವಿಯಾಗಬೇಕಾದರೆ ಒಬ್ಬ ಸಮರ್ಥ ನಾಯಕನ ಅಗತ್ಯವಿರುತ್ತದೆ. ಬಸವಣ್ಣ ಒಬ್ಬ ಸಮರ್ಥ ನಾಯಕನಾಗಿದ್ದರು ಎಂದರು.

ಬಾಲಕಿಯರ ಪ.ಪೂ ಕಾಲೇಜ್‌ನ ಈಶ್ವರ ಪಾಟೀಲ ಉಪನ್ಯಾಸ ನೀಡಿದರು.

ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿರೂಪಾಕ್ಷಪ್ಪ ಲಮಾಣಿ, ಅಣ್ಣಪ್ಪ ಹಡಪದ, ಪರಶುರಾಮ ಅರ್ಲಾಪುರ, ಇತರರು ಉಪಸ್ಥಿತರಿದ್ದರು.

ಅಕ್ಕನ ಬಳಗದ ಸದಸ್ಯೆಯರು ವಚನ ಪ್ರಾರ್ಥನೆ ಸಲ್ಲಿಸಿದರು. ನಿಂಗಪ್ಪ ಆರೇರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net