ಹಾವೇರಿ: ಪ್ರಸಕ್ತ 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಮುಂಗಾರು ಹಂಗಾಮಿನಲ್ಲಿ ಅನುಷ್ಠಾನಗೊಳಿಸಲು ಜಿಲ್ಲೆಯಲ್ಲಿ ತಾಲೂಕುವಾರು ಅನುಷ್ಠಾನಗೊಳಿಸಲು ಸರ್ಕಾರ ಮಂಜೂರಾತಿ ನೀಡಿದೆ.
ಜಿಲ್ಲೆಯ ಬ್ಯಾಡಗಿ, ಹಾನಗಲ್ಲ, ಹಿರೇಕೆರೂರ, ರಟ್ಟಿಹಳ್ಳಿ ಹಾಗೂ ಶಿಗ್ಗಾಂವಿ ತಾಲೂಕುಗಳಿಗೆ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅಡಕೆ, ಶುಂಠಿ, ಮಾವು ಮತ್ತು ಹಸಿಮೆಣಸಿನಕಾಯಿ ಬೆಳೆಗಳನ್ನು ಹಾಗೂ ಹಾವೇರಿ, ಸವಣೂರ ಮತ್ತು ರಾಣೆಬೆನ್ನೂರ ತಾಲೂಕುಗಳಿಗೆ ಹಸಿಮೆಣಸಿಕಾಯಿ ಹಾಗೂ ಮಾವು ಬೆಳೆಗಳಿಗೆ ಅಧಿಸೂಚಿಸಿ ಅನುಷ್ಠಾನಗೊಳಿಸಲು ಮಂಜೂರಾತಿ ನೀಡಲಾಗಿದೆ.
ಬೆಳೆಸಾಲ ಪಡೆದ ಮತ್ತು ಬೆಳೆಸಾಲ ಪಡೆಯದ ರೈತರಿಗೆ ವಿಮಾ ಮೊತ್ತ ಹಾಗೂ ಪಾವತಿಸಬೇಕಾದ ವಿಮಾ ಕಂತಿನ ಮೊತ್ತವು ಒಂದೇ ಆಗಿರುತ್ತದೆ. ರೈತರು ಪ್ರಸಕ್ತ ಸಾಲಿನ ಪಹಣಿ ಪತ್ರಿಕೆ, ಆಧಾರ್ ಕಾರ್ಡ್ ಝರಾಕ್ಸ್ ಪ್ರತಿ ಹಾಗೂ ಬ್ಯಾಂಕ್ ಪಾಸ್‌ಬುಕ್ ಪ್ರತಿಯೊಂದಿಗೆ ಹತ್ತಿರದ ಗ್ರಾಮ-ಒನ್ ಕೇಂದ್ರ ಅಥವಾ ಬ್ಯಾಂಕ್‌ಗಳಲ್ಲಿ ಅಥವಾ ಸಿ.ಎಸ್.ಸಿ. ಸೆಂಟರ್‌ಗಳಲ್ಲಿ ವಿಮಾ ಯೋಜನೆಯಡಿ ನೋಂದಾಯಿಸಿಕೊಳ್ಳಬೇಕು.
ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲು ಹಾವೇರಿ ಜಿಲ್ಲೆಗೆ ಎಸ್.ಡಿ.ಎಫ್.ಸಿ. ಎರಗೋ ಜನರಲ್ ಇನ್ಸೂರೆನ್ಸ್ ಕಂಪನಿ ವಿಮಾ ಸಂಸ್ಥೆಗೆ ಹಂಚಿಕೆಯಾಗಿದೆ. ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ತುಂಬಿದ ರೈತರು ಕಾಲಕಾಲಕ್ಕೆ ಬೆಳೆ ಸಮೀಕ್ಷೆಯನ್ನು ಖುದ್ದಾಗಿ ತಾವೇ ಅಥವಾ ತಮ್ಮ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಅಧೀನ ಪಿ ಆರ್ ಮುಖಾಂತರ ಕಡ್ಡಾಯವಾಗಿ ಮಾಡಿಸಬೇಕು. ಇಲ್ಲವಾದಲ್ಲಿ ಬೆಳೆ ವಿಮೆ ಕ್ಲೈಮ್ ಆಗುವುದಿಲ್ಲ. ಆದ್ದರಿಂದ ಬೆಳೆ ವಿಮೆ ತುಂಬಿದ ಎಲ್ಲ ರೈತರು ಬೆಳೆ ಸಮೀಕ್ಷೆಯನ್ನು ನಿಗದಿತ ಅವಧಿಯೊಳಗೆ ಕೈಗೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ವಿಮಾ ಕಂಪನಿಯ ಪ್ರತಿನಿಧಿ ಅಥವಾ ತೋಟಗಾರಿಕೆ ಇಲಾಖೆಯ ಹೋಬಳಿ ಮಟ್ಟದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಅಥವಾ ತೋಟಗಾರಿಕೆ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಉಪನಿರ್ದೇಶಕ ಸಿದ್ದರಾಮಯ್ಯ ಬರಗಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.