ಆರಂಭದಲ್ಲಿ ಬರ, ನಂತರ ಪ್ರವಾಹದ ಬರೆ; ಅತಿಯಾದ ಮಳೆಗೆ ಕೊಚ್ಚಿ ಹೋದ ಅನ್ನದಾತನ ಬದುಕು; ಈ ವರ್ಷವೂ ಸಂಕಷ್ಟದಲ್ಲೇ ಬೆಂದ ರೈತರು

28 HVR 2 A
Published on

ಕೇಶವಮೂರ್ತಿ ವಿ.ಬಿ. ಹಾವೇರಿ

ಕೃಷಿ ಪ್ರಧಾನವಾದ ಜಿಲ್ಲೆಯಲ್ಲಿ 2023ರಲ್ಲಿ ಬರದ ಛಾಯೆ ಆವರಿಸಿತ್ತು. 2024ರ ಏಪ್ರಿಲ್, ಮೇ ವರೆಗೂ ಬರದಿಂದ ರೈತರು ಸೇರಿ ಜನ ತತ್ತರಿಸಿದ್ದರು. ನಂತರ ಮುಂಗಾರು, ಹಿಂಗಾರು ಹಂಗಾಮಿನಲ್ಲಿ ಸುರಿದ ಅತಿಯಾದ ಮಳೆ, ಪ್ರವಾಹದಿಂದ ಬೆಂಡಾಯಿತು. ಸತತವಾಗಿ ದಾಖಲೆಯೆ ಮಳೆ ಸುರಿದ ಪರಿಣಾಮ ಅನ್ನದಾತನ ಬೆಳೆ ಕೊಚ್ಚಿ ಹೋಗಿತ್ತು. ಕಳೆದ ವರ್ಷ ಬರಕ್ಕೆ ತುತ್ತಾಗಿದ್ದ ರೈತರು ಈ ವರ್ಷ ಪ್ರವಾಹಕ್ಕೆ ಸಿಲುಕಿ ಸಂಕಷ್ಟ ಎದುರಿಸಿದರು.

2024ರ ಮುಂಗಾರು ಬೆಳೆಗಳು ಹಾಗೂ ಹಿಂಗಾರು ಬೆಳೆಗಳು ಎರಡಕ್ಕೂ ಮಳೆರಾಯನ ಅವಕೃಪೆ ಉಂಟಾಗಿತ್ತು. ಹೀಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ರೈತರಿಗೆ ಸಿಗಬೇಕಾದ ಬರ ಪರಿಹಾರ, ಮುಂಗಾರು, ಹಿಂಗಾರು ಬೆಳೆ ಹಾನಿ ಪರಿಹಾರಕ್ಕಾಗಿ ರೈತರು ಪರದಾಡಿದರು. ಹೋರಾಟ ಮಾಡಿ, ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ನಂತರ ಅಲ್ಪ ಪ್ರಮಾಣದ ಪರಿಹಾರ ಪಡೆಯುವಂತಾಗಿದೆ.

ಜಿಲ್ಲೆಯಲ್ಲಿ ಮುಂಗಾರಿನಲ್ಲಿ 12,254 ಹೆಕ್ಟೆರ್ ಬೆಳೆ ನಷ್ಟ ಉಂಟಾಗಿತ್ತು. ಎನ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರ ಜಿಲ್ಲೆಯ 25,033 ರೈತರಿಗೆ 12.03 ಕೋಟಿ ರೂ. ಪರಿಹಾರ ನೀಡುವುದಾಗಿ ಜಿಲ್ಲಾಡಳಿತ ಪಟ್ಟಿ ಸಿದ್ಧಪಡಿಸಿ, ಪರಿಹಾರ ಘೋಷಿಸಿತ್ತು. ಹಿಂಗಾರು ಬೆಳೆ ಹಾನಿ ವರದಿ ಇನ್ನೂ ಸಿದ್ಧವಾಗಿಲ್ಲ. ಈವರೆಗೆ ಸುಮಾರು 7 ಕೋಟಿ ಪರಿಹಾರ ದೊರೆತಿದ್ದು, ಇನ್ನೂ ಸುಮಾರು 35 ಕೋಟಿ ರೂ. ಬರಬೇಕಿದೆ.

