

ಹಾವೇರಿ: ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಎಚ್.ಕಾಂತರಾಜು ವರದಿಯನ್ನು ಜಾರಿಗೊಳಿಸಬೇಕು ಎಂದು ಹಿಂದುಳಿದ ಹಾಗೂ ಅತಿ ಹಿಂದುಳಿದ ವರ್ಗಗಳ ಜನ ಜಾಗೃತಿ ವೇದಿಕೆ ಅಧ್ಯಕ್ಷ ಆರ್.ಮೋಹನ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಆದೇಶದ ಮೇರೆಗೆ 2014ರಲ್ಲಿ ಎಚ್.ಕಾಂತರಾಜು ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನೇಮಕಗೊಂಡಿತು. ಈ ಆಯೋಗ ಹಿಂದುಳಿದ ವರ್ಗಗಳ ಜಾತಿ, ರಾಜಕೀಯ ಅಧಿಕಾರ, ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಮಾಹಿತಿ ಸಂಗ್ರಹಿಸಿ ವೈಜ್ಞಾನಿಕವಾಗಿ ಅಧ್ಯಯನ ನಡೆಸಿತು. 2018ರಲ್ಲಿ ಸಿಎಂ ಸಿದ್ದರಾಮಯ್ಯನವರಿಗೆ ವರದಿ ಸಲ್ಲಿಸುವ ಸಂದರ್ಭದಲ್ಲಿ ರಾಜಕೀಯ ಬದಲಾವಣೆಯಿಂದ ಸಾಧ್ಯವಾಗಲಿಲ್ಲ ಎಂದರು.
ಈ ವರದಿ ತಯಾರಿಸಲು 158 ಕೋಟಿ ರೂ. ವೆಚ್ಚವಾಗಿದೆ. ನಂತರ ಅಧಿಕಾರಕ್ಕೆ ಬಂದ ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸರ್ಕಾರಗಳೂ ಈ ಬಗ್ಗೆ ಗಮನ ಹರಿಸಲಿಲ್ಲ. ನಂತರದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಜಯಪ್ರಕಾಶ ಹೆಗ್ಡೆ ನೇಮಕಗೊಂಡರು. ಮೂರು ವರ್ಷ ಸುಮ್ಮನಿದ್ದು ಅವಧಿ ಮುಗಿಯುವಾಗ ವರದಿ ಬಿಡುಗಡೆ ಮಾಡಲಾಗುವುದು ಎಂದರು. ಇದೀಗ ವರದಿ ಬಿಡುಗಡೆಗೆ ಸಿಎಂ ಸಿದ್ದರಾಮಯ್ಯನವರು ಆಸಕ್ತಿ ತೋರಿದ್ದಾರೆ. ಇದಕ್ಕೆ ಕೆಲವರು ಅಡ್ಡಿಪಡಿಸಲು ಮುಂದಾಗಿರುವುದು ಸರಿಯಲ್ಲ. ಎಲ್ಲರೂ ಈ ವರದಿ ಬಿಡುಗಡೆಗೆ ಸಹಕರಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಶಿವಾನಂದ ಈರಿಗೊಂಡ, ಪ್ರಶಾಂತ ಕ್ಷತ್ರಿಯ, ಶಿವರಾಜ ಶಿವಣ್ಣ, ಕಾಳಪ್ಪ ಬಡಿಗೇರ, ಮೊಹಮ್ಮದ್ ಜಾಫರ್, ವಿನಾಯಕ ವಡವಿ, ಫಕೀರೇಶ ಬಾರ್ಕಿ, ಚನ್ನಪ್ಪ ಬಾರ್ಕಿ, ಉತ್ತೇಶ ಶಂಕರಘಟ್ಟ, ನರೇಂದ್ರಬಾಬು ಜಾಧವ, ರಮೇಶ ಗೊಲ್ಲರ, ಬಸವಣ್ಣೆಪ್ಪ ಕೂಡಲ, ಇತರರಿದ್ದರು.