ಕುಂಭಮೇಳ ಮರುಸೃಷ್ಟಿಗೆ 60ಕ್ಕೂ ಹೆಚ್ಚು ಕಲಾವಿದರು; 14ರಂದು ಸಂಜೆ 6ರಿಂದ ಭವ್ಯ ಮೆರವಣಿಗೆ; 15ರಂದು ಹೋಳಿ ಆಚರಣೆ

11 HVR 4
Published on

ಹಾವೇರಿ: ಪ್ರತಿ ವರ್ಷದಂತೆ ಈ ವರ್ಷವೂ ಹಾವೇರಿ ನಗರದಲ್ಲಿ ವಿಶಿಷ್ಟವಾಗಿ ಹೋಳಿ ಆಚರಣೆ ಮಾಡಲಾಗುತ್ತಿದ್ದು, ಈ ಬಾರಿ ನಗರದಲ್ಲಿ ಮಾ.14ರಂದು ಸಂಜೆ 6 ಗಂಟೆಗೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾ ಕುಂಭಮೇಳದ ದೃಶ್ಯಗಳನ್ನು ಮರುಸೃಷ್ಟಿಸಿ ಮೆರವಣಿಗೆ ಮಾಡಲಾಗುವುದು. 60ಕ್ಕೂ ಹೆಚ್ಚು ಕಲಾವಿದರು ಭಾಗವಹಿಸುವರು ಎಂದು ಹಾವೇರಿ ಹೋಳಿ ಉತ್ಸವ ಸಮಿತಿ ಅಧ್ಯಕ್ಷ ವಿಜಯಕುಮಾರ ಚಿನ್ನಿಕಟ್ಟಿ ತಿಳಿಸಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಉದ್ಯಮಿಗಳು, ನಾಗರಿಕರ ಸಹಕಾರದಿಂದ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಧಾರ್ಮಿಕ ಭಾವನೆಗಳಿಗೆ ಚ್ಯುತಿ ಬಾರದಂತೆ ನಮ್ಮ ಸಂಸ್ಕೃತಿ ಪಸರಿಸುವ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು.

ಮಹಾಕುಂಭ ಮೇಳದ ಮರು ಸೃಷ್ಟಿ ಸಂಭ್ರಮದಲ್ಲಿ ಹಾವೇರಿ, ಉಡುಪಿ, ಮಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಕಲಾವಿದರು ಭಾಗವಹಿಸುವರು. 20ಕ್ಕೂ ಹೆಚ್ಚು ಕುಂಭಮೇಳದ ಮಾದರಿಗಳು ಭಾಗವಹಿಸಲಿವೆ. ಮುಳ್ಳಿನ ಮೇಲೆ ಕುಳಿತ ನಾಗಾ ಸಾಧು, ಟ್ರಾಕ್ಟರ್ ಬಾಬಾ, ರುದ್ರಾಕ್ಷಿ ಬಾಬಾ, ರೋಲ್ಸ್ ರಾಯ್ ಬಾಬಾ, ಐಐಟಿ ಬಾಬಾ, ಶಿವನ್ಮುಂದೆ ತಪಸ್ಸು ಮಾಡುವ, ಹಿಮದಲ್ಲಿ ಕುಳಿತ ಸಾಧುಗಳು, ಮೊನಾಲಿಸಾ, ಬೆಂಕಿ ಉಗುಳುವ ಬಾಬಾ, ಸೇರಿದಂತೆ ವಿವಿಧ ಮಾದರಿಗಳನ್ನು ಕಲಾವಿದರ ಮೂಲಕ ಮರು ಸೃಷ್ಟಿಸಲಾಗುವುದು ಎಂದರು.

ಮಾ.14ರಂದು ಸಂಜೆ 6 ಗಂಟೆಗೆ ನಗರದ ಅಕ್ಕಿಪೇಟೆಯ ಅರಳಿಕಟ್ಟಿಯಿಂದ ರ‌್ಯಾಲಿ ಆರಂಭವಾಗುತ್ತದೆ. ವಿವಿಧ ಮಠಾಧೀಶರು, ಗಣ್ಯರು ಭಾಗವಹಿಸಲಿದ್ದಾರೆ. ಹುಕ್ಕೇರಿ ಮಠ, ಶಿವಲಿಂಗ ನಗರ, ಯಾಲಕ್ಕಿ ಓಣಿ, ಪುರದ ಓಣಿ, ಚೌಡೇಶ್ವರಿ ಸರ್ಕಲ್, ಮುನಾಫ ಗಲ್ಲಿ, ಎಂಜಿ ರಸ್ತೆ, ಸುಭಾಷ ಸರ್ಕಲ್, ರೈತರ ಓಣಿ, ಗಾಂಧಿ ಸರ್ಕಲ್, ಕಲ್ಲುಮಂಟಪ ಓಣಿ ಮಾರ್ಗವಾಗಿ ಸಂಚರಿಸಿ ಅರಳಿಕಟ್ಟಿಯಲ್ಲಿ ಮುಕ್ತಾಯವಾಗಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಶಿವಯೋಗಿ ಹುಲಿಕಂತಿಮಠ, ಕರಬಸಪ್ಪ ಹಲಗಣ್ಣವರ, ಉಡಚಪ್ಪ ಮಾಳಗಿ, ರಮೇಶ ಆನವಟ್ಟಿ, ನಾಗಯ್ಯ ಹಿರೇಮಠ, ವಿರುಪಾಕ್ಷಪ್ಪ ಹತ್ತಿಮತ್ತೂರ, ಶಂಭು ಹತ್ತಿ, ವಿಜಯಕುಮಾರ ಕೂಡ್ಲಪ್ಪನವರ, ಗೂರಪ್ಪ ಸೀಮಿಕೆರಿ, ಪ್ರಭು ಹಿಟ್ನಳ್ಳಿ, ಪ್ರಕಾಶ ಉಜ್ಜಿನಿಕೊಪ್ಪ, ಶಿವರಾಜ ಮತ್ತಿಹಳ್ಳಿ, ಅಶೋಕ ಮರೆಣ್ಣವರ, ಹನುಮಂತಪ್ಪ ದೊಡ್ಡತಳವಾರ, ವೆಂಕಟೇಶ ದೈವಜ್ಞ, ಬಸವರಾಜ ಹಲಗಣ್ಣನವರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net