

ಹಾವೇರಿ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ನಿಮಿತ್ತ ಹಮ್ಮಿಕೊಂಡಿರುವ ಸೇವಾ ಪಾಕ್ಷಿಕದ ನಿಮಿತ್ತ ಜಿಲ್ಲೆಯಲ್ಲಿ ಸೆ.17ರಿಂದ ಅಕ್ಟೋಬರ್ 2ರವರೆಗೆ ‘ಸ್ವಸ್ತ ನಾರಿ ಸಶಕ್ತ ಪರಿವಾರ ಅಭಿಯಾನ’ ಹಮ್ಮಿಕೊಳ್ಳಲಾಗಿದ್ದು, ಸೆ.17ರಂದು ಬೆಳಗ್ಗೆ 11.30ಕ್ಕೆ ಜಿಲ್ಲಾಸ್ಪತ್ರೆಯಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಅವರು ಅಭಿಯಾನಕ್ಕೆ ಚಾಲನೆ ನೀಡುವರು ಎಂದು ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹಿಮ್ಸ್) ಡೀನ್ ಡಾ. ಪ್ರದೀಪಕುಮಾರ ತಿಳಿಸಿದರು.
ನಗರದ ಜಿಲ್ಲಾಸ್ಪತ್ರೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರು ಮತ್ತು ಬಾಲಕಿಯರ ಮಾನಸಿಕ ಮತ್ತು ದೈಹಿಕ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಹಿಮ್ಸ್ ಹಾಗೂ ಜಿಲ್ಲಾಸ್ಪತ್ರೆಯ ತಜ್ಞ ವೈದ್ಯರು ಭಾಗವಹಿಸಲಿದ್ದಾರೆ. ಗರ್ಭಿಣಿಯರು, ಬಾಣಂತಿ, ಗೃಹಿಣಿಯರು, ವೃದ್ದೆಯರು, ಮಕ್ಕಳ ಆರೋಗ್ಯ ತಪಾಸಣೆ, ರಕ್ತ ತಪಾಸಣೆ, ಇತರೆ ಆರೋಗ್ಯ ತಪಾಸಣೆಯನ್ನು ಉಚಿತವಾಗಿ ಮಾಡಲಾಗುತ್ತದೆ. ವಿಶೇಷ ಶಿಬಿರಗಳು ಜತೆಗೆ ಎಲ್ಲ ಆಸ್ಪತ್ರೆಗಳಲ್ಲಿ ಹಂತ ಹಂತವಾಗಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಉಚಿತ ಶಿಬಿರ ಆಯೋಜನೆ :
ಜಿಲ್ಲೆಯಲ್ಲಿ ಅಭಿಯಾನದ ಅಂಗವಾಗಿ ವಿವಿಧೆಡೆ ಮಹಿಳೆಯರಿಗಾಗಿ ಐದು ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗಿದೆ. ಅಲ್ಲಿಗೆ ತಜ್ಞ ವೈದ್ಯರು ಆಗಮಿಸಲಿದ್ದು, ಬೆಳಗ್ಗೆ 10ರಿಂದ ಸಂಜೆ 5ರವರೆಗೆ ತಪಾಸಣೆ ನಡೆಸಲಿದ್ದಾರೆ. ಸೆ.20ರಂದು ಬಂಕಾಪುರ ಸಮುದಾಯ ಆರೋಗ್ಯ ಕೇಂದ್ರ, ಸೆ.22ರಂದು ಗುತ್ತಲ, ಸೆ.23ರಂದು ರಟ್ಟಿಹಳ್ಳಿ, ಸೆ.25ರಂದು ಮಾಸೂರು, ಸೆ.27ರಂದು ಅಕ್ಕಿಆಲೂರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉಚಿತ ಆರೋಗ್ಯ ಶಿಬಿರ ಆಯೋಜಿಸಲಾಗಿದೆ ಎಂದು ಡಿಎಚ್‌ಒ ಡಾ.ಎಂ.ಜಯಾನಂದ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಜಯಾನಂದ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್.ಹಾವನೂರ, ಇತರರಿದ್ದರು.