

ಕೇಶವಮೂರ್ತಿ ವಿ.ಬಿ. ಹಾವೇರಿ
ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಜಿಲ್ಲೆ 2024ರಲ್ಲಿ ಅನೇಕ ವಿದ್ಯಮಾನಗಳಿಗೆ ಸಾಕ್ಷಿಯಾಗಿದೆ. ಆದರೂ ನಿರೀಕ್ಷಿತ ಪ್ರಮಾಣದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ದೊರೆತಿಲ್ಲ. ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಅಪರಾಧಿಕ ವಲಯಗಳಲ್ಲಿ ಹಲವು ಬಗೆಯ ಬದಲಾವಣೆ, ಪಲ್ಲಟಗಳು, ಏರುಪೇರುಗಳು ಸಂಭವಿಸಿವೆ. ಈ ವರ್ಷವಂತೂ ರಾಜಕೀಯ ಏಳುಬೀಳು ಆಟವಂತೂ ಜಿಲ್ಲೆಯ ಮಟ್ಟಿಗೆ ಜೋರಾಗಿ ನಡೆಯಿತು. 2024ರಲ್ಲಿ ಗತಿಸಿದ ರಾಜಕೀಯ ವಲಯದ ಕೆಲ ಪ್ರಮುಖ ಘಟನಾವಳಿಗಳ ಕುರಿತು ‘ವರ್ಷದ ಹಿನ್ನೋಟ- 2024’.
ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿದ್ದ ಹಾವೇರಿ ಜಿಲ್ಲೆಯಲ್ಲಿ ಬಿಜೆಪಿ ಕಳೆದ ಎರಡು ವರ್ಷಗಳಿಂದ ಅದೇಕೋ ಛಿದ್ರ ಛಿದ್ರವಾಗುತ್ತಲಿದೆ. 2024ರಲ್ಲಿ ಇದ್ದ ಒಂದು ಎಂಎಲ್‌ಎ ಕ್ಷೇತ್ರವೂ (ಶಿಗ್ಗಾಂವಿ- ಸವಣೂರ) ಬಿಜೆಪಿ ಕೈತಪ್ಪಿ ಕಾಂಗ್ರೆಸ್ ವಶವಾಗಿದ್ದು, ಉಳದಿರುವುದು ಸಂಸದರ ಸ್ಥಾನವೊಂದೇ. ಗ್ಯಾರಂಟಿ ಅಸ್ತ್ರ ಸೇರಿದಂತೆ ಬಿಜೆಪಿಯ ವೈಫಲ್ಯಗಳನ್ನು ಸರಿಯಾಗಿ ಬಳಸಿಕೊಂಡ ಹಸ್ತಪಡೆ ಜಿಲ್ಲೆಯ ಆರೂ ವಿಧಾಸನಭೆ ಕ್ಷೇತ್ರಗಳನ್ನು ಕೈವಶಪಡಿಸಿಕೊಳ್ಳುವಲ್ಲಿ ಯಶ ಕಂಡಿದೆ.
2023ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಜಿಲ್ಲೆಯಲ್ಲಿ ಒಬ್ಬರೇ ಗೆಲುವು ಸಾಧಿಸಿದ್ದರು. ಉಳಿದ ಐದೂ ಕ್ಷೇತ್ರಗಳಲ್ಲಿ ಬಿಜೆಪಿ ಸೋಲು ಕಂಡಿತ್ತು. ಇದರಿಂದ ಬಿಜೆಪಿ ಕುಗ್ಗಿ ಹೋಗಿತ್ತು. ಯಾಟ್ರಿಕ್ ಸಂಸದ ಶಿವಕುಮಾರ ಉದಾಸಿ ವೈಯಕ್ತಿಕ ಕಾರಣಗಳಿಂದಾಗಿ 2024ರಲ್ಲಿ ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಘೋಷಿಸಿದ್ದರು. ಹೀಗಾಗಿ, ವರಿಷ್ಠರ ಸೂಚನೆ ಮೇರೆಗೆ ಬಸವರಾಜ ಬೊಮ್ಮಾಯಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, 2024ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರು.
ಆದರೆ, ಶಿಗ್ಗಾಂವಿ ಉಪಚುನಾವಣೆಯಲ್ಲಿ ಪುತ್ರ ಭರತ ಬೊಮ್ಮಾಯಿ ಗೆಲ್ಲಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಬಿಜೆಪಿಗೆ ಇದ್ದ ಒಂದು ಶಾಸಕ ಸ್ಥಾನವೂ ಕೈತಪ್ಪಿ ಹೋಯಿತು. ಇದು ಬಿಜೆಪಿಯ ಜಂಗಾಬಲವನ್ನೇ ಅಡಗಿಸುವಂತೆ ಮಾಡಿತು. ಆದರೆ, ಶಿಗ್ಗಾಂವಿ ಉಪಚುನಾವಣೆಯಲ್ಲಿ ಕಾಂಗ್ರೆಸ್ 30 ವರ್ಷಗಳ ಸೇಡು ತೀರಿಸಿಕೊಂಡಿತು. ಇದು ಕಾಂಗ್ರೆಸ್ ಹಿಗ್ಗುವಂತೆ ಮಾಡಿದ್ದು, ಜಿಲ್ಲೆಯನ್ನು ಮತ್ತೆ ಕಾಂಗ್ರೆಸ್ ಭದ್ರಕೋಟೆಯನ್ನಾಗಿಸಲು ಕೈಪಡೆ ಇನ್ನಿಲ್ಲದ ಕಸರತ್ತು ಮಾಡುತ್ತಿದೆ.
