

ಹಾವೇರಿ: ನಗರದ ಶ್ರೀ ಹೊಸಮಠದ ಆವರಣದಲ್ಲಿ ಶುಕ್ರವಾರ ಬಸವೇಶ್ವರರ ಜಯಂತಿ ಆಚರಿಸಲಾಯಿತು. ಆವರಣದಲ್ಲಿನ ಬಸವೇಶ್ವರರ ಪುತ್ಥಳಿಗೆ ಹೊಸಮಠದ ಶ್ರೀ ಶಾಂತಲಿಂಗ ಸ್ವಾಮೀಜಿ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ನಂತರ ಪ್ರತಿ ವರ್ಷದಂತೆ ಶ್ರೀ ಮಠದಿಂದ ರಾಗಿ ಅಂಬಲಿ ವಿತರಣೆ ಮಾಡಲಾಯಿತು.
ಹೊಸಮಠದ ಶ್ರೀ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ಸಾಧು ಸಂತರು, ಶರಣರು ಮತ್ತು ದಾರ್ಶನಿಕರ ಸಂಸ್ಮರಣೆ ಅಥವಾ ಅವರು ಅನುಭಾವಿಸಿ ಬೋಧಿಸಿದ ತತ್ವಗಳನ್ನು ನಮ್ಮ ವರ್ತಮಾನದ ಬದುಕಿನಲ್ಲಿ ಅನುಸರಿಸಿ ನಡೆಯಬೇಕು. ಜಾತಿ, ಮತ, ಲಿಂಗಗಳ ಭೇದವನ್ನು ತಿರಸ್ಕರಿಸಿದ ಸಾಮಾಜಿಕ ಕ್ರಾಂತಿಗೆ ಕಾರಣರಾದ ಬಸವೇಶ್ವರರ ಮಾನವೀಯತೆ, ಕಾಯಕ ನಿಷ್ಠೆ ಧರ್ಮದ ಬುನಾದಿಯಾಗಬೇಕು. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ತತ್ವದಲ್ಲಿ ಬಸವಣ್ಣನ 30 ಅಂಶಗಳಿವೆ. ಇದರಿಂದ ಬಸವಣ್ಣ ಸರ್ವಕಾಲಕ್ಕೂ ಆದರ್ಶಪ್ರಾಯ ಎಂದರು. ಜಗತ್ತಿನ ಎಲ್ಲ ಭಾಷೆ ಅಳಿದರೂ ಕನ್ನಡ ಭಾಷೆ ಅಳಿಯುವುದಿಲ್ಲ. ಏಕೆಂದರೆ ಅದರಲ್ಲಿ ವಚನಗಳು ಇವೆ ಎಂದು ಹೇಳಿದರು.