

ಹಾವೇರಿ: ವಿವಿಧ ಜಾತಿ, ಮತ, ಪಂಥಗಳನ್ನು ಹೊಂದಿರುವ ಭಾರತ ಭಾವೈಕ್ಯತೆಯ ನಾಡು. ನಾವೆಲ್ಲ ಇಲ್ಲಿ ಸೌಹಾರ್ದತೆಯಿಂದ ಬದುಕುತ್ತಿದ್ದೇವೆ. ಆದರೂ ಸಹ ನಮ್ಮ ತಾಳ್ಮೆ ಪರೀಕ್ಷಿಸುವ ಅನೇಕ ಸಂದರ್ಭಗಳು ಎದುರಾಗುತ್ತಲೇ ಇವೆ. ಇಂತಹ ಸಂದರ್ಭದಲ್ಲಿ ನಾವು ಜಾಗೃತರಾಗದಿದ್ದರೆ ಭವಿಷ್ಯದ ಭಾರತಕ್ಕೆ ಕುತ್ತು ಬರುವ ಸಂಭವವಿದೆ ಎಂದು ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಹಿಂದು ಸಮಾಜಕ್ಕೆ ಎಚ್ಚರಿಕೆ ನೀಡಿದರು.
ಬಾಂಗ್ಲಾ ದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ನಗರದ ಹುಕ್ಕೇರಿ ಮಠದಲ್ಲಿ ಶುಕ್ರವಾರ ಜಿಲ್ಲಾ ಜಾಗೃತ ನಾಗರಿಕ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆ ಹಾಗೂ ಪಂಜಿನ ಮೆರವಣಿಗೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹಿಂದು ಯುವಕರು ದುಶ್ಚಟಗಳಿಗೆ ಬಲಿಯಾಗದೇ ಕಬಡ್ಡಿ, ಕುಸ್ತಿಯಂಥ ಕ್ರೀಡೆಗಳಲ್ಲಿ ಪಾಲ್ಗೊಂಡು ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು. ಬಾಂಗ್ಲಾದೇಶದಲ್ಲಿ ಭಾರತದ ಮುಖ್ಯಸ್ಥರನ್ನು ಬಂಧಿಸಿದ್ದನ್ನು ಖಂಡಿಸುತ್ತೇವೆ ಎಂದರು.
ಇದೊಂದು ಆತ್ಮವಲೋಕನಾ ಸಭೆ. ನಾವೆಲ್ಲರೂ ಜಾಗೃತರಾಗಿ ಮುಂದಿನ ಹೆಜ್ಜೆ ಇಡಬೇಕು. ನೆರೆಯ ದೇಶದಲ್ಲಿ ಜಾತಿ ನಿಂದನೆ, ಧರ್ಮ ನಿಂದನೆ ಮಾಡಿ ಪ್ರಾಣ ತೆಗೆಯುವ ಕೆಲಸ ನಡೆದಿದೆ. ನಮ್ಮ ರಾಷ್ಟ್ರದಿಂದ ನೀಡುವ ಅನೇಕ ಸವಲತ್ತುಗಳನ್ನು ನಿಲ್ಲಿಸಿದರೆ ಬೇರೆ ದೇಶಗಳು ಸಂಕಷ್ಟ ಎದುರಿಸುತ್ತವೆ. ನಾವು ನಮಗೇನು ಆಗಿಲ್ಲ ಎಂಬ ಭಾವನೆಯಿಂದ ಮೈಯಿಗೆ ಎಣ್ಣೆ ಹಚ್ಚಿಕೊಂಡು ಕೂರಬಾರದು. ಬೇರೆ-ಬೇರೆ ದೇಶದಲ್ಲಿ ನೆಲೆಸಿರುವ ಹಿಂದುಗಳಿಗೆ ಅಡಚಣೆ ಆಗುತ್ತಿದೆ. ನಮ್ಮ ದೇಶದಲ್ಲಿ ಇಂತಹ ಸ್ಥಿತಿ ಬರಬಹುದು. ಹೀಗಾಗಿ ಈಗಲೇ ಎಚ್ಚೆತ್ತುಕೊಳ್ಳಬೇಕು ಎಂದು ಕರೆ ನೀಡಿದರು.
ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿ, ಭವ್ಯ ಪರಂಪರೆ ಹೊಂದಿ ಆಶ್ರಯ, ಅನ್ನ ನೀಡಿದ ದೇಶ ನಮ್ಮದು. ನಮ್ಮ ದೇಶದಲ್ಲಿ ಹುಟ್ಟಿ ಹೋಗಿರುವ ಹಿಂದುಗಳ ಮೇಲೆ ದೌರ್ಜನ್ಯ ಆಗುತ್ತಿರುವುದು ಖಂಡನೀಯ. ಸಂಸ್ಕೃತಿ, ಸಂಸ್ಕಾರ, ಧರ್ಮ ನಾಶವಾದರೆ ಭಾರತ ದೇಶ ನಾಶವಾಗುತ್ತೆ. ಹೀಗಾಗಿ ಯುವಕರು ಎಚ್ಚೆತ್ತುಕೊಳ್ಳಬೇಕು ಎಂದರು.
