

ಹಾವೇರಿ: ಹೊಸದುರ್ಗ ತಾಲೂಕಿನ ಮಾಳಪ್ಪನಗೇಟಿನ ಮುರಾರ್ಜಿ ವಸತಿ ಶಾಲೆಯಿಂದ ತಪ್ಪಿಸಿಕೊಂಡು ಹಾವೇರಿ ನಗರಕ್ಕೆ ಬಂದು ಕಂಗಾಲಾಗಿದ್ದ ಬಾಲಕನನ್ನು ಗೃಹರಕ್ಷಕ ದಳ ಸಿಬ್ಬಂದಿ ರಕ್ಷಿಸಿ, ಪಾಲಕರಿಗೆ ಒಪ್ಪಿಸಿದ್ದಾರೆ.
ಕಾರ್ತಿಕ ಎಂ. ರಕ್ಷಿಸಲ್ಪಟ್ಟ ಬಾಲಕ. ವಸತಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕಾರ್ತಿಕ ವಸತಿ ಶಾಲೆಯಿಂದ ಹೇಗೋ ತಪ್ಪಿಸಿಕೊಂಡು ಹಾವೇರಿ ಬಸ್ ನಿಲ್ದಾಣಕ್ಕೆ ಬಂದಿದ್ದ. ನಿಲ್ದಾಣದಲ್ಲಿ ಗಾಬರಿಗೊಂಡು ನಿಂತಿದ್ದನ್ನು ಗಮನಿಸಿದ ಗೃಹರಕ್ಷಕ ದಳ ಸಿಬ್ಬಂದಿ ಇಮ್ತಿಯಾಜ್ ಕಮದೋಡ ಬಾಲಕನನ್ನು ವಿಚಾರಿಸಿದಾಗ ವಿಷಯ ಗೊತ್ತಾಗಿದೆ.
ತನಿಗೆ ಸಮಾಧಾನಪಡಿಸಿ ಗೃಹರಕ್ಷಕ ದಳ ಕಚೇರಿಗೆ ಕರೆತಂದು ರಕ್ಷಿಸಲಾಯಿತು. ಬಳಿಕ ಆತನ ಪಾಲಕರು ಹಾಗೂ ವಸತಿ ಶಾಲೆ ಸಂಪರ್ಕಿಸಿ ಹಾವೇರಿಗೆ ಕರೆಸಲಾಯಿತು. ವಸತಿ ಶಾಲೆಯ ವಾರ್ಡನ್ ಸಮ್ಮುಖದಲ್ಲಿ ಗೃಹರಕ್ಷಕ ದಳದ ಸಮಾದೇಷ್ಟ ಪ್ರಮೋದ ನಲವಾಗಲ ಗುರುವಾರ ಬಾಲಕನನ್ನು ಪಾಲಕರಿಗೆ ಹಸ್ತಾಂತರಿಸಿದರು. ಇಮ್ತಿಯಾಜ್ ಕಾರ್ಯವನ್ನು ಕಾರ್ತಿಕನ ಪಾಲಕರು ಹಾಗೂ ವಸತಿ ಶಾಲೆ ಸಿಬ್ಬಂದಿ ಶ್ಲಾಘಿಸಿದರು.
ಗೃಹರಕ್ಷಕ ದಳ ಸಿಬ್ಬಂದಿ ಎಂ.ಎಂ.ಕಾತರಕಿ, ಇಮ್ತಿಯಾಜ್ ಕಮದೋಡ, ಸಿ.ಎಸ್.ಬೆಲ್ಲದ, ಡಿ.ಎಸ್.ಮ್ಯಾಗಲಮನಿ, ಎನ್.ವೈ.ಕಾಳಿ, ಇತರರಿದ್ದರು.