ರೈತರ ಪ್ರತಿಭಟನೆಯ ಕಾವು

ಜಿಲ್ಲೆಯಲ್ಲಿ 2024ರಲ್ಲೂ ರೈತ ಸಂಘ ಹೋರಾಟಕ್ಕೆ ಧುಮುಕಿತ್ತು. ಆರಂಭದಲ್ಲಿ ಬರ, ಬೆಳೆಹಾನಿ, ವಿಮಾ ಪರಿಹಾರಕ್ಕೆ ಪ್ರತಿಭಟಿಸಿದ್ದರು. ವರ್ಷಾಂತ್ಯದಲ್ಲಿ ಡಿಸಿ ಕಚೇರಿ ಎದುರು 11 ದಿನಗಳವರೆಗೆ ಅಹೋರಾತ್ರಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದರು. ನಂತರವೇ ಕೆಲವು ಬೇಡಿಕೆ ಈಡೇರಿದ್ದವು. ತಾಲೂಕಿನ ಸಂಗೂರ ಗ್ರಾಮದ ಜಿ.ಎಂ. ಸಕ್ಕರೆ ಕಾರ್ಖಾನೆಯವರು ಎರಡು ತಿಂಗಳ ಕಬ್ಬಿನ ಬಾಕಿ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ಜನವರಿ 6ರಂದು ರೈತರು ಫ್ಯಾಕ್ಟರಿಗೆ ಬೀಗ ಹಾಕಿ ಪ್ರತಿಭಟಿಸಿದ್ದರು. ಸುಮಾರು 1,500 ರೈತರಿಗೆ ಬರಬೇಕಿರುವ 50 ಕೋಟಿ ರೂ.ಗೂ ಅಧಿಕ ಹಣ ಪಾವತಿಗೆ ಆಗ್ರಹಿಸಿದ್ದರು. ಪರಿಣಾಮ ಹಂತ ಹಂತವಾಗಿ ಹಣ ಬಿಡುಗಡೆಯಾಯಿತು.

ಹೋರಿ ಹಬ್ಬದ ಕಿಚ್ಚು

ಎಂದಿನಂತೆ ಈ ವರ್ಷವೂ ದೀಪಾವಳಿ ಬಲಿಪಾಢ್ಯದಿಂದ ಹೋರಿ ಹಬ್ಬ ಆರಂಭವಾಗಿದ್ದು, ಹಾನಗಲ್ಲ ತಾಲೂಕಿನಲ್ಲಿ ಹೋರಿ ಹಬ್ಬಕ್ಕೆ ಒಂದು ಬಲಿಯಾಗಿದೆ. ಕೆಲವೆಡೆ ಅವಘಡಗಳು ಸಂಭವಿಸಿ ಹಲವರು ಗಾಯಗೊಂಡಿದ್ದಾರೆ. ಕೆಲ ಆಯೋಜಕರು ಷರತ್ತುಗಳನ್ನು ಪಾಲಿಸದೇ ನಿರ್ಲಕ್ಷೃ ತೋರಿದ ಆರೋಪವಿದೆ.

ಕಪ್ಪು ಚುಕ್ಕೆಯಾದ ಬ್ಯಾಡಗಿ ಎಪಿಎಂಸಿ ಮಾರ್ಕೆಟ್ ದಾಂಧಲೆ

ವಿಶ್ವ ಪ್ರಸಿದ್ಧ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಮಾರ್ಚ್ 11ರಂದು ಸಂಭವಿಸಿದ ದಾಂಧಲೆ ಪ್ರಕರಣ 2024ರಲ್ಲಿ ಜಿಲ್ಲೆಗೆ ಕಪ್ಪು ಚುಕ್ಕೆಯಂತಾಯಿತು. ದರ ಕುಸಿತವಾಗಿದೆ ಎಂದು ಆಕ್ರೋಶಗೊಂಡ ರೈತರು ಏಕಾಏಕಿ ಎಪಿಎಂಸಿ ಆಡಳಿತ ಕಚೇರಿಗೆ ನುಗ್ಗಿ ಗಲಾಟೆ ನಡೆಸಿದ್ದರು.

