

ಹಾವೇರಿ: ಜಿಲ್ಲೆಯ ಹಾವೇರಿ, ಹಾನಗಲ್ಲ ತಾಲೂಕು ಸೇರಿದಂತೆ ಇತರ ತಾಲೂಕುಗಳ ಹಲವು ರೈತರಿಗೆ ವಿತರಿಸಿದ್ದ ದಿವ್ಯಶಕ್ತಿ- 42 ಮೆಣಸಿನಕಾಯಿ ಕಂಪನಿ ಮಾರಾಟ ಮಾಡಿದ್ದ ಬೀಜಗಳು ಕಳಪೆ ಎಂಬುದು ವಿಜ್ಞಾನಿಗಳ ವರದಿಯಿಂದ ಸಾಬೀತಾಗಿದೆ. ಈ ವರದಿಯನ್ನು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮುಖ್ಯ ಕಚೇರಿಗೆ ರವಾನಿಸಿ, ಕಂಪನಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ತಾಲೂಕಿನ ಸುಮಾರು 10 ರೈತರು 40 ಎಕರೆ ಜಮೀನಿನಲ್ಲಿ ದಿವ್ಯಶಕ್ತಿ- 42 ಮೆಣಸಿನಕಾಯಿ ಬೀಜಗಳನ್ನು ಬಿತ್ತಿದ್ದರು. ಗಿಡ ಚೆನ್ನಾಗಿ ಬೆಳೆಯಿತಾದರೂ ಕಾಯಿ ಚೆನ್ನಾಗಿ ಬಿಡಲಿಲ್ಲ. ಈ ದೂರಿನ ಹಿನ್ನೆಲೆಯಲ್ಲಿ ಬಾಗಲಕೋಟೆ ತೋಟೆಗಾರಿಕೆ ವಿವಿ ವಿಜ್ಞಾನಿಗಳು ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದರು. ಇತರ ತಳಿಗಳಿಗಿಂತ ದಿವ್ಯಶಕ್ತಿ- 42 ತಳಿಯ ಸಸಿಗಳು ಶೇ.70ರಿಂದ 80ರಷ್ಟು ಸಾಮರ್ಥ್ಯ ಕಳೆದುಕೊಂಡಿವೆ. ಬೀಜದ ಪ್ಯಾಕೆಟ್ ಮೇಲೆ ಯಾವುದೇ ವಿವರಣೆಯನ್ನೂ ನಮೂದಿಸಿರಲಿಲ್ಲ ಎಂದು ವಿಜ್ಞಾನಿಗಳು ವರದಿ ಸಲ್ಲಿಸಿದ್ದಾರೆ. ಈ ವರದಿ ಆಧರಿಸಿ, ಕಂಪನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಇಲಾಖೆಯ ಮುಖ್ಯ ಕಚೇರಿಗೆ ಪತ್ರ ಬರೆಯಲಾಗಿದೆ ಎಂದು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಇಮ್ತಿಯಾಜ್ ಚಂಗಾಪುರಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಒಂದು ಎಕರೆಗೆ 100ರಿಂದ 120 ಕ್ವಿಂಟಲ್ ಮೆಣಸಿನಕಾಯಿ ಬಿಡಬೇಕಿತ್ತು. ಆದರೆ, ಈ ಕಂಪನಿ ಸಸಿಗಳು ಎಕರೆಗೆ ಎರಡು, ಮೂರು ಕ್ವಿಂಟಲ್ ಕೂಡ ಬಂದಿಲ್ಲ. ಒಂದು ಎಕರೆಗೆ ಸುಮಾರು 30ರಿಂದ 40 ಸಾವಿರ ರೂ. ಖರ್ಚು ಮಾಡಿ ಉಳುಮೆ ಮಾಡಲಾಗಿತ್ತು. ಈಗ ಇಳುವರಿ ಸಿಗದೆ ನಷ್ಟ ಅನುಭವಿಸುವಂತಾಗಿದೆ. ಈ ನಷ್ಟ ಭರಿಸುವಂತೆ ಗ್ರಾಹಕರ ನ್ಯಾಯಾಲಯಕ್ಕೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದ್ದೇವೆ ಎನ್ನುತ್ತಾರೆ ಹಾವೇರಿ ತಾಲೂಕು ಕುಳೇನೂರ ಗ್ರಾಮದ ರೈತರಾದ ಶಿವಕುಮಾರ ಹೊನ್ನತ್ತಿ ಹಾಗೂ ಪ್ರಕಾಶ ಹಾವೇರಿ.
ರೈತರ ಈ ಸಮಸ್ಯೆ ಕುರಿತು ‘ಜಿಲ್ಲೆಯಲ್ಲಿ ಮೆಣಸಿನಕಾಯಿ ಕಳಪೆ ಬೀಜದ ಹಾವಳಿ’ ಎಂಬ ಶೀರ್ಷಿಕೆಯಡಿ ಜೂನ್ 23ರಂದು ‘ವಿಜಯವಾಣಿ’ ವಿಶೇಷ ವರದಿ ಪ್ರಕಟಿಸಿತ್ತು.