

ಹಾವೇರಿ: ಹಿರೇಕೆರೂರ ತಾಲೂಕಿನ ಚಿಕ್ಕೇರೂರು ವಿರಕ್ತ ಮಠಕ್ಕೆ ಹಾವೇರಿ ತಾಲೂಕಿನ ಅಗಡಿ ಗ್ರಾಮದ ಅಕ್ಕಿ ಮಠದ ಡಾ.ಗುರುಲಿಂಗ ಸ್ವಾಮೀಜಿ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ವಿರಕ್ತಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೀಠಾಧಿಪತಿ ಚಂದ್ರಶೇಖರ ಸ್ವಾಮೀಜಿಯವರು ಗುರುಲಿಂಗ ಸ್ವಾಮೀಜಿ ಅವರಿಗೆ ಉತ್ತರಾಧಿಕಾರದ ಪತ್ರವನ್ನು ನೀಡಿದರು. ನಂತರ ಮಾತನಾಡಿದ ಶ್ರೀಗಳು, ಕಾರ್ಯಕ್ಷಮತೆ, ಸಂಘಟನಾ ಶಕ್ತಿ, ಸಮಾಜಮುಖಿ ಸೇವಾ ಕಾರ್ಯಗಳು ಹಾಗೂ ಅಮೋಘ ಪ್ರವಚನ ಪಾಂಡಿತ್ಯ ಹೊಂದಿರುವ ಗುರುಲಿಂಗ ಸ್ವಾಮೀಜಿ ಈ ಮಠಕ್ಕೆ ಸೂಕ್ತ ಉತ್ತರಾಧಿಕಾರಿಯಾಗಿದ್ದಾರೆ. ಮಠದ ಸೇವಾ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುವ ಸಾಮರ್ಥ್ಯ ಅವರಲ್ಲಿದೆ ಎಂಬ ವಿಶ್ವಾಸ ನಮ್ಮಲ್ಲಿ ಮೂಡಿದೆ ಎಂದರು.
ಹಿರೇಮಾಗಡಿಯ ಶಿವಮೂರ್ತಿ ಮುರುಗರಾಜೇಂದ್ರ ಸ್ವಾಮೀಜಿ, ತಿಪ್ಪಾಯಿಕೊಪ್ಪದ ಮಹಾಂತೇಶ ಸ್ವಾಮೀಜಿ ಹಾಗೂ ವಿವಿಧ ಸಮಾಜದ ಗಣ್ಯರು, ಭಕ್ತರು, ಗ್ರಾಮಸ್ಥರು ನೂತನ ಉತ್ತರಾಧಿಕಾರಿಯವರನ್ನು ಸನ್ಮಾನಿಸಿದರು.
ಸನ್ಮಾನ: ಹಿರೇಕೆರೂರ ತಾಲೂಕಿನ ಚಿಕ್ಕೇರೂರು ವಿರಕ್ತ ಮಠಕ್ಕೆ ಉತ್ತರಾಧಿಕಾರಿಯಾಗಿ ಆಯ್ಕೆಯಾದ ಹಾವೇರಿ ತಾಲೂಕಿನ ಅಗಡಿ ಗ್ರಾಮದ ಅಕ್ಕಿ ಮಠದ ಡಾ.ಗುರುಲಿಂಗ ಸ್ವಾಮೀಜಿ ಅವರನ್ನು ಶ್ರೀಮಠದ ಪೀಠಾಧಿಪತಿ ಚಂದ್ರಶೇಖರ ಸ್ವಾಮೀಜಿ ಸನ್ಮಾನಿಸಿದರು. ಶ್ರೀ ಶಿವಮೂರ್ತಿ ಮುರುಗರಾಜೇಂದ್ರ ಸ್ವಾಮೀಜಿ, ಶ್ರೀ ಮಹಾಂತೇಶ ಸ್ವಾಮೀಜಿ, ಇತರರಿದ್ದರು.