ಹಿರೇಕೆರೂರಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ 10ರಿಂದ; ಎಂಟು ಗೋಷ್ಠಿ, ವಿಶೇಷ ಉಪನ್ಯಾಸ ಆಯೋಜನೆ; ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಹೇಳಿಕೆ

1 HVR 3 B
Published on

ಹಾವೇರಿ: ಸರ್ವಜ್ಞ- ಶಾಂತಕವಿಗಳ ನಾಡು ಹಿರೇಕೆರೂರ ಪಟ್ಟಣದ ಪೊಲೀಸ್ ಮೈದಾನದಲ್ಲಿ ಜ.10 ಹಾಗೂ 11ರಂದು 14ನೇ ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಸಮ್ಮೇಳನದಲ್ಲಿ ಎಂಟು ಗೋಷ್ಠಿಗಳು, ಉಪನ್ಯಾಸ, ಸಾಂಸ್ಕೃತಿಕ ಸಮಾರಂಭ, ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ನಡೆಯಲಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ್ಯ ಹಿರೇಮಠ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.10ರಂದು ಬೆಳಗ್ಗೆ 7.30ಕ್ಕೆ ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ರಾಷ್ಟ್ರ ಧ್ವಜ ನೆರವೇರಿಸಲಿದ್ದು, ಕಸಾಪ ಜಿಲ್ಲಾಧ್ಯಕ್ಷರು ಪರಿಷತ್ ಧ್ವಜ, ತಾಲೂಕಾಧ್ಯಕ್ಷ ಎನ್.ಸುರೇಶಕುಮಾರ ನಾಡಧ್ವಜ ನೆರವೇರಿಸಲಿದ್ದಾರೆ. ಬೆ.8.30ಕ್ಕೆ ಬಿ.ಜಿ ಶಂಕರರಾವ್ ವೃತ್ತದಿಂದ ಸಭಾಮಂಟಪವರೆಗೆ ಮೆರವಣಿಗೆ ನಡೆಸಲಾಗುತ್ತದೆ. ನಾಡದೇವಿಗೆ ಪೂಜೆ ಸಲ್ಲಿಸಿ, ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡಲಾಗುವುದು ಎಂದರು.

ಸರ್ವಜ್ಞ-ಶಾಂತಕವಿ ಪ್ರಧಾನ ವೇದಿಕೆಯಲ್ಲಿ ಬೆಳಗ್ಗೆ 10.30ಕ್ಕೆ ಕೇಂದ್ರ ಕಸಾಪ ಅಧ್ಯಕ್ಷ, ನಾಡೋಜ ಮಹೇಶ ಜೋಶಿ ಉದ್ಘಾಟನೆ ನೆರವೇರಿಸಲಿದ್ದು, ಶಾಸಕ ಯು.ಬಿ.ಬಣಕಾರ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಕೃಷಿ ಸಚಿವ ಬಿ.ಸಿ.ಪಾಟೀಲ ಸಮ್ಮೇಳನ ಸಭಾಂಗಣ ಉದ್ಘಾಟಿಸಲಿದ್ದಾರೆ. ಸಮ್ಮೇಳನಾಧ್ಯಕ್ಷೆ ಮಹಿಳಾ ಸಾಹಿತಿ ಸಂಕಮ್ಮ ಸಂಕಣ್ಣನವರ ಸಮ್ಮೇಳನಾಧ್ಯಕ್ಷರ ಸಂದೇಶ ನೀಡಲಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಭಾಪತಿ ಬಸವರಾಜ ಹೊರಟ್ಟಿ, ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸ್ಥಳೀಯ ಶಾಸಕರು ಭಾಗವಹಿಸುವರು ಎಂದರು.

