ಜಲ್ಲಿಕಟ್ಟು ರೀತಿ ಹೋರಿ ಹಬ್ಬಕ್ಕೆ ಅನುಮತಿ ಕೊಡಿ; ಸರ್ಕಾರದಿಂದ ಅನುದಾನ ನೀಡಿ; ಆಚರಣೆಗೆ ಇರುವ ಷರತ್ತು ಸಡಿಲಿಸಲು ಹೋರಿ ಪ್ರಿಯರ ಆಗ್ರಹ

7 HVR 7 New
Published on

ಹಾವೇರಿ: ಜಲ್ಲಿಕಟ್ಟು ಹಾಗೂ ಕಂಬಳ ಆಚರಣೆಗೂ ಈ ಹಿಂದೆ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಮೂಲಕ ಹಬ್ಬದ ಆಚರಣೆಗೆ ಅವಕಾಶ ಸಿಕ್ಕಿತು. ಇದೇ ಮಾದರಿಯಲ್ಲಿ ಹೋರಿ ಹಬ್ಬಕ್ಕೂ ಅವಕಾಶ ನೀಡಬೇಕು. ಸರ್ಕಾರವೇ ಹೋರಿ ಹಬ್ಬದ ಆಚರಣೆಗೆ ಅನುದಾನ ನೀಡಬೇಕು ಎಂದು ಹೋರಿ ಅಭಿಮಾನಿಗಳು ಆಗ್ರಹಿಸಿದರು.

ಅಖಿಲ ಕರ್ನಾಟಕ ರೈತರ ಜನಪದ ಕ್ರೀಡೆ ಹೋರಿಹಬ್ಬ ಹೋರಾಟ ಸಮಿತಿ ಪದಾಧಿಕಾರಿಗಳ ನೇತೃತ್ವದಲ್ಲಿ ಹೋರಿ ಮಾಲೀಕರು ಮತ್ತು ಅಭಿಮಾನಿಗಳು ಶುಕ್ರವಾರ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಮಹಾಭಾರತದ ಪಾಂಡವರ ಕಾಲದಿಂದಲೂ ಹೋರಿ ಹಬ್ಬದ ಆಚರಣೆ ಚಾಲ್ತಿಯಲ್ಲಿದೆ. ಹಾವೇರಿ ಜಿಲ್ಲೆಯ ಹೋರಿ ಹಬ್ಬ, ಹೊರ ರಾಜ್ಯಗಳಲ್ಲಿಯೂ ಪ್ರಸಿದ್ಧಿ ಪಡೆದಿದೆ. ದೀಪಾವಳಿ ಹಬ್ಬದಂದು ಹೋರಿ ಬೆದರಿಸುವ ಆಚರಣೆ ಸಂದರ್ಭದಲ್ಲಿ ನಾಲ್ವರು ಮೃತಪಟ್ಟರೆಂಬ ಕಾರಣಕ್ಕೆ ಹಾವೇರಿ ಜಿಲ್ಲೆಯಾದ್ಯಂತ ಹೋರಿ ಹಬ್ಬ ನಿಯಂತ್ರಿಸಲು ಸರ್ಕಾರ ಮುಂದಾಗಿದೆ. ಈ ಕ್ರಮ ಸರಿಯಲ್ಲ. ಕೆಲ ಷರತ್ತುಗಳನ್ನು ಮಾರ್ಪಡಿಸಿ ಹೋರಿ ಹಬ್ಬ ಆಚರಿಸಲು ಅವಕಾಶ ಮಾಡಿಕೊಡಬೇಕು. ಯಾವುದೇ ಅನಾಹುತ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.

ಹೋರಿ ಹಬ್ಬ ಆಚರಣೆಗೂ 15 ದಿನಕ್ಕೂ ಮುನ್ನ ತಹಸೀಲ್ದಾರ್‌ಗೆ ಅರ್ಜಿ ಸಲ್ಲಿಸಬೇಕು. ಪಶು ಸಂಗೋಪನಾ ಇಲಾಖೆ ವೈದ್ಯರಿಂದ ಹೋರಿಯ ಆರೋಗ್ಯದ ಪ್ರಮಾಣ ಪತ್ರ ಪಡೆಯಬೇಕು. ವಿಡಿಯೋ ಚಿತ್ರೀಕರಣ ಮಾಡಿಸಬೇಕು ಎಂಬಿತ್ಯಾದಿ ಷರತ್ತುಗಳನ್ನು ಪಾಲಿಸಲು ಹಲವು ಅಡಚಣೆಗಳಿವೆ. ಈ ಐದು ಪ್ರಮುಖ ಷರತ್ತುಗಳನ್ನು ಸಡಿಲಿಸಬೇಕು. ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಕ್ರಮ ಕೈಗೊಳ್ಳಲು ನಮ್ಮ ಅಭ್ಯಂತರವಿಲ್ಲ. ಆದರೆ, ಕಾಯ್ದೆ ಹೆಸರಿನಲ್ಲಿ ಹಬ್ಬಕ್ಕೆ ಸಮಸ್ಯೆ ಮಾಡುವುದು ಸರಿಯಲ್ಲ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು.

ಹೈಕೋರ್ಟ್ ವಕೀಲ ಸಂದೀಪ ಪಾಟೀಲ, ಹೋರಾಟ ಸಮಿತಿಯ ಸಂಘಟನಾ ಕಾರ್ಯದರ್ಶಿ ಬಸವರಾಜ ಬಂಡಿವಡ್ಡರ, ಮುಖಂಡರಾದ ಪ್ರಕಾಶ ಬುರಡಿಕಟ್ಟಿ, ಮುತ್ತಣ್ಣ ಚಳಗೇರಿ, ದೇವಪ್ಪ ಡೊಳ್ಳಿನ, ಅವಿನಾಶ ಹತ್ತಿಮತ್ತೂರ, ರಾಘು ಯಳ್ಳೂರ, ಸಂತೋಷ ಹರಿಜನ, ಪ್ರತಾಪ ಹುಬ್ಬಳ್ಳಿ, ನಟರಾಜ ಹೊಸೂರು, ಮಾಲತೇಶ ಘಂಟೇರ, ಅಮರ ಬೆಲ್ಲದ, ಗುರುರಾಜ ವಂಟನವರ, ಮಲ್ಲಪ್ಪ ನಾಗರವಳ್ಳಿ, ಶ್ರೀಶೈಲ ಬೆಳವಾಡಿ, ಇತರರು ಇದ್ದರು.

ಹೋರಾಟದ ಎಚ್ಚರಿಕೆ

ಹೋರಿ ಹಬ್ಬಕ್ಕೆ ಅವಕಾಶ ಕೋರಿ ಶಾಂತಿಯುತವಾಗಿ ಮನವಿ ನೀಡುತ್ತಿದ್ದೇವೆ. ನಮ್ಮ ಮನವಿಗೆ ಸ್ಪಂದನೆ ಸಿಗದಿದ್ದರೆ, ಗಂಭೀರ ಸ್ವರೂಪದ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಹೋರಿಪ್ರಿಯರು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net