ಅಗಡಿ ಆನಂದವನದ ಶ್ರೀ ಗುರುದತ್ತಮೂರ್ತಿ ಚಕ್ರವರ್ತಿ ಸ್ವಾಮೀಜಿ ಮಾತನಾಡಿ, ನಮ್ಮಲ್ಲೇ ನಮಗೆ ಜೈಕಾರ ಕೂಗಲು ಮುಜುಗರ ಎದುರಿಸುವ ಪರಿಸ್ಥಿತಿ ಬಂದಿದೆ. ಹಿಂದುಗಳು ಒಂದಾಗಿ ಕೂಗಿದರೆ ನೆರೆಯ ಬಾಂಗ್ಲಾದೇಶಕ್ಕೆ ಕೇಳಬೇಕು. ನಮ್ಮ ದೇಶದ ಹಿಂದುಗಳು ಇನ್ನಾದರೂ ಜಾಗೃತರಾಗಲಿ ಎಂದರು.
ಅಕ್ಕಿಆಲೂರಿನ ಶ್ರೀ ಶಿವಬಸವ ಸ್ವಾಮೀಜಿ ಮಾತನಾಡಿ, ನಮ್ಮ ಅಭಿಮಾನ ನಮಗೆ ಅಷ್ಟೇ ಸಿಮೀತವಾಗದೇ ನಮ್ಮ ಅಭಿಮಾನ ದೇಶಕ್ಕೆ ಇರಬೇಕು. ದೇಶದ ಪ್ರತಿಯೊಬ್ಬರು ಸ್ವಾಭಿಮಾನದ ಹೋರಾಟ ಮಾಡುವುದು ಇಂದಿನ ಅಗತ್ಯವಿದೆ ಎಂಬುದನ್ನು ಅರಿತುಕೊಳ್ಳಬೇಕು. ಬಾಂಗ್ಲಾದೇಶದಲ್ಲಿ ನಡೆದ ಘಟನೆ ಮತ್ತೆ ಅಲ್ಲಿ ನಡೆಯಬಾರದು ಎಂಬ ಸಂದೇಶ ಕಳುಹಿಸುವ ಅಗತ್ಯವಿದೆ ಎಂದರು.
ಗೌರಿಮಠದ ಶ್ರೀ ಶಿವಯೋಗಿ ಶಿವಾಚಾರ್ಯರು, ಹರಸೂರು ಬಣ್ಣದಮಠದ ಶ್ರೀ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಚಿಂತಕ ಶ್ರೀಕಾಂತ ಹೊಸಕೇರಿ ಮಾತನಾಡಿದರು.
ವೇದಿಕೆ ಮುಂಭಾಗದಲ್ಲಿ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ, ವೇದಿಕೆ ಮೇಲೆ ಪಿ.ಡಿ.ಶಿರೂರ, ಪವನ ಬಹದ್ದೂರ ದೇಸಾಯಿ, ಪ್ರಭಾಕಾರರಾವ್ ಮಂಗಳೂರು, ಪರಶುರಾಮ ಹರಪನಹಳ್ಳಿ, ನಾಗೇಂದ್ರ ಕಟಕೋಳ, ಮತ್ತಿತರ ಪ್ರಮುಖರು ಭಾಗವಹಿಸಿದ್ದರು.
ಕೋಟ್:
ಬೇರೆಯವರ ಮನೆಗೆ ಬೆಂಕಿ ಬಿದ್ದಿದೆ. ನಮಗೇನೂ ಆಗಿಲ್ಲ ಎಂದು ಮನೆಯ ಬಾಗಿಲು ಹಾಕಿಕೊಂಡು ಕೂರುತ್ತಿದ್ದೇವೆ. ಆ ಬೆಂಕಿ ನಮಗೂ ತಾಗುತ್ತೆ ಎಂಬ ಜ್ಞಾನ ಇರಬೇಕು. ಮಠಾಧೀಶರು ಒಂದಾದಾಗ ಮಾತ್ರ ಆ ದೇಶಕ್ಕೆ ಸಂದೇಶ ಕೊಡಲು ಸಾಧ್ಯ. ಸರ್ಕಾರದಿಂದ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಹಚ್ಚುವ ಕಾರ್ಯ ನಡೆಯುತ್ತಿದೆ. ಇದು ಸರಿಯಲ್ಲ.
- ಶ್ರೀ ಗುರುಲಿಂಗ ಸ್ವಾಮೀಜಿ, ಅಗಡಿ ಅಕ್ಕಿಮಠ
ಪಂಜಿನ ಮೆರವಣಿಗೆ
ಹುಕ್ಕೇರಿ ಮಠದಿಂದ ಆರಂಭವಾದ ಪಂಜಿನ ಮೆರವಣಿಗೆ ಎಂಜಿ ರಸ್ತೆ, ದ್ಯಾಮವ್ವದೇವಿ ಪಾದಗಟ್ಟೆ ರಸ್ತೆ, ಜೆಪಿ ರಸ್ತೆ ಮಾರ್ಗವಾಗಿ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಮುಕ್ತಾಯವಾಯಿತು. ರ‌್ಯಾಲಿ ವೇಳೆ ಭಾರತ ಹಾಗೂ ಹಿಂದುಗಳ ಪರ ಜೈಕಾರ ಹಾಕಿದರು. ಜಿಲ್ಲಾಧಿಕಾರಿಯವರ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.