ಮಧ್ಯಾಹ್ನ 1.30ಕ್ಕೆ ನಾಡು, ನುಡಿ, ನಾಡವರ್ ಶೀರ್ಷಿಕೆಯಡಿ ಮೊದಲನೇ ಗೋಷ್ಠಿ ನಡೆಯಲಿದೆ. ಮಧ್ಯಾಹ್ನ 3.30ಕ್ಕೆ ಅಖಂಡ ಕರ್ನಾಟಕ ರೈತ ಸಂಘದ ಅಧ್ಯಕ್ಷ ಸಿದ್ದನಗೌಡ ಪಾಟೀಲ ಅಧ್ಯಕ್ಷತೆಯಲ್ಲಿ ‘ಹೊನ್ನ ಬಿತ್ತೇವು ಜಗಕೆಲ್ಲ’ ಶೀರ್ಷಿಕೆಯಡಿ ಗೋಷ್ಠಿ 2 ನಡೆಯಲಿದೆ. ಸಂಜೆ 5ಕ್ಕೆ ವೈವಿದ್ಯ ಶೀರ್ಷಿಕೆಯಡಿ 3ನೇ ಗೋಷ್ಠಿ ನಡೆಯಲಿದೆ. ಸಂಜೆ 7ರ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಜ.11ರಂದು ಬೆಳಗ್ಗೆ 9.30ಕ್ಕೆ ಕವಿಗಳ ಕಲರವ ನಾಲ್ಕನೇ ಗೋಷ್ಠಿ ನಡೆಯಲಿದೆ. ಬೆ.11.30ಕ್ಕೆ ಮಾನಿನಿ ಮನದಾಳ ಗೊಷ್ಠಿ, ಮಧ್ಯಾಹ್ನ 1.30ಕ್ಕೆ ‘ನಾಡು ನುಡಿಗೆ ಜಿಲ್ಲೆಯ ಕೊಡುಗೆ’, ಮಧ್ಯಾಹ್ನ 3.30ಕ್ಕೆ ದಮನಿತರ ಧ್ವನಿ ಗೋಷ್ಠಿ ನಡೆಯಲಿದೆ. ಸಂಜೆ 4.30ಕ್ಕೆ ಎಂಟನೇ ಗೋಷ್ಠಿಯಲ್ಲಿ ಹಿರೇಕೆರೂರ, ರಟ್ಟಿಹಳ್ಳಿ ತಾಲೂಕಿನ ವೈಶಿಷ್ಟ್ಯಗಳ ಕುರಿತು ವಿಶೇಷ ಉಪನ್ಯಾಸ ನಡೆಯಲಿದೆ. ಸಂಜೆ.5.30ಕ್ಕೆ ಬಹಿರಂಗ ಅವೇಶನ ನಡೆಯಲಿದೆ. ಸಂಜೆ 6.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಸಾಪ ಹಿರೇಕೆರೂರ ತಾಲೂಕು ಅಧ್ಯಕ್ಷ ಎನ್.ಸುರೇಶಕುಮಾರ, ಕಾರ್ಯದರ್ಶಿ ಪಿ.ಎಸ್ ಸಾಲಿ, ಹಾವೇರಿ ತಾಲೂಕಾಧ್ಯಕ್ಷ ವೈ.ಬಿ ಆಲದಕಟ್ಟಿ, ಎಸ್.ಎನ್ ದೊಡ್ಡಗೌಡ್ರ, ಎನ್.ಬಿ ಕಾಳೆ, ಈರಣ್ಣ ಬೆಳವಡಿ, ಗೂಳಪ್ಪ ಅರಳಿಕಟ್ಟಿ, ಪೃಥ್ವಿರಾಜ ಬೇಟಗೇರಿ, ಶಂಕರ ಸುತಾರ, ಜೆ.ಬಿ.ಮರಿಗೌಡ್ರ, ಬಿ.ಡಿ.ಜಿಗರಿ, ಡಿ.ಬಿ.ನಿಂಗನಗೌಡ್ರ ಇದ್ದರು.

ಮೂರು ಲಕ್ಷ ಸಾಲಲ್ಲ

ಜಿಲ್ಲಾ ಸಮ್ಮೇಳನಕ್ಕೆ ಸಾಹಿತ್ಯ ಪರಿಷತ್‌ನಿಂದ 3 ಲಕ್ಷ ರೂ. ಅನುದಾನ ನೀಡಲಾಗುತ್ತಿದ್ದು, ಇದು ಸಾಕಾಗಲ್ಲ. 20 ಪುಸ್ತಕ ಹಾಗೂ ವಾಣಿಜ್ಯ ಮಳಿಗೆ ತೆರೆಯಲಾಗುವುದು. ಶಾಮಿಯಾನಕ್ಕೇ 3 ಲಕ್ಷಕ್ಕೂ ಅಧಿಕ ಹಣ ಬೇಕಾಗುತ್ತದೆ. ಅಂದಾಜು 12 ಲಕ್ಷ ಬೇಕಾಗುತ್ತದೆ. ಉಳಿದ ಹಣಕಾಸನ್ನು ದಾನಿಗಳ ನೆರವಿನಿಂದ ಭರಿಸಲಾಗುವುದು. ಸಿಇಎಸ್ ಶಿಕ್ಷಣ ಸಂಸ್ಥೆಯವರು ಎರಡೂ ದಿನ ಸಮ್ಮೇಳನದ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ ಎಂದು ಲಿಂಗಯ್ಯ ಹೇಳಿದರು.

ಜಿಲ್ಲಾ ಕಚೇರಿ ನಿರ್ಮಾಣ

ಹಾವೇರಿಯ ಎಸ್‌ಪಿ ಕ್ವಾರ್ಟರ್ಸ್ ಪಕ್ಕದಲ್ಲಿ ಶಾಸಕರು, ಸಂಸದರ 45 ಲಕ್ಷ ರೂ. ಅನುದಾನದಲ್ಲಿ ಜಿಲ್ಲಾ ಕಸಾಪ ಕಚೇರಿ ನಿರ್ಮಿಸಲಾಗುತ್ತಿದೆ. ಮಾರ್ಚ್‌ನಲ್ಲಿ ಉದ್ಘಾಟಿಸಲಾಗುವುದು ಎಂದರು ಹಿರೇಮಠ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net