ಬಿಜೆಪಿ ಪಾಳಯದಲ್ಲಿ ಕೆಲ ಪ್ರಮುಖ ನಾಯಕರ ಗುಂಪುಗಾರಿಕೆ, ಒಳಜಗಳ, ಸಂಘಟನೆ ಕೊರತೆಯಿಂದ ಚುನಾವಣೆಗಳಲ್ಲಿ ಹಿನ್ನಡೆ ಉಂಟಾಗಿದೆ. ಕಾಂಗ್ರೆಸ್ ನಾಯಕರು ಒಗ್ಗಟ್ಟಿನ ಪ್ರದರ್ಶನ ತೋರಿದ್ದರಿಂದ ಮುನ್ನಡೆ ಸಾಧಿಸಿದ್ದಾರೆ ಎಂಬುದು ರಾಜಕೀಯ ವಿಶ್ಲೇಷಕರ ವಾದವಾಗಿದೆ.
ಸಿಗಲಿಲ್ಲ ಸಚಿವಗಿರಿ, ಖಾದ್ರಿಗೆ ಲಕ್
ಐವರು ಕಾಂಗ್ರೆಸ್ ಶಾಸಕರನ್ನು ಕೊಟ್ಟರೂ ಜಿಲ್ಲೆಗೆ ಸಚಿವ ಸ್ಥಾನ 2024ರಲ್ಲಾದರೂ ಸಿಗುವ ನಿರೀಕ್ಷೆ ಹುಸಿಯಾಯಿತು. ಆದರೆ, ಶಿಗ್ಗಾಂವಿ ಉಪಚುನಾವಣೆಯಲ್ಲಿ ಟಿಕೆಟ್ ತ್ಯಾಗ ಮಾಡಿದ ಅಜೀಮ್‌ಪೀರ್ ಖಾದ್ರಿ ಅವರನ್ನು ಕಾಂಗ್ರೆಸ್ ಸರ್ಕಾರ ಹೆಸ್ಕಾಂ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತು. ಈ ಮೂಲಕ ಮೊದಲ ಹೆಸ್ಕಾಂ ಅಧ್ಯಕ್ಷರಾಗಿ ಖಾದ್ರಿ ಅಲಂಕರಿಸಿದರು.
ಕೆಡಿಪಿ ಸಭೆಯಲ್ಲಿ ಸಚಿವರ ಅಬ್ಬರ
ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರು ಜಿಲ್ಲಾಮಟ್ಟದ ತ್ರೈಮಾಸಿಕ ಕೆಡಿಪಿ ಸಭೆ ನಿಜಕ್ಕೂ ಅದ್ಭುತವೇ ಸರಿ. ಯಾವ ಅಧಿಕಾರಿಯೂ ಇವರ ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಸತ್ಯ. ಸಭೆಯಲ್ಲಿ ಮುತುವರ್ಜಿ ವಹಿಸಿ ಅಧಿಕಾರಿಗಳಿಗೆ ಹಲವು ಸೂಚನೆ ಕೊಟ್ಟಿದ್ದಾರೆ. ಆದರೆ, ಅವುಗಳನ್ನು ಪಾಲಿಸುವಲ್ಲಿ ಬಹುತೇಕ ಅಧಿಕಾರಿಗಳು ಎಡವಿದ್ದಾರೆ. ನೀರಾವರಿ, ಬಹುಗ್ರಾಮ ಕುಡಿಯುವ ನೀರು ಯೋಜನೆ, ಸೇರಿ ಇತರ ಹಲವು ಕಾಮಗಾರಿಗಳು ಅರೆಬರೆಯಾಗಿವೆ. ಹಾಗಾಗಿ, ಸಚಿವರು ನಿರಂತರವಾಗಿ ಅಧಿಕಾರಿಗಳ ಬೆನ್ನು ಬಿಡದೇ ಕೆಲಸ ತೆಗೆಸಬೇಕು. ಆಗಾಗ, ಜಿಲ್ಲೆಗೆ ಭೇಟಿ ಕೊಡಬೇಕು. ತಪ್ಪಿತಸ್ಥರಿಗೆ ನಿರ್ದಾಕ್ಕಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ.
ಮಾಜಿ ಸಚಿವ, ಶಾಸಕ ನಿಧನ
2024ರಲ್ಲಿ ಮಾಜಿ ಸಚಿವ ಹಾನಗಲ್ಲನ ಮನೋಹರ ತಹಸೀಲ್ದಾರ್ ವಯೋಸಹಜ ಕಾಯಿಲೆಯಿಂದ ಮೃತಪಟ್ಟರು. ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಜಿಪಂ ಮಾಜಿ ಜಿಲ್ಲಾಧ್ಯಕ್ಷ 90 ವರ್ಷದ ಡಾ.ಬಸನಗೌಡ ಗುರುನಗೌಡ ಪಾಟೀಲ 2024ರಲ್ಲಿ ನಿಧನ ಹೊಂದಿದರು.
ಎಸ್‌ಪಿ ಕಚೇರಿ ಉದ್ಘಾಟನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಫೆ.18ರಂದು ಹಾವೇರಿ ನಗರಕ್ಕೆ ಆಗಮಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ವಿಜ್ಞಾನ ಭವನ, ಗಾಂಧಿ ಭವನ ಉದ್ಘಾಟಿಸಿದರು. ಜಿಲ್ಲೆಯಲ್ಲಿ ಕೈಗೊಳ್ಳಲಾದ ಅಂದಾಜು 411.60 ಕೋಟಿ ರೂ. ವೆಚ್ಚದ 14 ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ 11 ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದ್ದರು.