ಸಾವಿರಾರು ರೈತರ ಆಕ್ರೋಶಕ್ಕೆ ಅಕ್ಷರಶಃ ಮಾರುಕಟ್ಟೆ ರಣಾಂಗಣವಾಗಿ ಮಾರ್ಪಟ್ಟಿತ್ತು. ಪೊಲೀಸರ ಮೇಲೆಯೂ ಹಲ್ಲೆ ನಡೆದಿತ್ತು. ಘಟನೆಯಲ್ಲಿ ಪೊಲೀಸರು, ಪತ್ರಕರ್ತರು, ಅಗ್ನಿಶಾಮಕ ಸಿಬ್ಬಂದಿ ಸೇರಿ 10ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. 2 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿ ಹಾನಿಗೀಡಾಗಿತ್ತು. ಪೊಲೀಸರು ನಾಲ್ಕು ಪ್ರಕರಣ ದಾಖಲಿಸಿಕೊಂಡು 80ಕ್ಕೂ ಅಧಿಕ ಆರೋಪಿಗಳನ್ನು ಬಂಧಿಸಿದ್ದರು. ನಂತರ ಎಸ್‌ಪಿ ಅಂಶುಕುಮಾರ ನೇತೃತ್ವದ ತಂಡ ಪರಿಸ್ಥಿತಿ ತಿಳಿಗೊಳಿಸಿತ್ತು. ಕೆಲ ದಿನಗಳ ನಂತರ ಮಾರುಕಟ್ಟೆ ಯಥಾಸ್ಥಿತಿಗೆ ಬಂತು.

ಗಡವು ಮೀರಿದ ಎಂವಿಎಸ್ ಕಾಮಗಾರಿ

ಜಿಲ್ಲೆಯಲ್ಲಿ 1,400 ಕೋಟಿ ರೂ. ವೆಚ್ಚದಲ್ಲಿ ಆರಂಭಿಸಲಾಗಿರುವ ತಡಸ, ಆಣೂರ ಹಾಗೂ ಹಂಸಭಾವಿ ಬಹುಗ್ರಾಮ ಕುಡಿಯುವ ನೀರಿನ (ಎಂವಿಎಸ್) ಯೋಜನೆಗಳನ್ನು ಡಿಸೆಂಬರ್ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಇದರಿಂದ ಜಿಲ್ಲೆಯ 450 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಬಹುದಾಗಿದೆ. ಈಗಾಗಲೇ ಅವಧಿ ಪೂರ್ಣಗೊಂಡಿದ್ದರೂ ಕಾಮಗಾರಿ ಮಾತ್ರ ಶೇ.60, 70ರಷ್ಟೂ ಆಗಿಲ್ಲ. ಕೆಲಸವ ವೇಘ ಹೆಚ್ಚಿಸಿ ವರ್ಷಾಂತ್ಯದಲ್ಲಿ ಪೂರ್ಣಗೊಳಿಸಿ ಎಂದು ಸೂಚಿಸಿದ್ದರೂ ವೇಗ ಹೆಚ್ಚಿಲ್ಲ.

2,793 ಮನೆಗಳಿಗೆ ಹಾನಿ

ಮುಂಗಾರು ಮಳೆಗೆ ಜಿಲ್ಲೆಯಲ್ಲಿ ಒಟ್ಟು 2,793 ಮನೆಗಳಿಗೆ ಹಾನಿಯಾದ ಕುರಿತು ಆಯಾ ತಹಸೀಲ್ದಾರರು ಪ್ರಾಥಮಿಕ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದ್ದರು. ನಂತರ ಜಂಟಿ ಸಮೀಕ್ಷೆ ವರದಿಯಲ್ಲಿ 795 ಮನೆಗಳ ಅರ್ಜಿಗಳು ಮಾತ್ರ ಸ್ವೀಕೃತಗೊಂಡು, 1,998 ಅರ್ಜಿಗಳು ತಿರಸ್ಕೃತಗೊಂಡಿವೆ. ಹಾಗಾಗಿ, ಜಿಲ್ಲಾಡಳಿತ 795 ಮನೆಗಳಿಗೆ 3.72 ಕೋಟಿ ರೂ. ಬಿಡುಗಡೆ ಮಾಡಿದೆ.

ವರುಣನ ಆರ್ಭಟಕ್ಕೆ ಆರು ಸಾವು

ಸವಣೂರ ತಾಲೂಕು ಮಾದಾಪುರದಲ್ಲಿ ಜು.19ರಂದು ಮನೆ ಛಾವಣಿ ಕುಸಿದು ಬಿದ್ದು ಒಂದೂವರೆ ವರ್ಷದ ಅಮೂಲ್ಯ ಹಾಗೂ ಅನುಶ್ರೀ, ಚನ್ನಮ್ಮ ಹರಕುಣಿ, ಯಲ್ಲವ್ವ (60) ಮೃತಪಟ್ಟಿದ್ದರು. ಹಿರೇಕೆರೂರ ಪಟ್ಟಣದಲ್ಲಿ ಜು.22ರಂದು ಬೈಕ್ ಮೇಲೆ ಹೊರಟಿದ್ದವರ ಮೇಲೆ ಮರ ಬಿದ್ದು ಹೆಸ್ಕಾಂ ಉದ್ಯೋಗಿಗಳಾದ ಮಂಜಪ್ಪ ಪುಟ್ಟಲಿಂಗಣ್ಣನವರ (35) ಹಾಗೂ ಹನುಮಂತಪ್ಪ ನಾಮದೇವ (25) ಜೀವ ಕಳೆದುಕೊಂಡಿದ್ದರು. ಅಕ್ಟೋಬರ್‌ನಲ್ಲಿ ಹಾವೇರಿ ಪಿಬಿ ರಸ್ತೆಯ ಪಕ್ಕದ ಕಾಲುವೆಯಲ್ಲಿ ಮಳೆ ಸಂದರ್ಭದಲ್ಲಿ 10 ವರ್ಷದ ಬಾಲಕ ನಿವೇದನ ಗುಡಗೇರಿ ಕಾಲುಜಾರಿ ಕಾಲುವೆಯಲ್ಲಿ ಬಿದ್ದು ಕೊಚ್ಚಿ ಹೋಗಿ ಮೃತಪಟ್ಟಿದ್ದ.

ರಸ್ತೆ, ಸೇತುವೆಗಳಿಗೆ ಹಾನಿ

2024ರಲ್ಲಿ ಉಂಟಾದ ಮಳೆ, ಪ್ರವಾಹಕ್ಕೆ ಹತ್ತಾರು ಸೇತುವೆಗಳು, ರಸ್ತೆಗಳು ಹಾನಿಗೀಡಾಗಿವೆ. ರಾಷ್ಟ್ರೀಯ, ರಾಜ್ಯ ಹೆದ್ದಾರಿ ಸೇರಿದಂತೆ ಹಳ್ಳಿಗಳ ರಸ್ತೆಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳು ಸೃಷ್ಟಿಯಾಗಿವೆ. ಅಲ್ಲಲ್ಲಿ ತೇಪೆ ಹಚ್ಚಲಾಗಿದೆ ಬಿಟ್ಟರೆ ಸಮಗ್ರ ಕಾಮಗಾರಿ ಆಗುತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net